
ಹೊನ್ನಾವರ, ಜೂನ್ 10: ಮಸೀದಿಯಲ್ಲಿ ಅತ್ಯಂತ ಭಕ್ತಿಭಾವದಿಂದ ಅಸರ್ ನಮಾಜ್‌ಗಾಗಿ ಅಝಾನ್ (ಪ್ರಾರ್ಥನೆಯ ಕರೆ) ಮೊಳಗಿಸುತ್ತಿದ್ದ (Azan) ಪವಿತ್ರ ಕ್ಷಣದಲ್ಲೇ ಮೌಲ್ವಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಕರುಣಾಜನಕ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಎಮ್.ಜೆ.ಎಮ್ (MJM) ಮಸೀದಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ.
ಮೃತರನ್ನು ಮಂಗಳೂರು ಮೂಲದ ಕುಕ್ಕಾಜೆಯ ಅಬ್ದುಲ್ ಲತೀಫ್ ಮದನಿ (53) ಎಂದು ಗುರುತಿಸಲಾಗಿದೆ. ಇವರು ಇಸ್ಲಾಮಿಕ್ ಧಾರ್ಮಿಕ ಹಾಗೂ ಮದರಸಾ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸಲುವಾಗಿ ಆರು ತಿಂಗಳ ಹಿಂದೆಯಷ್ಟೇ ಮಂಗಳೂರಿನಿಂದ ಹೊನ್ನಾವರದ ಕಾಸರಕೋಡ ಟೊಂಕಾ ಮಸೀದಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ವಾಡಿಕೆಯಂತೆ ಮಸೀದಿಯಲ್ಲಿ ಅಸರ್ ನಮಾಜ್ ಪ್ರಾರ್ಥನೆಗೆ ಮುನ್ನ ಮೌಲ್ವಿ ಅಬ್ದುಲ್ ಲತೀಫ್ ಅವರು ಮೈಕ್ ಹಿಡಿದು ಅಝಾನ್ ಕೂಗುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಮೈಕ್ ಹಿಡಿದುಕೊಂಡೇ ಕುಸಿದು ಬಿದ್ದಿದ್ದಾರೆ.
ಮೌಲ್ವಿ ಹಠಾತ್ ಕುಸಿದು ಬೀಳುತ್ತಿರುವುದನ್ನು ಗಮನಿಸಿದ ಮಸೀದಿಯಲ್ಲಿದ್ದ ಇತರರು ತಕ್ಷಣವೇ ಅವರನ್ನು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮುನ್ನವೇ ಮೌಲ್ವಿ ಅಬ್ದುಲ್ ಲತೀಫ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಢಪಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಗುಡ್ಡ ಕುಸಿತದ ಭೀತಿ: 100 ಕೋಟಿ ರೂ. ಬಿಡುಗಡೆಯಾದ್ರೂ ಕಾಮಗಾರಿ ನಡೆಸಲಾಗದೆ ಸಂಕಷ್ಟ!
ಅತ್ಯಂತ ಪವಿತ್ರವಾದ ಪ್ರಾರ್ಥನೆಯ ಸಮಯದಲ್ಲಿ, ಅಲ್ಲಾಹನ ನಾಮಸ್ಮರಣೆ ಮಾಡುತ್ತಿರುವಾಗಲೇ ಮೌಲ್ವಿ ಪ್ರಾಣ ಬಿಟ್ಟಿರುವುದು ಅತ್ಯಂತ ಪುಣ್ಯದ ಸಾವು ಎಂದು ಸ್ಥಳೀಯರು ಹೇಳಿದ್ದು, ಕಂಬನಿ ಮಿಡಿದಿದ್ದಾರೆ. ಮೌಲ್ವಿಯ ಕೊನೆಯ ಕ್ಷಣದ ಭೀಕರ ದೃಶ್ಯಗಳು ಮಸೀದಿಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಸರೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Wed, 10 June 26