ರಾಯಚೂರಿಗೆ ತಿಮರೋಡಿ ಗಡಿಪಾರಿಗೆ ವಿರೋಧ: ಮಹೇಶ್ ಶೆಟ್ಟಿ ಮೇಲಿರೋ ಕೇಸ್ಗಳು ಎಷ್ಟು?
ಮಹೇಶ್ ಶೆಟ್ಟಿ ತಿಮರೋಡಿಯನ್ನ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿರುವುದನ್ನ ವಿವಿಧ ಸಂಘಟನೆಗಳು ಖಂಡಿಸಿವೆ. ಮಹೇಶ್ ಶೆಟ್ಟಿ ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಗೆ ಬೇಡ ಎಂಬ ಆಗ್ರಹ ಒಂದೆಡೆಯಾದ್ರೆ, ತಿಮರೋಡಿ ಗಡಿಪಾರು ಖಂಡಿಸಿ ಬೆಳ್ತಂಗಡಿಯ ಕುಂಜರ್ಪದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಭೆ ಕರೆಯಲಾಗಿದೆ. ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಕೂಡಿಟ್ಟ ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ವಿಚಾರಣೆಯೂ ಇಂದು ನಡೆಯಲಿದೆ.

ರಾಯಚೂರು, ಸೆಪ್ಟೆಂಬರ್ 24: ಸೌಜನ್ಯಪರ ಹೋರಾಟಗಾರ ಮತ್ತು ಧರ್ಮಸ್ಥಳ ‘ಬುರುಡೆ’ ಪ್ರಕರಣದಲ್ಲಿಯೂ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನ (Mahesh Shetty Thimarodi) ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿರುವುದಕ್ಕೆ ವಿರೋಧ ಕೇಳಿಬಂದಿದೆ. ರಾಯಚೂರಿನ (Raichur) ದಲಿತ ಸೇನೆ, ಸಮಾನ ಮನಸ್ಕರ ವೇದಿಕೆ ಇದನ್ನು ವಿರೋಧಿಸಿದ್ದು, ನಮ್ಮ ಜಿಲ್ಲೆಗೆ ಮಹೇಶ್ ಶೆಟ್ಟಿ ತಿಮರೋಡಿ ಬೇಡವೇ ಬೇಡ ಎಂದಿದೆ. ಅಲ್ಲದೆ ತಿಮರೋಡಿಯನ್ನು ಯಾವುದಾದರೂ ಕಾಡಿಗೆ ಕಳುಹಿಸುವಂತೆ ಆಗ್ರಹಿಸಿದೆ. ಮತ್ತೊಂದೆಡೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಕುಂಜರ್ಪದಲ್ಲಿ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಈ ಸಭೆ ನಡೆಯಲಿದೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ 1992ರಿಂದ ಈವರೆಗೆ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 13 ಪ್ರಕರಣಗಳಲ್ಲಿ ಖುಲಾಸೆಗೊಂಡಿರುವ ಬಗ್ಗೆ ಪೊಲೀಸ್ ವರದಿಯಲ್ಲಿ ಉಲ್ಲೇಖವಿದೆ. 1998ರಲ್ಲೇ ತಿಮರೋಡಿ ವಿರುದ್ಧ ಪೊಲೀಸ್ ಇಲಾಖೆ ರೌಡಿ ಶೀಟ್ ತೆರೆದಿದ್ದು ಸೇರಿ ಗಡಿಪಾರಿಗೆ ಸಾಕಷ್ಟು ಅಂಶಗಳನ್ನ ಉಲ್ಲೇಖಿಸಲಾಗಿದೆ. ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ತಂದೊಡ್ಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನ ತಿಮರೋಡಿ ಮಾಡಿದ್ದಾರೆ. ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ವ್ಯವಸ್ಥೆಗೆ, ಸಮಾಜದ ಗಣ್ಯರು ಮತ್ತು ಸರ್ಕಾರದ ಬಗ್ಗೆ ತುಚ್ಛವಾಗಿ ಮಾತನಾಡಿ, ಕಾನೂನು ಸುವ್ಯವಸ್ಥೆಗೆ ಭಂಗವಾಗುವ ರೀತಿ ವರ್ತಿಸಿರುತ್ತಾರೆ. ಇವಿಷ್ಟೇ ಅಲ್ಲದೆ ಪದೇ ಪದೇ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿ ಹಿನ್ನೆಲೆ ತ್ವರಿತವಾಗಿ ಗಡಿಪಾರು ಪ್ರಕ್ರಿಯೆ ಕೈಗೊಳ್ಳುವಂತೆ ಪುತ್ತೂರು ಎ.ಸಿ ಯವರಿಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷರು ಮನವಿ ಮಾಡಿದ್ದರು.
ಇದನ್ನೂ ಓದಿ: ಬೆಳಿಗ್ಗೆ ಅರ್ಚಕ, ರಾತ್ರಿ ಕಳ್ಳ: ಕದ್ದ ಬಳಿಕ ದೇವರಿಗೆ ಕ್ಷಮೆಯಾಚಿಸುತ್ತಿದ್ದ ಆಸಾಮಿಗಳು ಅಂದರ್!
ತಿಮರೋಡಿ ಗಡಿಪಾರು ಆದೇಶದ ಪ್ರತಿ TV9ಗೆ ಲಭ್ಯ
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದ ಪ್ರತಿ TV9ಗೆ ಲಭ್ಯವಾಗಿದ್ದು, ಆದೇಶದಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ತಿಮರೋಡಿಯನ್ನು ಸೆಪ್ಟೆಂಬರ್ 18ರಿಂದ ಒಂದು ವರ್ಷದ ವರೆಗೆ (ಸೆಪ್ಟೆಂಬರ್ 17, 2026) ಗಡಿಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ. ಆದೇಶವನ್ನು ಪಾಲನೆ ಮಾಡದಿದ್ದರೆ ದಸ್ತಗಿರಿ ಮಾಡಿ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಅವರು ಸೂಚಿಸಿದ್ದಾರೆ. ಗಡಿಪಾರು ಆದೇಶದ ಅವಧಿಯಲ್ಲಿ ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯ ಮುಂದೆ ಹಾಜರಾಗಲೂ ಸೂಚಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರವೇಶಕ್ಕೆ ತಿಮರೋಡಿಗೆ ನಿರ್ಬಂಧವಿದೆ. ಆದರೆ ಪ್ರಕರಣದ ತನಿಖೆಗೆ, ನ್ಯಾಯಾಲಯದಲ್ಲಿರುವ ಕೇಸ್ಗಳ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಕೂಡಿಟ್ಟ ಪ್ರಕರಣ ವಿಚಾರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ತಿಮರೋಡಿಗೆ ಇಂದು ನಿರೀಕ್ಷಣಾ ಜಾಮೀನು ಸಿಗೋದು ಡೌಟ್ ಎನ್ನಲಾಗಿದೆ. ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:15 pm, Wed, 24 September 25



