ಉತ್ತರ ಕನ್ನಡ: ಕಾಳಿ ನದಿ ಆಯ್ತು, ಈಗ ಅಘನಾಶಿನಿಯಲ್ಲಿ ಅಕ್ರಮ ಮರಳು ದಂಧೆ!

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿ ಬಳಿಕ ಇದೀಗ ಕುಮಟಾದ ಅಘನಾಶಿನಿ ನದಿಯಲ್ಲೂ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಕುಮಟಾ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ನಡೆಯುತ್ತಿದ್ದ ಈ ಹಗಲು ದರೋಡೆಯನ್ನು ಟಿವಿ9 ಕ್ಯಾಮೆರಾ ಸರೆಹಿಡಿದಿದೆ. ಗಣಿ ಇಲಾಖೆ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ: ಕಾಳಿ ನದಿ ಆಯ್ತು, ಈಗ ಅಘನಾಶಿನಿಯಲ್ಲಿ ಅಕ್ರಮ ಮರಳು ದಂಧೆ!
ಅಕ್ರಮ ಮರಳು ದಂಧೆ
Edited By:

Updated on: Oct 25, 2026 | 2:52 PM

ಮುಖ್ಯಾಂಶಗಳು

  • ಅಘನಾಶಿನಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಟಿವಿ9 ಮುಖೇನ ಬ್ರೇಕ್.
  • ಕುಮಟಾ ಪೊಲೀಸ್ ಠಾಣೆ ಬಳಿಯೇ ರಾಜಾರೋಷವಾಗಿ ನಡೆಯುತ್ತಿತ್ತು ಮರಳು ದಂಧೆ.
  • ಗಣಿ ಇಲಾಖೆ ಹಾಗೂ ತಾಲೂಕು ಆಡಳಿತದ ವಿರುದ್ಧ ಸ್ಥಳೀಯರಿಂದ ಆಕ್ರೋಶ.

ಉತ್ತರ ಕನ್ನಡ, ಅಕ್ಟೋಬರ್ 25: ಈ ಹಿಂದೆ ಕಾರವಾರದ ಕಾಳಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಕುರಿತು ವರದಿ ಪ್ರಸಾರ ಮಾಡಿದ್ದ ಟಿ.ವಿ 9, ಆ ಮೂಲಕ ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಕಾರಣವಾಗಿತ್ತು. ಟಿ.ವಿ‌ 9 ವರದಿ ಪ್ರಸಾರದ ಬೆನ್ನಲ್ಲೇ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಿದ್ದ ಅಧಿಕಾರಿಗಳು ಸುಮಾರು 400 ಮೆಟ್ರಿಕ್ ಟನ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದರು. ಆದರೆ ಈಗ ಮತ್ತೊಮ್ಮೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮುಂದುವರಿದಿದ್ದು, ಈ ಬಾರಿ ಕುಮಟಾ ತಾಲೂಕಿನ ಅಘನಾಶಿನಿ ನದಿಯಲ್ಲಿ ಹಾಡುಹಗಲೇ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಅಕ್ರಮ ದಂಧೆ

ಕುಮಟಾ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಅಕ್ರಮ ದಂಧೆ ನಡೆಯುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಉತ್ತರ ಭಾರತ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಬೋಟ್‌ಗಳ ಮೂಲಕ ನದಿಯಿಂದ ಮರಳು ತೆಗೆದು, ನೇರವಾಗಿ ಲಾರಿಗಳಿಗೆ ಲೋಡ್ ಮಾಡಲು ಪ್ರತ್ಯೇಕ ರಸ್ತೆಯನ್ನೇ ನಿರ್ಮಿಸಲಾಗಿದೆ. ಟಿವಿ9 ಕ್ಯಾಮರಾ ಕಂಡು ದಂಧೆಕೋರರು ಬೋಟ್ ಹಾಗೂ ಮರಳಿನೊಂದಿಗೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ ಕಾಳಿ ನದಿಯ ಒಡಲಿಗೆ ಕನ್ನ: ಕಾರವಾರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ; ಗೋವಾಕ್ಕೂ ಸಾಗಾಟ!

ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಸ್ಥಳೀಯರ ಆಕ್ರೋಶ

ಸಕ್ರಮ ಮರಳುಗಾರಿಕೆಗೆ ಅವಕಾಶವಿಲ್ಲದಿರುವುದು ದಂಧೆಕೋರರಿಗೆ ವರದಾನವಾಗಿದ್ದು, ಸಾಮಾನ್ಯ ಜನರು ನಾಲ್ಕು ಪಟ್ಟು ಹೆಚ್ಚು ಹಣ ನೀಡಿ ಮರಳು ಖರೀದಿಸಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲೂಕು ಆಡಳಿತದ ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಹಗಲು ದರೋಡೆ ನಡೆಯುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಳಿ ನದಿಯಂತೆ ಅಘನಾಶಿನಿ ನದಿಯಲ್ಲೂ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗೆ ಹಿರಿಯ ಅಧಿಕಾರಿಗಳು ತಕ್ಷಣವೇ ಬ್ರೇಕ್ ಹಾಕಿ, ಇದಕ್ಕೆ ಸಹಕಾರ ನೀಡುತ್ತಿರುವ ಭ್ರಷ್ಟ ಅಧಿಕಾರಿಗಳ ಹಾಗೂ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us