ಕೆರೆಕುಂಬ್ರಿ ಗ್ರಾಮದಲ್ಲಿ ಚಾಪೆ ಮೇಲೆ ಕುಳಿತು ಸಿದ್ದಿ ಜನಾಂಗದವರ ಕಷ್ಟಸುಖ ವಿಚಾರಿಸಿದ ಸಚಿವ ಶ್ರೀರಾಮುಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 09, 2022 | 10:30 AM

ಶೀಘ್ರದಲ್ಲೇ ಯಲ್ಲಾಪುರ ತಾಲೂಕಿನಲ್ಲಿ ವಸತಿ ಶಾಲೆ ಆರಂಭಿಸಲಾಗುವುದು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ನುಡಿದರು.

ಕೆರೆಕುಂಬ್ರಿ ಗ್ರಾಮದಲ್ಲಿ ಚಾಪೆ ಮೇಲೆ ಕುಳಿತು ಸಿದ್ದಿ ಜನಾಂಗದವರ ಕಷ್ಟಸುಖ ವಿಚಾರಿಸಿದ ಸಚಿವ ಶ್ರೀರಾಮುಲು
ಯಲ್ಲಾಪುರ ತಾಲ್ಲೂಕಿನ ಕೆರೆಕುಂಬ್ರಿ ಗ್ರಾಮದಲ್ಲಿ ಸಚಿವ ಶ್ರೀರಾಮುಲು ಗ್ರಾಮ ವಾಸ್ತವ್ಯ
Image Credit source: Tv9Kannada
Follow us on

ಕಾರವಾರ: ಯಲ್ಲಾಪುರ ತಾಲ್ಲೂಕಿನ ಕೆರೆಕುಂಬ್ರಿ ಗ್ರಾಮದಲ್ಲಿ ಸಚಿವ ಶ್ರೀರಾಮುಲು (Sriramulu) ಗುರುವಾರ ರಾತ್ರಿ ಗ್ರಾಮವಾಸ್ತವ್ಯ ಮಾಡಿ ಗ್ರಾಮಸ್ಥರ ಕಷ್ಟಸುಖ ವಿಚಾರಿಸಿದರು. ಬುಡಕಟ್ಟು ಜನಾಂಗದ (Tribes of Karnataka) ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಚಿವರು ಭರವಸೆ ನೀಡಿದರು. ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಅವರು, ‘ಬುಡಕಟ್ಟು ಜನಾಂಗಕ್ಕೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಶೀಘ್ರದಲ್ಲೇ ಯಲ್ಲಾಪುರ ತಾಲೂಕಿನಲ್ಲಿ ವಸತಿ ಶಾಲೆ ಆರಂಭಿಸಲಾಗುವುದು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಕ್ರಮ ವಹಿಸಲಾಗುವುದು. ರಾಜ್ಯದ ಬುಡಕಟ್ಟು ಸಮುದಾಯದ ಹಾಡಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಯತ್ನಿಸುತ್ತೇನೆ. ನಮ್ಮ ಸರ್ಕಾರ ಬುಡಕಟ್ಟು, ಹಿಂದುಳಿದ ವರ್ಗಗಳ ಪರವಾಗಿದೆ. ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ ಉಳಿಸಲು ಶೀಘ್ರದಲ್ಲೇ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಮಾವೇಶ ಆಯೋಜಿಸಲಾಗುವುದು’ ಎಂದು ಅವರು ತಿಳಿಸಿದರು.

ಬೀದರ್​ನಿಂದ ಚಾಮರಾಜನಗರದವರಗೆ ಹಲವು ಜಿಲ್ಲೆಗಳಲ್ಲಿ ಹಾಡಿಗಳಲ್ಲಿ, ಬುಡಕಟ್ಟು ಜನಾಂಗದವರ ಮನೆಗೆ ಹೋಗಿ ಗ್ರಾಮವಾಸ್ತವ್ಯ ಮಾಡುತ್ತೇನೆ. ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಾತಿ ಹೆಚ್ಚು ಮಾಡಿದೆ. ಮೀಸಲಾತಿ ಸವಲತ್ತನ್ನು ಜನರು ಉಪಯೋಗಿಸಿಕೊಳ್ಳಬೇಕು ಎಂದರು.

ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ನಮ್ಮ ಸರ್ಕಾರವು ರಾಷ್ಟ್ರಪತಿಯನ್ನಾಗಿ ಮಾಡಿದೆ. ಬುಡಕಟ್ಟು ಜನಾಂಗದ ಕಲೆ ಮತ್ತು ಸಂಸ್ಕೃತಿ ಉಳಿಸುವ ಸಲುವಾಗಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಮಾವೇಶವನ್ನು ಶೀಘ್ರದಲ್ಲೇ ಮಾಡುತ್ತೇವೆ. ಅವರ ಕಲೆಗೆ, ಸಂಸ್ಕೃತಿಗೆ ಆದ್ಯತೆ ಕೊಡುತ್ತೇವೆ. ಬುಡಕಟ್ಟು ಜನಾಂಗದವರು ವಾಸ ಮಾಡುವ ಜಾಗದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನಮ್ಮ ಸರ್ಕಾರ ಕಲ್ಪಿಸಲಿದೆ ಎಂದು ಭರವಸೆ ನೀಡಿದರು.

ಗಮನ ಸೆಳೆದ ಸರಳ ನಡೆ

ಸಚಿವ ಶ್ರೀರಾಮುಲು ಅವರು ರಾಮಾ ಗಣಪತಿ ಸಿದ್ದಿ ಅವರ ಮನೆಯಲ್ಲಿ ಸರಳವಾಗಿ ಬೆಡ್​​ಶೀಟ್ ಹಾಸಿಕೊಂಡು ನೆಲದ ಮೇಲೆಯೇ ಮಲಗಿದರು. ಸಚಿವರ ಸರಳ ನಡೆ-ನುಡಿಗಳು ಸಿದ್ದಿ ಜನರ ಮೆಚ್ಚುಗೆಗೆ ಪಾತ್ರವಾಯಿತು. ಚಾಪೆಯ ಮೇಲೆ ಕುಳಿತೇ ಗ್ರಾಮಸ್ಥರೊಂದಿಗೆ ಮಾತು ಆರಂಭಿಸಿದರು. ಸಿದ್ದಿ ಜನಾಂಗ ಜಾನಪದ ಕಲೆಗಳನ್ನು ವೀಕ್ಷಿಸಿದರು. ಭಜನೆಗಳನ್ನು ಆಸಕ್ತಿಯಿಂದ ಕೇಳಿದರು. ಡೊಳ್ಳು ಕುಣಿತಕ್ಕೆ ಮೆಚ್ಚುಗೆ ಸೂಚಿಸಿದರು. ಬಳಿಕ ನೃತ್ಯಗಾರರ ಕೋಲು ಹಿಡಿದು ಅವರೊಂದಿಗೆ ಫೋಟೊ ತೆಗೆಸಿಕೊಂಡರು. ಕಾರ್ಯಕ್ರಮಕ್ಕೆ 3 ಗಂಟೆಗಳ ಕಾಲ ತಡವಾಗಿ ಬಂದಿದ್ದಕ್ಕೆ ರಾಮುಲು ಕೈಜೋಡಿಸಿ ಜನರ ಕ್ಷಮೆ ಕೋರಿದರು.

ಇದನ್ನೂ ಓದಿ: ಜನಾರ್ದನರೆಡ್ಡಿ ಮತ್ತು ನನ್ನದು ರಾಜಕೀಯಕ್ಕೂ ಮೀರಿದ ಸಂಬಂಧ: ಶ್ರೀರಾಮುಲು ಸ್ಪಷ್ಟನೆ

Published On - 8:04 am, Fri, 9 December 22