ಮನ್ ಕೀ ಬಾತ್ನಲ್ಲಿ ಉತ್ತರ ಕನ್ನಡದ ಜೇನು ಕೃಷಿಕ ಮಧುಕೇಶ್ವರ ಹೆಗಡೆಯವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
91ನೇ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜೇನು ಕೃಷಿಯ ಬಗ್ಗೆ ಮಾತನಾಡಿದ್ದು, ವಿವಿಧ ರಾಜ್ಯಗಳ ಜೇನು ಕೃಷಿ ಸಾಧಕರನ್ನು ಪರಿಚಯಿಸಿದ್ದಾರೆ.
ಉತ್ತರ ಕನ್ನಡ: 91ನೇ ಮನ್ ಕೀ ಬಾತ್ನಲ್ಲಿ (Mann Ki Baat) ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಜೇನು ಕೃಷಿಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ವಿವಿಧ ರಾಜ್ಯಗಳ ಜೇನು ಕೃಷಿ ಸಾಧಕರನ್ನು ಪರಿಚಯಿಸಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿನ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆಯವರ (Madhukeshwar Hegde) ಜೇನು ಕೃಷಿಯನ್ನು ಶ್ಲಾಘಿಸಿದ್ದಾರೆ.
ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಮಧುಕೇಶ್ವರ ಎಂಬುವವರು 50 ಜೇನು ಪೆಟ್ಟಿಗೆಗಾಗಿ ಸರಕಾರದ ಸಬ್ಸಿಡಿಯನ್ನು ಪಡೆದಿದ್ದರು. ಈಗ ಅವರ ಬಳಿ 800ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿವೆ. ಅವರು ತಮ್ಮ ಕೆಲಸದಲ್ಲಿ ಅನ್ವೇಷಣೆಗಳನ್ನು ನಡೆಸಿದ್ದಾರೆ ಎಂದಿದ್ದಾರೆ.
ಮಧುಕೇಶ್ವರ ಅವರು ಜಾಮೂನ್ ಜೇನು, ತುಳಸಿ ಜೇನು, ಆಮ್ಲಾ ಜೇನು, ಜೊತೆಗೆ ವನಸ್ಪತಿ ಜೇನನ್ನೂ ಉತ್ಪಾದಿಸುತ್ತಿದ್ದಾರೆ. ಜೇನು ಕುಂಟುಂಬ ನಿರ್ವಹಣೆ, ಜೇನಿನಿಂದ ಬೈ ಪ್ರಾಡಕ್ಟ್ ಮಾಡುವ ಮೂಲಕ ಮಧುಕೇಶ್ವರ ಎಂಬ ಅವರ ಹೆಸರಿಗೆ ಅನ್ವರ್ಥರಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಇಂದಿನ ಮನ್ ಕೀ ಬಾತ್ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಬಗ್ಗೆ ಹೆಚ್ಚಾಗಿ ಮಾತನಾಡಿದ್ದು, ಇದರೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದಿಕ್ ಔಷಧಿಗಳ ಮಹತ್ವ, ಆಟಿಕೆ ಕ್ಷೇತ್ರ, ಜಾತ್ರೆ- ಸಂಸ್ಕೃತಿಗಳ ಬಗ್ಗೆಯೂ ಮಾತನಾಡಿದ್ದಾರೆ.
ಮುಂದಿನ ಮನ್ ಕಿ ಬಾತ್ನ ವಿಷಯ ಇಂದೇ ಹೇಳಿದ ಮೋದಿ
ಇಂದು ನಾವು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತಿನೊಂದಿಗೆ ಇಂದಿನ ಮನ್ ಕಿ ಬಾತ್ ಆರಂಭಿಸಿದ್ದೆವು. ಮನ್ ಕಿ ಬಾತ್ನ ಮುಂದಿನ ಕಾರ್ಯಕ್ರಮದಲ್ಲಿ ಮುಂದಿನ 25 ವರ್ಷ ಹೇಗಿರಬೇಕು ಎನ್ನುವ ಬಗ್ಗೆ ಚಿಂತನೆ ನಡೆಸೋಣ. ನೀವು ಅಷ್ಟೇ, ನಿಮ್ಮ ಮನೆಗಳಲ್ಲಿ ಹೇಗೆ ಸ್ವಾತಂತ್ರ್ಯ ದಿನ ಆಚರಿಸಿದಿರಿ ಎನ್ನುವ ಬಗ್ಗೆ ನನ್ನೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ನರೇಂದ್ರ ಮೋದಿ ಮಾತು ಮುಗಿಸಿದರು.
ಕ್ರೀಡಾಕ್ಷೇತ್ರದಲ್ಲಿ ಮಹತ್ವದ ಸಾಧನೆ
ಭಾರತೀಯ ಕ್ರೀಡಾಪಟುಗಳ ಪಾಲಿಗೆ ಇದು ಸಂಭ್ರಮದ ಕಾಲ. ನಮ್ಮ ಸ್ಪರ್ಧಿಗಳು ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಹತ್ತಾರು ಪದಕಗಳನ್ನು ಗೆದ್ದಿದ್ದಾರೆ. ಅವರೆಲ್ಲರಿಗೂ ದೇಶದ ಪರವಾಗಿ ಅಭಿನಂದನೆಗಳು. ಫಿಫಾ ಮಹಿಳಾ ಫುಟ್ಬಾಲ್ ವರ್ಲ್ಡ್ಕಪ್ನಲ್ಲಿಯೂ ಭಾರತ ಸೆಣೆಸಲಿದೆ.
ಭಾರತೀಯ ಉತ್ಪಾದಕರ ಗೊಂಬೆಗಳನ್ನೇ ಖರೀದಿಸಿ
ಬೆಂಗಳೂರಿನಲ್ಲಿ ಶುಮ್ಮಿ ಟಾಯ್ಸ್ ಹೆಸರಿನ ಸ್ಟಾರ್ಟ್ ಅಪ್ ಪರಿಸರ ಸ್ನೇಹಿ ಗೊಂಬೆಗಳನ್ನು ತಯಾರಿಸುತ್ತಿದೆ. ಅದೇ ರೀತಿ ಪುಣೆಯ ಕಂಪನಿಯೊಂದು ಮಕ್ಕಳಿಗೆ ಇಷ್ಟವಾಗುವ ಫನ್ ಚಟುವಟಿಕೆಗಳ ಮೂಲಕ ಗಣಿತ-ವಿಜ್ಞಾನ ಕಲಿಸುವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು. ನೀವು ದಯವಿಟ್ಟು ಭಾರತೀಯ ಉತ್ಪಾದಕರಿಂದಲೇ ಗೊಂಬೆ, ಫಜಲ್ಸ್, ಗೇಮ್ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಎಲ್ಲ ಪೋಷಕರಲ್ಲಿ ಮನವಿ ಮಾಡುತ್ತೇನೆ.
Published On - 3:12 pm, Sun, 31 July 22