
ಉತ್ತರ ಕನ್ನಡ, ಡಿ.30: ಹೊಸ ವರ್ಷಾಚರಣೆಗೆ ಎಲ್ಲಿಗಾದರೂ ಹೋಗಬೇಕು ಎಂದು ಪ್ಲಾನ್ ಮಾಡಿಕೊಂಡು ಪ್ರವಾಸಿಗರು ಉತ್ತರ ಕನ್ನಡದ (Uttara Kannada) ಹಲವಾರು ರಮಣೀಯ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರು ಬರುತ್ತಿದ್ದು, ಕ್ರಿಸ್ಮಸ್ ದಿನದಿಂದಲೇ ಪ್ರವಾಸಿಗರು ಉತ್ತರ ಕನ್ನಡದ ಹಲವು ಭಾಗಗಳಿಗೆ ಬರುತ್ತಿದ್ದಾರೆ. ಡಿ.25ರಿಂದ ಗೋಕರ್ಣ, ಹೊನ್ನಾವರ ಹೋಂ ಸ್ಟೇ, ರೆಸಾರ್ಟ್‌ಗಳು ತುಂಬಿದೆ. ಇನ್ನು ಈ ಪ್ರದೇಶದಲ್ಲಿ ಬೀಚ್ ಹಾಗೂ ಹೆಚ್ಚಿನ ಪ್ರವಾಸಿ ತಾಣಗಳು ಇರುವ ಕಾರಣ ಈ ಭಾಗವನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಇದನ್ನೇ ಲಾಭ ಮಾಡಿಕೊಂಡ ಹೋಂ ಸ್ಟೇ, ರೆಸಾರ್ಟ್ಗಳ ಮಾಲೀಕರು ದರಗಳನ್ನು ಕೂಡ ಏರಿಕೆ ಮಾಡಿಕೊಂಡಿದ್ದಾರೆ.
ಉತ್ತರಕನ್ನಡದ ಈ ಪ್ರದೇಶಗಳಿಗೆ ಹೆಚ್ಚಿನ ಜನರು ಬರುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಿದೆ. ಇದರ ಜತೆಗೆ ಹೋಂ ಸ್ಟೇ ಹಾಗೂ ರೆಸಾರ್ಟ್ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ನ್ಯೂ ಇಯರ್ ದಿನ ಯಾವುದೇ ತೊಂದರೆ ಆಗಬಾರದು ಎಂದು ಡಿ.24ರಿಂದ ಜಿಲ್ಲೆಯಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಭದ್ರತೆಗೆ 1300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಗೋಕರ್ಣ, ಮುರುಡೇಶ್ವರದಲ್ಲಿ 200ಕ್ಕೂ ಹೆಚ್ಚು ಹೋಂ ಗಾರ್ಡ್ಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 31 ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ. ಜತೆಗೆ ಪ್ರವಾಸಿಗರು ರಾತ್ರಿ ವೇಳೆ ಸಮುದ್ರಕ್ಕಿಳಿಯುವಂತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಹೇಳಿದ್ದಾರೆ.
ಇನ್ನು ಪಾರ್ಟಿ ವೇಳೆ ಏನಾದರೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾದರೆ, ಹೋಂ ಸ್ಟೇ, ರೆಸಾರ್ಟ್ ಹಾಗೂ ಪ್ರವಾಸಿಗರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು, ಈಗಾಗಲೇ ಕಳೆದ ನಾಲ್ಕು ದಿನಗಳಿಂದ 156 ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೋಂ ಸ್ಟೇ ಹಾಗೂ ರೆಸಾರ್ಟ್ ಗಳ ಮೇಲೆ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುಮಾನ ಬಂದ ಕಡೆ ರೈಡ್ ಮಾಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕಡಲ ತೀರಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಎಂ.ಎನ್.ದೀಪನ್ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜು: ಪಬ್ಗಳಲ್ಲಿ ಹೇಗಿದೆ ಸುರಕ್ಷತಾ ಕ್ರಮ? ಇಲ್ಲಿದೆ ನೋಡಿ
ಹೋಂ ಸ್ಟೇ ಮತ್ತು ರೆಸಾರ್ಟ್ ದರ ನಿಗದಿ ಮಾಡುವ ಹಕ್ಕು ನಮಗಿಲ್ಲ, ಮಾಲೀಕರ ಅನುಕೂಲಕ್ಕೆ ತಕ್ಕಂತೆ ದರ ನಿಗದಿ ಮಾಡಿರುತ್ತಾರೆ. ಸಿಜನ್ ಸಮಯದಲ್ಲಿ ದರ ಹೆಚ್ಚು ಮಾಡಿದ್ರೆ ನಾವು ಏನೂ ಮಾಡೋಕೆ ಆಗಲ್ಲ. ಅವರು ಎಷ್ಟೇ ದರ ಏರಿಕೆ ಮಾಡಿದ್ರು, ಅದನ್ನು ಕೇಳುವ ಹಕ್ಕಿಲ್ಲ. ಕಡಲ ತೀರದಲ್ಲಿ ಹೋಂ ಗಾರ್ಡ್ ಇರಲಿಲ್ಲ. ಆದರೆ ಇದೀಗ ಎಲ್ಲ ಕಡೆಗೂ ಲೈಫ್ ಗಾರ್ಡ್ ಹಾಕಲಾಗಿದೆ. ಕೆಲವು ಕಡೆ ಇನ್ನಷ್ಟು ಸುರಕ್ಷತಾ ಸಲಕರಣೆಯ ಅವಶ್ಯಕತೆ ಇದೆ. ಮುಂದಿನ ತಿಂಗಳಲ್ಲಿ ಖರೀದಿ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ