ಚಮನ್ ಮೀನಿನ ವಿಷಾನಿಲಕ್ಕೆ ಐವರು ಮೀನುಗಾರರು ಸಾವು; ಎಚ್ಚೆತ್ತ ಆಡಳಿತ, ಬಂದರುಗಳಲ್ಲಿ ಹೈ ಅಲರ್ಟ್!

ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲಕ್ಕೆ ಐವರು ಮೀನುಗಾರರು ಬಲಿಯಾದ ಪ್ರಕರಣದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕಾರವಾರ, ಕುಮಟಾ, ಹೊನ್ನಾವರ ಸೇರಿದಂತೆ ವಿವಿಧ ಬಂದರುಗಳಲ್ಲಿ ಜಾಗೃತಿ ಸಭೆ ನಡೆಸಿ ಮೀನುಗಾರರಿಗೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ನೀಡಲಾಗಿದೆ. ಗ್ಯಾಸ್ ಡಿಟೆಕ್ಟರ್ ಬಳಕೆ, ಟ್ಯಾಂಕ್ ಪ್ರವೇಶದ ಮುನ್ನೆಚ್ಚರಿಕೆ ಸೇರಿದಂತೆ ಜೀವ ರಕ್ಷಣೆ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ.

ಚಮನ್ ಮೀನಿನ ವಿಷಾನಿಲಕ್ಕೆ ಐವರು ಮೀನುಗಾರರು ಸಾವು; ಎಚ್ಚೆತ್ತ ಆಡಳಿತ, ಬಂದರುಗಳಲ್ಲಿ ಹೈ ಅಲರ್ಟ್!
ಚಮನ್ ಮೀನು
Edited By:

Updated on: Nov 13, 2026 | 9:19 AM

ಮುಖ್ಯಾಂಶಗಳು

  • ಚಮನ್ ಮೀನಿನ ವಿಷಕಾರಿ ಅನಿಲಕ್ಕೆ ಉತ್ತರ ಕನ್ನಡದಲ್ಲಿ ಐವರು ಮೀನುಗಾರರು ಬಲಿ.
  • ಕಾರವಾರ, ಕುಮಟಾ, ಹೊನ್ನಾವರ ಬಂದರುಗಳಲ್ಲಿ ಅಧಿಕಾರಿಗಳಿಂದ ವಿಶೇಷ ಜಾಗೃತಿ ಸಭೆ.
  • ಮೀನು ಸಂಗ್ರಹಣಾ ಟ್ಯಾಂಕ್ ಪ್ರವೇಶಕ್ಕೆ ಗ್ಯಾಸ್ ಡಿಟೆಕ್ಟರ್ ಬಳಕೆ ಕಡ್ಡಾಯ.

ಕಾರವಾರ, ನವೆಂಬರ್ 13: ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಸೇವಿಸಿ ಐವರು ಮೀನುಗಾರರು ಮೃತಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಇಂತಹ ದುರ್ಘಟನೆಗಳು ಮತ್ತೆ ಸಂಭವಿಸದಂತೆ ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮೀನುಗಾರರ ಜೀವ ರಕ್ಷಣೆಗೆ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಬೋಟ್ ಮಾಲೀಕರು ಮತ್ತು ಮೀನುಗಾರರು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಚಮನ್ ಮೀನಿನ ವಿಷಾನಿಲಕ್ಕೆ ಐವರ ಬಲಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ವಾರಗಳ ಹಿಂದೆ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲಕ್ಕೆ ಐವರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 27ರಂದು ಗೋಕರ್ಣದ ತದಡಿ ಬಂದರಿನಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರೆ, ಅಕ್ಟೋಬರ್ 31ರಂದು ಕಾರವಾರದ ಮುದುಗದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು. ಬೋಟ್‌ಗಳಲ್ಲಿ ಮೀನುಗಳನ್ನು ಸಂಗ್ರಹಿಸಿಟ್ಟಿದ್ದ ಸ್ಟೋರೇಜ್‌ನಿಂದ ಅವುಗಳನ್ನು ಹೊರತೆಗೆಯುವ ಸಂದರ್ಭದಲ್ಲಿ ಬಿಡುಗಡೆಯಾದ ವಿಷಕಾರಿ ಅನಿಲ ಸೇವನೆಯೇ ಈ ದುರಂತಗಳಿಗೆ ಕಾರಣವಾಗಿತ್ತು.

Loading...

ಚಮನ್ ಮೀನು ಕೊಳೆತಾಗ ಅಮೋನಿಯಾ ಮತ್ತು ಹೈಡ್ರೋಜನ್ ಸಲ್ಫೈಡ್‌ನಂತಹ ಅಪಾಯಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಮುಚ್ಚಿದ ಟ್ಯಾಂಕ್‌ಗಳಲ್ಲಿ ಈ ಅನಿಲಗಳು ಸಂಗ್ರಹವಾಗುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿ ಪ್ರಾಣಾಪಾಯ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಬೈತಖೋಲ್, ಹೊನ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ಬಂದರುಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗಿದೆ.

ಮೀನುಗಾರರಿಗೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ!

ಮೀನುಗಾರರು ಚಮನ್ ಮೀನು ಹಿಡಿದ ತಕ್ಷಣ ಸೂಕ್ತ ರೀತಿಯಲ್ಲಿ ಶೀತಲೀಕರಣ ಮಾಡಬೇಕು. ಮೀನುಗಳನ್ನು ಶೀಘ್ರವಾಗಿ ಬಂದರಿಗೆ ಸಾಗಿಸಬೇಕು. ಕೊಳೆತ ಮೀನು ಅಥವಾ ತ್ಯಾಜ್ಯವನ್ನು ಬೋಟ್‌ಗಳಲ್ಲಿ ಸಂಗ್ರಹಿಸಿಡಬಾರದು. ಯಾವುದೇ ಕಾರಣಕ್ಕೂ ಮೀನು ಸಂಗ್ರಹಣಾ ಟ್ಯಾಂಕ್‌ಗಳ ಒಳಗೆ ನೇರವಾಗಿ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟ್ಯಾಂಕ್‌ಗಳ ಒಳಗೆ ಪ್ರವೇಶಿಸುವ ಮೊದಲು ಗ್ಯಾಸ್ ಡಿಟೆಕ್ಟರ್ ಮೂಲಕ ವಿಷಕಾರಿ ಅನಿಲಗಳ ಇರುವಿಕೆಯನ್ನು ಪರೀಕ್ಷಿಸಬೇಕು. ಸೂಕ್ತ ಗಾಳಿಯ ಸಂಚಾರ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು. ವಾಸನೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಸ್ಥಳ ಸುರಕ್ಷಿತವಾಗಿದೆ ಎಂದು ಭಾವಿಸಬಾರದು. ಉಸಿರಾಟದ ಸುರಕ್ಷತಾ ಸಾಧನಗಳಿಲ್ಲದೆ ಯಾರೂ ಒಳಗೆ ಪ್ರವೇಶಿಸಬಾರದು ಎಂದು ಸೂಚಿಸಲಾಗಿದೆ.

ಒಟ್ಟಿನಲ್ಲಿ ಐವರು ಮೀನುಗಾರರ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿದೆ. ಮೀನುಗಾರರು ಮತ್ತು ಬೋಟ್ ಮಾಲೀಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಮಾಯಕ ಕಾರ್ಮಿಕರ ಜೀವ ಉಳಿಸುವುದು ಈಗ ಅತ್ಯಂತ ಅಗತ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us