ಈ ಗ್ರಾಮದ ಯುವಕರಿಗೆ ಕನ್ಯೆ ಕೊಡದಂತೆ ಮಾಡಿದ ಊರಿನ ರಸ್ತೆ, ಕರ್ನಾಟಕದ ಗ್ರಾಮ ಯಾವುದು ನೋಡಿ
ಅದು ನಿತ್ಯಹರಿದ್ವರ್ಣದ ಅರಣ್ಯ ಮಧ್ಯದಲ್ಲಿನ ಸಮೃದ್ಧವಾದ ಗ್ರಾಮ. ಉತ್ತಮ ಕೃಷಿ ಮಾಡಿ ಸುಂದರ ಜೀವನ ಸಾಗಿಸುವ ಈ ಗ್ರಾಮದ ಯುವಕರಿಗೆ ಕನ್ಯೆ ಕೊಡಲು ಯಾರೂ ಮುಂದಾಗುತ್ತಿಲ್ಲ. ಎಲ್ಲವೂ ಓಕೆ ಆದ್ರೆ ನಿಮ್ಮ ಗ್ರಾಮಕ್ಕೆ ಹೋಗುವ ರಸ್ತೆ ಸರಿಯಿಲ್ಲ. ನಮ್ಮ ಮಗಳನ್ನ ಈ ಊರಿಗೆ ಕೊಟ್ರೆ ನಿತ್ಯ ಓಡಾಡುವುದು ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಕಳೆದ 25 ವರ್ಷಗಳಿಂದ ಆ ಗ್ರಾಮದ ಯುವಕರ ಮದುವೆ ಆಗಿಲ್ಲ. ಅಷ್ಟಕ್ಕೂ ಆ ರಸ್ತೆಯ ಪರಿಸ್ಥಿತಿಯ ಹೇಗಿದೆ ನೋಡಿ.
ಕಾರವಾರ, (ನವೆಂಬರ್ 19): ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ನಿತ್ಯ ಹರಿದ್ವರ್ಣದ ಕಾಡಿನ ಮಧ್ಯ ಹಾದು ಹೋಗಿರುವ ಈ ಕಚ್ಚಾ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಬೈಕ್ ಓಡಿಸುತ್ತಾರೆ. ಇನ್ನು ವೃದ್ದರು ಕೈ ಯಲ್ಲಿ ಕೊಲು ಹಿಡಿದು ಘಟ್ಟ ಹತ್ತಿ ನಡೆದು ಹೋಗುತ್ತಾರೆ. ಹೀಗಾಗಿ ಈ ಗ್ರಾಮದ ಯುವಕರಿಗೆ ಹುಡುಗಿಯರನ್ಜು ಮದ್ವೆ ಮಾಡಿಕೊಡಲು ಆಸುಪಾಸಿನ ಗ್ರಾಮದವರು, ತಾಲೂಕಿನವರು ಹಿಂದೇಟು ಹಾಕಿದ್ದಾರೆ. ಹೌದು…ಗ್ರಾಮದ ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಯುವರಿಗೆ ಕನ್ಯೆ ಸಿಗುತ್ತಿಲ್ಲ. ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ ಎಂದು ಈ ಗ್ರಾಮದ ಯುವರಿಗೆ ಯಾರೂ ಕೂಡ ಕನ್ಯೆ ಕೊಡಲು ಮುಂದಾಗುತ್ತಿಲ್ಲ. ಘಟ್ಟದ ಮೇಲಿರುವ ಈ ಗ್ರಾಮದಲ್ಲಿ ಕೇವಲ 5 ತರಗತಿಯವರೆಗೆ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸ ಮಾಡಬೇಕಂದ್ರೆ ಬೇರೆ ಊರಿಗೆ ಹೋಗಬೇಕಾಗುತ್ತೆ. ಓಡಾಡಲು ರಸ್ತೆ ಸರಿ ಇಲ್ಲ ಎಂದು ಈ ಗ್ರಾಮದ ಬಹುತೇಕ ಯುವಕರು ಓದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಡಿಮೆ ವಿದ್ಯಾಭ್ಯಾಸ ಮಾಡಿದ್ದರಿಂದ ಹೊರಗಡೆ ಎಲ್ಲಿಯೂ ಕೆಲಸ ಮಾಡದೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.
ಯುವಕರನ್ನು ಕಂಗಾಲಾಗಿಸಿದ ಊರಿನ ರಸ್ತೆ
ಈ ಗ್ರಾಮದ ಸಣ್ಣಕ್ಕಿ ದೇಶ -ವಿದೇಶದಲ್ಲಿ ಖ್ಯಾತಿ ಪಡೆದಿದೆ. ರಾಜ್ಯದ ಬೇರೆ ಯಾವ ಭೂಮಿಯಲ್ಲೂ ಸಿಗದ ಸುವಾಸನೆಯುಕ್ತ ಭತ್ತ, ಈ ಗ್ರಾಮದಲ್ಲಿ ಅಷ್ಟೆ ಬೆಳೆಯುತ್ತಿರುವುದರಿಂದ, ಭತ್ತವನ್ನೇ ಹೆಚ್ಚಾಗಿ ಬೆಳೆಸಿ ಬಂದ ಹಣದಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದರೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲ. ಅದು ಅವರ ಜೀವನ ಮೇಲೆ ಪರಿಣಾಮ ಬೀರಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದರೆ ಬೇರೆ ಬೇರೆ ಕಡೆಗಳಲ್ಲಿ ಏನಾದರೂ ಕೆಲಸಗಳು ಸಿಗುತ್ತಿದ್ದವೇನೋ. ಆದ್ರೆ, ರಸ್ತೆ ಇಲ್ಲದ ಕಾರಣದಿಂದ ಅರ್ಧಂಬರ್ಧ ಓದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸಹ ಹೆಣ್ಣು ಕೊಡದಿರಲು ಕಾರಣವಾಗಿದೆ.
ಹೆಣ್ಣು ಮಕ್ಕಳನ್ನು ಮದ್ವೆ ಮಾಡಿಕೊಡಲು ತಂದೆ-ತಾಯಿಗಳು ಕೆಲ ಆಸೆಗಳನ್ನಿಟ್ಟುಕೊಂಡಿರುತ್ತಾರೆ. ತಮ್ಮ ಮಗಳ ಗಂಡನ ಮನೆಯಲ್ಲಿ ಸಂತೋಷದಿಂದ ಇರಬೇಕೆಂದು ಪೋಷಕರ ಆಸೆಯಾಗುರುತ್ತೆ. ಇನ್ನೂ ಉದ್ಯೋಗಸ್ಥ ಹುಡುಗನಿಗೆ ಕೊಡಬೇಕೆನ್ನುವ ಕನಸು ಕಟ್ಟಿಕೊಂಡಿರುತ್ತಾರೆ. ಆದ್ರೆ, ಮೇದಿನಿ ಗ್ರಾಮದ ಯುವಕರು ಓದು ಅರ್ಧಬಂರ್ಧ, ಉದ್ಯೋಗ ಇಲ್ಲ. ಇದರಿಂದ ಆದಾಯ ಅಷ್ಟೇ ಕಷ್ಟೇ. ಈ ಎಲ್ಲಾ ಕಾರಣಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹದಗೆಟ್ಟ ಒಂದು ರಸ್ತೆಯಿಂದ ಯುವಕರನ್ನು ಕಂಗಾಲಾಗಿಸಿದೆ.
ಬೈಕ್ ಓಡಿಸುತ್ತಿರುವವರ ದೃಶ್ಯ ನೋಡಿದ್ರೆ ಎದೆ ಝಲ್ ಅನಿಸುತ್ತೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಘಟ್ಟದ ಮೇಲಿನ ಈ ಗ್ರಾಮ, ಕುಮಟಾ ಸಿದ್ದಾಪುರ ಮುಖ್ಯ ರಸ್ತೆಯಿಂದ ಸುಮಾರು 8 k.m ಘಟ್ಟದ ಮೇಲಿದೆ. ಈ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಪೂರ್ತಿಯಾಗಿ ಕಾಡಿನ ಮಧ್ಯದ ಘಟ್ಟದಲ್ಲಿ ಹಾದು ಹೋಗುವ ಈ ರಸ್ತೆ ಭಾರಿ ಡೆಂಜರ್. ಸರಿಯಾಗಿ ನಡೆದುಕೊಂಡು ಹೋಗಲು ಆಗದ ರಸ್ತೆ ಇದಾಗಿದ್ದು. ಮುಖ್ಯ ರಸ್ತೆಯಿಂದ ಸುಮಾರು 8 ಕಿ.ಮೀ ಅಂತರದಲ್ಲಿ ಗ್ರಾಮ ಇರೊದ್ರಿಂದ ಅಷ್ಟು ದೂರದ ತನಕ ನಡ್ಕೊಂಡು ಹೊಗುವುದು ಭಾರಿ ಕಷ್ಟ.
ಇನ್ನೂ ನಡೆದುಕೊಂಡು ಹೋಗಲು ಆಗದ ಈ ರಸ್ತೆಯಲ್ಲಿ ಅನಿವಾರ್ಯವಾಗಿ ಬೈಕ್ ತೆಗೆದುಕೊಂಡು ಹೋಗಬೇಕಾಗುತ್ತೆ. ಬೈಕ್ ಓಡಿಸುತ್ತಿರುವವರ ದೃಶ್ಯ ನೋಡಿದ್ರೆ ಎಂತವರಿಗೂ ಎದೆ ಝಲ್ ಅನಿಸುತ್ತೆ. ಬೈಕ್ ಮೇಲೆ ಹೋಗುವಾಗ ಅದೆಷ್ಟೊ ಜನರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.
ಡಿಸಿ ಗ್ರಾಮ ವಾಸ್ತವ್ಯ ಮಾಡಿದ್ದರೂ ಉಪಯೋಗಿವಿಲ್ಲ
ಇನ್ನೂ ಈ ರಸ್ತೆ ಅಭಿವೃದ್ಧಿ ವಿಚಾರವಾಗಿ ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾಗಿದ್ದ ಮುಲೈ ಮುಗಿಲನ್ ಮತ್ತು ಹರೀಶ್ ಕುಮಾರ ಇಬ್ಬರು ತಮ್ಮ ಕಾಲಾವಧಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ. ಗ್ರಾಮಕ್ಕೆ ಉತ್ತಮ ರಸ್ರೆ ಸಂಪರ್ಕ ಕಲ್ಪಿಸಿಕೊಡುವ ಭರವಸೆ ಕೊಟ್ಟಿದ್ದರು. ಅಲ್ಲದೆ ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ಕೂಡ ರಸ್ತೆ ನಿರ್ಮಾಣ ಮಾಡಲು ಧನ ಸಹಾಯ ಮಾಡಲು ಬದ್ಧರಾಗಿರುವುದಾಗಿ ಹೇಳಿದ್ದರು. ಆದ್ರೆ ಇದುವರೆಗೂ ಮೇದಿನಿ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಾಣ ಆಗದೆ ಯಥಾವತ್ತಾದ ಸಮಸ್ಯೆ ಮುಂದುವರೆದಿದೆ.
ಒಟ್ಟಾರೆಯಾಗಿ ಬೇರೆ ಬೇರೆ ಕಾರಣಾಂತರಗಳಿಂದ ಮಕ್ಕಳ ಮದುವೆ ಆಗುತ್ತಿಲ್ಲ ಎಂಬುವುದನ್ನ ನಾವು ಕೇಳಿದ್ದೆವೆ. ಅದ್ರೆ ರಸ್ತೆ ಸರಿ ಇಲ್ಲದಕ್ಜೆ ಗ್ರಾಮದ ಯಾವ ಯುವಕರಿಗೂ ಕನ್ಯೆ ಕೊಡುತ್ತಿಲ್ಲ. ಬೇರೆ ಕಡೆ ಹೋಗಿ ಕೆಲಸ ಮಾಡಿ ಗಣ ಸಂಪಾದನೆ ಮಾಡಬೇಕಂದ್ರೆ ಒಳ್ಳೆಯ ಶಿಕ್ಷಣ ಕೂಡ ಪಡೆದಿಲ್ಲ. ಇನ್ನೂ ಚಿಕ್ಕ ಪುಟ್ಟ ಕೆಲಸಕ್ಕೆ ಬೇರೆ ಕಡೆ ಹೋಗಬೇಕಂದ್ರೆ ವಯಸ್ಸಾದತಂದೆ ತಾಯಿಯನ್ನಷ್ಟೆ ಮನೆಯಲ್ಲಿ ಬಿಟ್ಟ ಹೋಗಲು ಆಗದೆ ಯುವಕರು ಅಸಹಾಯಕರಾಗಿ ಗ್ರಾಮದಲ್ಲೇ ಕೃಷಿ ಚಟುವಟಿಕೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ