ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ: ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿದ್ದು ನಿಜವೆಂದ ಡಿಕೆ ಶಿವಕಮಾರ್
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎಂದರಾದ ಹಗರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ವೈರಲ್ ಆಗಿರುವ ವಿಡಿಯೋ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋ ಬಗ್ಗೆ ತಿಳಿದಿಲ್ಲ ಎಂದ ಅವರು, ಅಧಿಕಾರಿಗಳು ಅಧಿಕಾರವನ್ನು ದುರುಬಳಕೆ ಮಾಡಿಕೊಂಡಿದ್ದು ನಿಜ ಎಂದು ಒಪ್ಪಿದ್ದಾರೆ. ಡಿಕೆ ಶಿವಕುಮಾರ್ ಮಾತಿನ ವಿವರ ಇಲ್ಲಿದೆ.
ಬೆಂಗಳೂರು, ಜುಲೈ 9: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ನಿಜ ಎಂದು ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅಧಿಕಾರಿಗಳು ಅಧಿಕಾರವವನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಜ. ಹಾಗೆಂದು ಪ್ರಕರಣದಲ್ಲಿ ನಮ್ಮ ಸಚಿವರು, ಶಾಸಕರು ಯಾರೂ ಶಾಮೀಲಾಗಿಲ್ಲ ಎಂದರು.
ಈಗಾಗಲೇ ಸಿಐಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಡೆಸಲು ಸಿಐಡಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಪ್ರಕರಣ ಸಂಬಂಧ ಮಂತ್ರಿಯಿಂದ ರಾಜೀನಾಮೆ ಪಡೆದಿದ್ದೇವೆ. ತನಿಖೆಗೆ ಸಹಕಾರ ನೀಡುವುದಾಗಿ ಹೇಳಿ ರಾಜೀನಾಮೆ ನೀಡಿದ್ದಾರೆ. ಅಧಿಕಾರಿಗಳು ಶಾಮೀಲಾಗಿರುವುದು ಗೊತ್ತಾಗಿದೆ. ಆದರೆ ಅಧಿಕಾರಿಗಳ ಆಡಿಯೋ ವಿಡಿಯೋ ಬಗ್ಗೆ ಗೊತ್ತಿಲ್ಲ ಎಂದರು.
‘ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಿಎಂ ಸಹಮತ’
ರಾಮನಗರ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಜಿಲ್ಲೆಯ ಹೆಸರು ಬದಲಿಸುವಂತೆ ಮನವಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡಲು ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಮೊದಲು ಬೆಂಗಳೂರು ಜಿಲ್ಲೆಗೆ ರಾಮನಗರ ಕೂಡ ಸೇರಿತ್ತು. ನಂತರ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಹೆಸರು ಬದಲಾವಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಈಗಿರುವ ರಾಮನಗರವೇ ಕೇಂದ್ರ ಕಚೇರಿ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರಲಿದೆ. ಈ ವಿಚಾರವನ್ನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ಆಡಿಯೋ ವೈರಲ್
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಸರ್ವೆ ಮಾಡಿ 2032ಕ್ಕೆ ವರದಿ ನೀಡಲಿದ್ದಾರೆ. ಅಷ್ಟೊತ್ತಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಬೆಂಗಳೂರಿಗೆ ಪರ್ಯಾಯ ಮಾರ್ಗ ಮಾಡಬೇಕಾಗುತ್ತದೆ. ಆ ದೃಷ್ಟಿಯಿಂದ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ