
ಕಾರವಾರ, ಜುಲೈ 07: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಕುಡಿಯುವ ನೀರು ಪೂರೈಸುವ ಸುಮಾರು 60 ವರ್ಷಗಳ ಹಳೆಯ 900 ಮೀಟರ್ ಉದ್ದದ ಕಬ್ಬಿಣದ ಪೈಪ್ಗಳನ್ನು ಕಳ್ಳತನ (Pipe Theft) ಮಾಡಿರುವಂತಹ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನ ಆರೋಪಿಗಳಿರುವುದು ಪೊಲೀಸ್ (police) ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ದಾಖಲಿಸಿದ ವ್ಯಕ್ತಿಯೇ ಪ್ರಕರಣದ ಪ್ರಮುಖ ಆರೋಪಿ ಎಂಬುವುದು ಸಾಬೀತಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಶಿರಸಿಯಲ್ಲಿ ಉತ್ತರ ಕನ್ನಡ ಎಸ್ಪಿ ಎಂ.ನಾರಾಯಣ್ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಶಿವಮೊಗ್ಗ ಮೂಲದ ಗುತ್ತಿಗೆದಾರ ಸಯ್ಯದ್ ಜಕ್ರಿಯಾ ಪ್ರಮುಖ ಆರೋಪಿ. 7 ಜನ ಆರೋಪಿಗಳ ಪೈಕಿ 3 ನಗರಸಭೆ ಸದಸ್ಯರು ಮತ್ತು 3 ನಗರಸಭೆ ಅಧಿಕಾರಿಗಳಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿರಸಿ ನಗರಕ್ಕೆ ನೀರು ಪೂರೈಸುತ್ತಿದ್ದ ಪೈಪ್ಗಳು ಕಳ್ಳತನ: ಮೂವರು ಅಧಿಕಾರಿಗಳು ಪರಾರಿ
ಪೈಪ್ ಕಳ್ಳತನ ಪ್ರಕರಣ ಸಂಬಂಧ ಲೊಕಾಯುಕ್ತರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ತನಿಖೆಯಲ್ಲಿ ಸರ್ಕಾರಿ ಅಧಿಕಾರಿಗಳು ಶಾಮಿಲಾಗಿರುವುದು ಕಂಡು ಬಂದಿದೆ. ಈಗಾಗಲೇ ಚಾರ್ಜ್ ಶೀಟ್ ರೆಡಿಯಾಗಿದ್ದು ಕೋರ್ಟ್ಗೆ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ 60 ವರ್ಷಗಳ ಹಿಂದೆ ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸಲು, ಶಿರಸಿ ತಾಲೂಕಿನ ಕೆಂಗ್ರೆ ಹೊಳೆಯಿಂದ ಶಿರಸಿ ನಗರಕ್ಕೆ, ಸುಮಾರು 8 ಕಿ.ಮೀ ಕಾಸ್ಟ್ ಐರನ್ (ಗಟ್ಟಿ ಕಬ್ಬಿಣ) ಪೈಪ್ಗಳನ್ನ ನೆಲಕ್ಕೆ ಹಾಕಿ ಪೈಪ್ ಲೈನ್ ಮಾಡಲಾಗಿತ್ತು. ಪೈಪ್ ಲೈನ್ ಬಹಳ ಹಳೆಯದಾಗಿದ್ದರಿಂದ ಕಳೆದ ಕೆಲ ವರ್ಷಗಳಿಂದ, ಪೈಪ್ ಲಿಕೇಜ್ ಜಾಸ್ತಿ ಆಗಿ ನೀರು ಪೊಲಾಗುವುದು ಹಾಗೂ ನೀರು ಪೂರೈಕೆಯಲ್ಲೂ ವ್ಯತ್ಯಯ ಆಗುತಿತ್ತು. ಹಾಗಾಗಿ ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2023 ರಲ್ಲಿ ಕೆಂಗ್ರೆ ಹೊಳೆಯಿಂದಲೆ ಹೊಸ ಪೈಪ್ ಲೈನ್ ಮಾಡಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುತ್ತೇನೆಂದು 200 ರೂ. ಪಡೆದಿದ್ದವ 30 ವರ್ಷಗಳ ನಂತರ ಅರೆಸ್ಟ್! ಶಿರಸಿಯಲ್ಲೊಂದು ಅಪರೂಪದ ಪ್ರಕರಣ
ಹಳೆಯ ಪೈಪ್ ಲೈನ್ ಕಳೆದ ಎರಡು ವರ್ಷಗಳಿಂದ ಉಪಯೋಗಿಸದೆ ಹಾಗೆ ಇತ್ತು. ಕಳೆದ ಕೆಲ ತಿಂಗಳ ಹಿಂದೆ ನಗರದ ಕೆಲವಡೆ ಅಭಿವೃದ್ಧಿ ಕಾಮಗಾರಿ ಸಂಬಂಧ ಪೈಪ್ ತೆಗೆಯಬೇಕಾದಾಗ, ನಗರಸಭೆಯವರು ಶಿವಮೊಗ್ಗ ಮೂಲದ ಜಕ್ರಿಯಾ ಎಂಬ ಗುತ್ತಿಗೆದಾರನಿಗೆ, ಪೈಪ್ ತೆಗೆದು ಮಾರಾಟ ಮಾಡಲು ಗುತ್ತಿಗೆಯನ್ನ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಸುಮಾರು 6 ಲಕ್ಷ ರೂ ನಗರಸಭೆಗೆ ಕೊಟ್ಟು ಪೈಪ್ ತೆಗೆದು ಮಾರಾಟ ಮಾಡಿದ್ದ ಎನ್ನಲಾಗಿತ್ತು. ಆದರೆ ಅದಾದ ಬಳಿಕ ನಗರಸಭೆಯಿಂದ ಯಾವುದೇ ಪರವಾನಗಿ ಹಾಗೂ ಗುತ್ತಿಗೆ ಪಡೆಯದೆ, ಶಿರಸಿ ನಗರದ ಹೊರವಲಯದಲ್ಲಿರುವ ಸುಮಾರು 116ಕ್ಕೂ ಹೆಚ್ಚು ಪೈಪ್ ಅಂದರೆ ಸುಮಾರು 900 ಮೀಟರ್, ನೆಲದಲ್ಲಿ ಹೊತ್ತಿದ್ದ ಪೈಪ್ ತೆಗೆದು ಮಾರಾಟ ಮಾಡಲಾಗಿತ್ತು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಶಿರಸಿ ನಗರಸಭೆಯಿಂದ ಗುತ್ತಿಗೆದಾರ ಜಕ್ರಿಯಾ ಎಂಬುವವರ ಮೇಲೆ ಪ್ರಕರಣ ದಾಖಲಾಗಿತ್ತು. ಶಿರಸಿ ನಗರ ಸಭೆಯ ಆಯುಕ್ತ ಕಾಂತರಾಜು ಹಾಗೂ ಇಂಜಿನಿಯರ್ಗಳಾದ ಸುಫಿಯನ್ ಮತ್ತು ಪ್ರಶಾಂತ ತಲೆ ಮರಿಸಿಕೊಂಡು ಪರಾರಿ ಆಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:17 pm, Mon, 7 July 25