ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ: ಒಪ್ಪಿಕೊಂಡ ಸಚಿವ ನಾಗೇಂದ್ರ

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಚಂದ್ರಶೇಖರ್​ ಡೆತ್​ ನೋಟ್​ ಬರೆದಿದ್ದು, ನಿಗಮದಲ್ಲಿ 80 ರಿಂದ 85 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಅವ್ಯವಹಾರದಲ್ಲಿ ನನಗೆ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ಮೇಲಾಧಿಕಾರಿಗಳೇ ಕಾರಣ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ಉರುಳಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ: ಒಪ್ಪಿಕೊಂಡ ಸಚಿವ ನಾಗೇಂದ್ರ
ಸಚಿವ ಬಿ ನಾಗೇಂದ್ರ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:May 28, 2024 | 4:33 PM

ಬೆಂಗಳೂರು, ಮೇ 28: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Scheduled Tribes Development Corporation) ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಒಂದು ಬ್ಯಾಂಕ್​ನಿಂದ ಇನ್ನೊಂದು ಬ್ಯಾಂಕ್​ಗೆ ನಿಮಗದ ಹಣ ವರ್ಗಾವಣೆ ಆಗಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಮಗೆ ಮಾಹಿತಿ ನೀಡಿದ್ದಾರೆ. ಸುಮಾರು 87 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 23 ಕೋಟಿ ಹಣ ನಿಗಮದ ಖಾತೆಗೆ ವಾಪಸ್​ ಆಗಿದೆ. ಬಾಕಿ ಉಳಿದ ಹಣವನ್ನು ನಿಗಮದ ಖಾತೆಗೆ ಮರು ವರ್ಗಾವಣೆ ಮಾಡುವಂತೆ ಈಗಾಗಲೆ ಯೂನಿಯನ್ ಬ್ಯಾಂಕ್ ಆಫ್​​ ಇಂಡಿಯಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಸಂಜೆಯೊಳಗೆ ಉಳಿದ 50 ಕೋಟಿ ರೂ. ಹಣ ಜಮೆ ಆಗುತ್ತದೆ ಎಂದು ಪರಿಶಿಷ್ಟ ಕಲ್ಯಾಣ ಸಚಿವ ಬಿ. ನಾಗೇಂದ್ರ (B Nagendra) ಹೇಳಿದರು.

“ಸಚಿವ ಬಿ. ನಾಗೇಂದ್ರ ಅವರು ಈ ಹೇಳಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ನಿಜ ಎಂದು ಒಪ್ಪಿಕೊಂಡಂತಾಗಿದೆ.”

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಹೇಗೆ ಹಣ ದುರುಪಯೋಗ ಆಗಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಕೂಡ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ. ನಮ್ಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಕೂಡ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್​ಗೆ ಹಣ ವರ್ಗಾವಣೆಯಾದ ಬಗ್ಗೆ ನಿಗಮದ ಎಂಡಿ ಅವರ ಗಮನಕ್ಕೂ ಬಂದಿಲ್ಲ. ನಿಗಮದ ಎಂಡಿಯವರ ಸಹಿ ಎಫ್​ಎಸ್​ಎಲ್​ಗೆ ಕಳುಹಿಸಿದ್ದೇವೆ. ಅದು ಎಂಡಿ ಪದ್ಮನಾಭ್ ಅವರ ಸಹಿಯೇ ಅಂತ ಗೊತ್ತಾದರೆ ಅವರನ್ನು ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಅದನ್ನು ಪತ್ತೆ ಹೆಚ್ಚುತ್ತೇವೆ. ಸಿಐಡಿ ಈಗಾಗಲೆ ತನಿಖೆ ಆರಂಭಿಸಿದೆ ಎಂದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ: ಡೆತ್​ನೋಟ್​ ಬರೆದಿಟ್ಟು ಅಧೀಕ್ಷಕ ಆತ್ಮಹತ್ಯೆ

ಇದರಲ್ಲಿ ನನ್ನ ಪಾತ್ರ ಇಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ವಿರುದ್ಧ ಕ್ರಮ ಆಗಿಯೇ ಆಗುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಕೇಳುತ್ತಿರುವುದು ಅವರ ಪ್ರಕಾರ ಸರಿ ಇರಬಹುದು. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಗರಣದಲ್ಲಿ ನಾಲ್ವರು ಅಧಿಕಾರಿಗಳ ಹೆಸರು ಕೇಳಿ ಬಂದಿರುವ ಬಗ್ಗೆ ಮಾತನಾಡಿದ ಅವರು, ನಾಲ್ವರು ಅಲ್ಲ, 10 ಅಧಿಕಾರಿಗಳು ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Tue, 28 May 24