ಸರ್ಕಾರಿ ನೌಕರಿ ಕೊಡಿಸುತ್ತೇನೆಂದು 200 ರೂ. ಪಡೆದಿದ್ದವ 30 ವರ್ಷಗಳ ನಂತರ ಅರೆಸ್ಟ್! ಶಿರಸಿಯಲ್ಲೊಂದು ಅಪರೂಪದ ಪ್ರಕರಣ
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ 200 ರೂಪಾಯಿ ಪಡೆದು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು 30 ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ವ್ಯಕ್ತಿ ದಶಕಗಳ ಹಿಂದೆ ಶಿರಸಿಯಲ್ಲಿ ವಂಚನೆ ಮಾಡಿ ಇದೀಗ ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದ ಅಪರೂಪದ ಪ್ರಕರಣದ ವಿವರ ಇಲ್ಲಿದೆ.

ಕಾರವಾರ, ಜುಲೈ 7: ಇದು 30 ವರ್ಷಗಳ ಹಿಂದಿನ ಪ್ರಕರಣ. ಕೇವಲ 200 ರೂಪಾಯಿಯ ಕಾರಣಕ್ಕೆ ವ್ಯಕ್ತಿಯೊಬ್ಬರ ಬಂಧನವಾಗಿದೆ. ಉತ್ತರಕನ್ನಡ ಜಿಲ್ಲೆಯ (Uttara Kananda) ಶಿರಸಿಯಲ್ಲಿ (Sirsi) 30 ವರ್ಷಗಳ ಹಿಂದೆ ಸಂಘಟನೆಯ ಮುಖಂಡ ಎಂದು ಹೇಳಿಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬರು ಈ ಭಾಗದ ನಾಗರಿಕರಿಗೆ ಉಂಡೆ ನಾಮ ಹಾಕಿದ್ದರು ಎನ್ನಲಾಗಿದೆ. 18-02-1995 ರಂದು ಶಿರಸಿಯ ಗ್ರಾಮೀಣ ಠಾಣೆಯಲ್ಲಿ ತಾಲೂಕಿನ ಉಂಚಳ್ಳಿಯ ವೆಂಕಟೇಶ ಮಹದೇವ ವೈದ್ಯ ಎಂಬುವವರು ಪ್ರಕರಣವೊಂದನ್ನು ದಾಖಲಿಸಿದ್ದರು. ಅದೇನೆಂದರೆ, ವೆಂಕಟೇಶ ಅವರಿಂದ ಬಿ ಕೇಶವಮೂರ್ತಿ ರಾವ್ ಎಂಬವರು 200 ರೂಪಾಯಿ ಪಡೆದಿದ್ದರು. ತನಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ. ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುತ್ತೇನೆಂದು ಹೇಳಿದ್ದರು. ಆದರೆ ಅದೆಷ್ಟೋ ದಿನಗಳಾದರೂ ನೌಕರಿ ಸಿಗದೇ ವೆಂಕಟೇಶ ನಿರಾಶರಾಗಿದ್ದರು.
ಸರ್ಕಾರಿ ನೌಕರಿಯೂ ದೊರೆಯದೇ, ಕೊಟ್ಟ ಹಣವೂ ಬಾರದೇ ಇರುವುದರಿಂದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ವಂಚನೆ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ಬಿಕೆ ರಾವ್ ಪೊಲೀಸರಿಗೆ ಸಿಕ್ಕಿರಲಿಲ್ಲ.
30 ವರ್ಷ ಹಳೇ ಪ್ರಕರಣ ಈಗ ಬಯಲಾಗಿದ್ಹೇಗೆ?
ಇತ್ತೀಚೆಗೆ, ಶಿರಸಿ ಗ್ರಾಮೀಣ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ ಗೌಡ ಸುದೀರ್ಘ ಅವಧಿಯಿಂದ ಬಾಕಿ ಇರುವ ಪ್ರಕರಣಗಳ ಪಟ್ಟಿ ಪರಿಶೀಲಿಸುವ ಸಂದರ್ಭದಲ್ಲಿ 30 ವರ್ಷದ ಹಿಂದಿನ ಪ್ರಕರಣವನ್ನು ಗಮನಿಸಿದ್ದಾರೆ. ಪ್ರಕರಣದಲ್ಲಿರುವ ಬಿಕೆ ರಾವ್ ಎಂಬಾತ ಕುಂದಾಪುರ ಮೂಲದವನೆಂದು ಗೊತ್ತಾದಾಗ ಕುಂದಾಪುರ ಪೊಲಿಸರಿಂದ ಮಾಹಿತಿ ಪಡೆದಿದ್ದಾರೆ.
ಉಡುಪಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿರಸಿ ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಗೌಡ ಮತ್ತೆ ಪ್ರಕರಣದ ಜಾಡುಹಿಡಿದಿದ್ದಾರೆ. ಬಿಕೆ ರಾವ್ ಬಗ್ಗೆ ವಿಚಾರಿಸಿದ್ದಾರೆ. ಆಗ, ಆರೋಪಿ ಬೆಂಗಳೂರಲ್ಲಿ ಇರುವ ಬಗ್ಗೆ ಮಾಹಿತಿ ಸಿಗುತ್ತದೆ. ಅಲ್ಲದೇ ಮೊಬೈಲ್ ನಂಬರ್ ಕೂಡ ಸಿಕ್ಕಿದ್ದು, ಸಂಪರ್ಕಿಸಿದ್ದಾರೆ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರಿನಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಹೋಗಿದ್ದ ಶಿರಸಿ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ ಸಿಪಿಐ ಮಂಜುನಾಥ ಗೌಡ, ಆರೋಪಿ ಬಿಕೆ ರಾವ್ ಸಂಪರ್ಕ ಮಾಡಿಸಿದ್ದಾರೆ. ಪಾರ್ಸೆಲ್ ಒಂದು ಬಂದಿದೆ ಪಡೆದುಕೊಳ್ಳಿ ಎಂದು ಕರೆಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ಬಳಿಕ ಶಿರಸಿಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಕಾರವಾರ: 12 ವರ್ಷಗಳಿಂದ ಈ ಗ್ರಾಮದ ಯುವಕರಿಗೆ ಯಾರೂ ಕೊಡ್ತಿಲ್ಲ ಕನ್ಯೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಪೊಲೀಸರ ಮುಂದಿನ ನಡೆ ಏನು?
30 ವರ್ಷಗಳ ಹಿಂದಿನ 200 ರೂಪಾಯಿ ಮೌಲ್ಯ ಈಗಿನ ಲಕ್ಷಕ್ಕಿಂತ ಹೆಚ್ಚಾಗಬಹುದು. ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಹಣ ಪಡೆದು ಪರಾರಿಯಾದ ವ್ಯಕ್ತಿಯನ್ನು ಕೊನೆಗೂ ಬಂಧಿಸುವ ಮೂಲಕ ಪೊಲೀಸರು, ಮೋಸ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ.