AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಗುಡ್ಡ ಕುಸಿತದ ಭೀತಿ: 100 ಕೋಟಿ ರೂ. ಬಿಡುಗಡೆಯಾದ್ರೂ ಕಾಮಗಾರಿ ನಡೆಸಲಾಗದೆ ಸಂಕಷ್ಟ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ರಾಜ್ಯ ಸರ್ಕಾರ ಕೊನೇ ಕ್ಷಣದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗದೆ ಜಿಲ್ಲಾಡಳಿತ ಕೇವಲ 40 ಕೋಟಿ ರೂ.ಗಳ ತುರ್ತು ಕೆಲಸಗಳಿಗಷ್ಟೇ ಈಗ ಹಮ್ಮಿಕೊಂಡಿದೆ. ಸರ್ಕಾರದ ವಿಳಂಬ ಧೋರಣೆಯಿಂದ ಕಾಮಗಾರಿ ಸಾಧ್ಯವಾಗದೇ ಜನ ಆತಂಕದಲ್ಲೇ ದಿನದೂಡುವಂತಾಗಿದೆ.

ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಗುಡ್ಡ ಕುಸಿತದ ಭೀತಿ: 100 ಕೋಟಿ ರೂ. ಬಿಡುಗಡೆಯಾದ್ರೂ ಕಾಮಗಾರಿ ನಡೆಸಲಾಗದೆ ಸಂಕಷ್ಟ!
ಗುಡ್ಡ ಕುಸಿತ ತಡೆಗೋಡೆ ನಿರ್ಮಾಣ ಕಾಮಗಾರಿImage Credit source: tv9
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Jun 10, 2026 | 7:26 AM

Share

ಕಾರವಾರ, ಜೂನ್ 10: ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎಂಬ ಗಾದೆಯಂತೆ ಮುಂಗಾರು ಮಳೆ ಆರಂಭವಾದ ಬೆನ್ನಲ್ಲೇ ರಾಜ್ಯ ಸರ್ಕಾರ, ಗುಡ್ಡ ಕುಸಿತ ತಡೆಗೋಡೆ ನಿರ್ಮಾಣಕ್ಕಾಗಿ ಉತ್ತರ ಕನ್ನಡ (Uttara Kannada) ಜಿಲ್ಲೆಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಜಿಲ್ಲೆಯಲ್ಲಿ ಈಗಾಗಲೇ ವರುಣಾರ್ಭಟ ತೀವ್ರಗೊಂಡಿರುವುದರಿಂದ ಹಣ ಕೈಯಲ್ಲಿದ್ದರೂ ಯಾವುದೇ ಪ್ರಮುಖ ಕಾಮಗಾರಿಗಳನ್ನು ನಡೆಸಲಾಗದ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ.

ಮುಖ್ಯಾಂಶಗಳು

  • ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಬಿಡುಗಡೆ.
  • ಮುಂಗಾರು ಆರಂಭದಿಂದ ಕಾಮಗಾರಿ ನಡೆಸಲು ಅಡ್ಡಿ.
  • 439 ಸೂಕ್ಷ್ಮ ಪ್ರದೇಶಗಳಲ್ಲಿ ಕುಸಿತದ ಭೀತಿ.

ಹಣವಿದ್ದರೂ ಮುಗಿಯದ ಆತಂಕ: ಮಳೆಗಾಲದ ಬಳಿಕವಷ್ಟೇ ಪೂರ್ಣ ಕೆಲಸ

ಭೌಗೋಳಿಕವಾಗಿ ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದ ಬಹುಪಾಲು ಪ್ರದೇಶಗಳು ಪಶ್ಚಿಮ ಘಟ್ಟಗಳ ಸಾಲಿನಲ್ಲಿವೆ. ಪ್ರತಿ ವರ್ಷ ಇಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ಪ್ರವಾಹದಂತಹ ಪ್ರಕೃತಿ ವಿಕೋಪಗಳು ಸಾಮಾನ್ಯ ಎಂಬಂತಾಗಿವೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದಲೂ ಶಾಶ್ವತ ಪರಿಹಾರಕ್ಕಾಗಿ ಕನಿಷ್ಠ 100 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಹಣ ಬಿಡುಗಡೆ ಮಾಡಿದೆ. ಆದರೆ ಜಿಲ್ಲಾಡಳಿತ ಕಾಮಗಾರಿ ಆರಂಭಿಸುವಷ್ಟರಲ್ಲೇ ಮಳೆ ಶುರುವಾಗಿದೆ. ಹೀಗಾಗಿ ಸದ್ಯಕ್ಕೆ ಅತ್ಯಂತ ತುರ್ತು ಇರುವ ಜಾಗಗಳಲ್ಲಿ ಮಾತ್ರ 40 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾತ್ಮಕ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಉಳಿದ ಪ್ರಮುಖ ಕಾಮಗಾರಿಗಳನ್ನು ಮುಂಗಾರು ಮುಗಿದ ಬಳಿಕವಷ್ಟೇ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

439 ಕಡೆ ಗುಡ್ಡ ಕುಸಿತದ ಭೀತಿ: ಶಿರೂರು ದುರಂತದ ಕಹಿ ನೆನಪು

ಉತ್ತರ ಕನ್ನಡ ಜಿಲ್ಲೆಯ ಒಟ್ಟು 439 ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರ ತಂಡ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ವರದಿ ನೀಡುತ್ತಲೇ ಬಂದಿದೆ. ಆದರೆ ಸರ್ಕಾರಗಳು ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ಅವಘಡಗಳು ಸಂಭವಿಸುತ್ತಲೇ ಇವೆ. ಶಿರೂರು ಸೇರಿದಂತೆ ಕಳೆದ ಒಂದೆರಡು ವರ್ಷಗಳಲ್ಲಿ ವಿವಿಧೆಡೆ ಸಂಭವಿಸಿದ್ದ ಭೂಕುಸಿತಕ್ಕೆ ಕನಿಷ್ಠ 14 ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿದ್ದವು.

ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಕುಸಿಯುತ್ತಿರುವ ಗುಡ್ಡ

ಪ್ರಸ್ತುತ, ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರತಿ ಮಳೆಗೂ ಮಣ್ಣು ಕುಸಿಯುತ್ತಲೇ ಇದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಶಿರೂರು ಮುಂತಾದ ಕಡೆಗಳಲ್ಲಿ ಮತ್ತೆ ಗುಡ್ಡ ಕುಸಿತದ ಆತಂಕ ಎದುರಾಗಿದ್ದರೂ, ಮಳೆಯ ಕಾರಣದಿಂದ ತಡೆಗೋಡೆ ನಿರ್ಮಾಣ ತಡವಾಗುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಮುಂಗಾರು ಮಳೆಯ ತೀವ್ರತೆಯ ನಡುವೆಯೇ ಸಾಧ್ಯವಿರುವಷ್ಟು ರಕ್ಷಣಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಗ್ರಾಮಸ್ಥರ ಆತಂಕ

ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅನುದಾನ ಈ ಬಾರಿ ಕೈಸೇರಿದ್ದರೂ, ಪ್ರಕೃತಿಯ ಮುನಿಸಿನಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ ಅನಾಹುತಗಳ ಪ್ರಮಾಣ ತಗ್ಗಬಹುದು ಎಂಬ ನಿರೀಕ್ಷೆಯಲ್ಲೇ ಜಿಲ್ಲಾಡಳಿತ ದಿನದೂಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೂರಜ್​, ಮಹಾವೀರ್​ ಉತ್ತರೆ
ಸೂರಜ್​, ಮಹಾವೀರ್​ ಉತ್ತರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More