ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ
ಜೆಡಿಎಸ್ ನಾಯಕಿ ಪುತ್ರನ ಕಿರುಕುಳದಿಂದ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗಳ ಮೇಲೆ ಅತ್ಯಾಚಾರ ನಡೆಸಿ ಆತ್ಮಹತ್ಯೆಗೆ ಪ್ರಚೋದಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿ, ಮರು ಪೋಸ್ಟ್‌ಮಾರ್ಟಮ್‌ಗೆ ಆಗ್ರಹಿಸಿದ್ದರು. ಅದರಂತೆ ಶವ ಹೊರತೆಗೆದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದೆ. ಘಟನೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಆರೋಪಿ ಬಂಧನಕ್ಕೆ ಆಗ್ರಹ ಹೆಚ್ಚಿದೆ.

ಉತ್ತರ ಕನ್ನಡ, ಜನವರಿ 20: JDS ನಾಯಕಿಯ ಪುತ್ರನ ಕಿರುಕುಳದಿಂದ ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮಗಳಿಗೆ ಕಿರುಕುಳ ಮಾತ್ರ ನೀಡಿಲ್ಲ, ಆಕೆಯ ಮೇಲೆ ಅತ್ಯಾಚಾರ ಕೂಡ ನಡೆಸಲಾಗಿದೆ. ವಿಷಯವನ್ನು ಮನೆಯಲ್ಲಿ ಹೇಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಜೊತೆಗೆ ಮತ್ತೊಮ್ಮೆ ಪೋಸ್ಟ್ಮಾರ್ಟಮ್ ಮಾಡಲು ಆಗ್ರಹಿಸಿದ್ದರು. ಹೀಗಾಗಿ ಯುವತಿ ಶವ ಹೊರತೆಗೆದು ಮಗದೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕಾರವಾರ ತಾಲೂಕಿನ ಕದ್ರಾ ಗ್ರಾಮದ ಸೇಂಟ್ ಆಂಥೋನಿ ಸ್ಮಶಾನದಲ್ಲಿ ಹೂಳಲಾಗಿದ್ದ ಯುವತಿಯ ಶವ ಹೊರತೆಗೆದು ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದ್ದು, ಈ ವೇಳೆ ಯುವತಿಯ ಪೋಷಕರು ಮತ್ತು ಕ್ರಿಶ್ಚಿಯನ್ ಫಾದರ್ ಮಾತ್ರ ಅಧಿಕಾರಿಗಳ ಜೊತೆ ಉಪಸ್ಥಿತರಿದ್ದರು. JDS ನಾಯಕಿ ಚೈತ್ರಾ ಕೊಠಾರ್‌ಕರ್ ಪುತ್ರ ಚಿರಾಗ್ ಕಿರುಕುಳ ತಾಳಲಾರದೇ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರೀತಿಸುವಂತೆ ಯುವತಿಗೆ ಕಾಟ ನೀಡಿದ್ದಲ್ಲದೇ ಅತ್ಯಾಚಾರ ಮಾಡಿರುವ ಕುರಿತು ಕುಟುಂಬ ದೂರು ನೀಡಿತ್ತು.
ಇದನ್ನೂ ಓದಿ: ಪ್ರೀತಿಸುವಂತೆ ಕಾಟ; ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ
ಡಿಸಿ ಕಚೇರಿ ಎದುರು ಪ್ರತಿಭಟನೆ
ಇನ್ನು ಪ್ರಕರಣ ಸಂಬಂಧ ಆರೋಪಿ ಚಿರಾಗ್ ಕೊಠಾರ್‌ಕರ್ ಬಂಧನಕ್ಕೆ ಆಗ್ರಹಿಸಿ ಕಾರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ಕೂಡ ನಡೆದಿದೆ. ಕ್ರಿಶ್ಚಿಯನ್ ಮುಖಂಡರು, ಕದ್ರಾ ಗ್ರಾಮಸ್ಥರು ಸೇರಿದಂತೆ 200ಕ್ಕೂ ಹೆಚ್ಚು ಜನ ಈ ವೇಳೆ ಭಾಗಿಯಾಗಿದ್ದು, ಆರೋಪಿ ಬಂಧನ ವಿಳಂಬ ಆಗ್ತಿರೋದಕ್ಕೆ ಕಿಡಿ ಕಾರಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ನೀಡಲು ವ್ಯತ್ಯಯ ಆಗಿದ್ದೇಕೆ? ಯುವತಿಯ ದೇಹದ ಮೇಲಿನ ಗಾಯ ಲವ್ ಬೈಟ್ ಅಂತ ವರದಿ ಕೊಟ್ಟ ವೈದ್ಯ ಯಾರು? ಮೃತ ಯುವತಿಯ ಖಾಸಗಿ ಭಾಗದ ಮೇಲಿನ ಗಾಯ ಲವ್ ಬೈಟ್ ಅಂತ ವರದಿ ಕೊಟ್ಟಿದ್ಯಾಕೆ? ಪಿಎಸ್ಐ ಸುನೀಲ್ರನ್ನು ಈ ಪ್ರಕರಣದಲ್ಲಿ ಅಮಾನತು ಮಾಡಿದ್ಯಾಕೆ? ಹಾಗಾದ್ರೆ ಅವರ ಮೇಲಿನ ಅಧಿಕಾರಿಗಳ ಮೇಲೆ ಯಾಕೆ ಕ್ರಮ ಇಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಈ ವೇಳೆ ವ್ಯಕ್ತವಾಗಿವೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಶಾಸಕ ಸತೀಶ್ ಸೈಲ್, ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಲವ್ ಬೈಟ್ ಅಂತಾ ವರದಿ ಬಂದಿದ್ದು ನೋವು ತಂದಿದೆ. ಆರೋಪಿಯ ಬಂಧನ ವ್ಯತ್ಯಯ ಆಗಿದಕ್ಕೆ PSI ಅಮಾನತು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ CPI ಮತ್ತು DySP ಅಮಾನತು ಮಾಡಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ SP ವರದಿ ಕಳಿಸಿದ್ದಾರೆ. ಆರೋಪಿಯನ್ನ ಆದಷ್ಟು ಬೇಗ ಬಂಧಿಸುವಂತೆ ನಾನೂ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:34 pm, Tue, 20 January 26