ಹಾವೇರಿ: ಒಂದು ಮನೆ ನಿರ್ಮಾಣ ಆಗಬೇಕು ಎಂದರೆ ಇಂಜನೀಯರ್, ಗಾರೆ ಕೆಲಸ ಮಾಡುವವರು ಹೀಗೆ ಹಲವು ಜನರು ಬೇಕು. ಆದರೆ ಹಾವೇರಿಯಲ್ಲಿ ನಿರ್ಮಾಣವಾಗಿರುವ ಮನೆಗಳು ಯಾರ ಸಹಾಯವು ಇಲ್ಲದೆ ಕೇವಲ ಮಣ್ಣಿನಿಂದ ನಿರ್ಮಾಣವಾಗಿದೆ. ಮುತ್ತಿನ ಸರಗಳಿಂದ ನಿರ್ಮಿಸಿದಂತೆ ಕಾಣುವ ಈ ಮನೆಗಳು ನೋಡುವುದಕ್ಕೆ ಅದ್ಭುತವಾಗಿ ಕಾಣುತ್ತಿದ್ದು, ಗುಬ್ಬಿಗಳೇ ಈ ಮನೆಯ ವಾರಸುದಾರರು.
ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಹಿಂಡು ಹಿಂಡಾಗಿ ನದಿ ದಡದಲ್ಲಿನ ಮಣ್ಣನ್ನು ಹೊತ್ತೊಯ್ಯುತ್ತಿರುವ ಈ ಗುಬ್ಬಚ್ಚಿಗಳ ಹೆಸರು ಅಂಬರ ಗುಬ್ಬಿಗಳು. ಸಾಮಾನ್ಯವಾಗಿ ಈ ಗುಬ್ಬಚ್ಚಿಗಳು ನದಿ, ಕೆರೆ ಅಥವಾ ಹಳ್ಳದ ಬಳಿ ತಮ್ಮ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ನದಿ ದಡದಲ್ಲಿ ಸಿಗುವ ಫಲವತ್ತಾದ ಮಣ್ಣನ್ನು ಒಯ್ದು ಗೂಡು ನಿರ್ಮಿಸಿಕೊಳ್ಳುತ್ತವೆ.
ಪುಟ್ಟ ಪುಟ್ಟದಾಗಿರುವ ಈ ಗುಬ್ಬಚ್ಚಿಗಳು ಫಲವತ್ತಾದ ಮಣ್ಣನ್ನು ತಮ್ಮ ಕೊಕ್ಕಿನಲ್ಲಿಟ್ಟುಕೊಂಡು ಬಂದು ಮನೆ ನಿರ್ಮಿಸಿಕೊಂಡು ಸಂಸಾರ ನಡೆಸುತ್ತವೆ. ಹಾವು ಸೇರಿದಂತೆ ಇನ್ನಿತರ ಪ್ರಾಣಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಬ್ರಿಡ್ಜ್ ನ ಕೆಳಭಾಗದಲ್ಲಿ ಈ ಅಂಬರ ಗುಬ್ಬಿಗಳು ಗೂಡು ನಿರ್ಮಿಸಿಕೊಂಡಿವೆ. ಉತ್ತರ ಭಾರತದಿಂದ ಈ ಭಾಗಕ್ಕೆ ವಲಸೆ ಬರುವ ಅಂಬರ ಗುಬ್ಬಿಗಳು ಕೆಲಕಾಲ ಇಲ್ಲಿದ್ದು, ಮತ್ತೆ ತಮ್ಮೂರಿನತ್ತ ವಾಪಸ್ ಆಗುತ್ತವೆ.
ಉಂಡೆ ಆಕಾರದಲ್ಲಿ ಕೊಕ್ಕಿನಲ್ಲಿ ಮಣ್ಣು ಒಯ್ದು ಮನೆ ನಿರ್ಮಿಸಿಕೊಳ್ಳುತ್ತವೆ. ಉಂಡೆ ಆಕಾರದ ಮಣ್ಣು ಒಯ್ದು ಮನೆ ನಿರ್ಮಿಸಿಕೊಳ್ಳುತ್ತವೆ. ಹೀಗಾಗಿ ಇವುಗಳ ಮನೆಗಳು ನೋಡಲು ಥೇಟ್ ಮುತ್ತಿನಿಂದ ನಿರ್ಮಿಸಿದ ಮನೆಗಳಂತೆ ಕಾಣುತ್ತವೆ. ಕೆಲವು ದಿನಗಳ ಕಾಲ ಮಣ್ಣನ್ನು ಒಯ್ದು ಮನೆಗಳನ್ನ ನಿರ್ಮಿಸುತ್ತವೆ. ಇವುಗಳ ಮನೆಗಳ ಬಾಗಿಲುಗಳ ಸಹ ನೋಡಲು ಅದ್ಭುತವಾಗಿ ಕಾಣುತ್ತವೆ. ಅಂಬರ ಗುಬ್ಬಿಗಳು ಮನೆಗಳಲ್ಲಿ ವಾಸ ಮಾಡುವ ರೀತಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದು ಪಕ್ಷಿತಜ್ಞ ಮಾಲತೇಶ ಅಂಗೂರ ಹೇಳಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ತುಂಗಭದ್ರಾ ನದಿ ದಡದಲ್ಲಿರುವ ಅಂಬರ ಗುಬ್ಬಿಗಳು ಯಾರಾದರು ನೋಡಿದರೆ ಕಂಡೊಡನೆ ಮಣ್ಣು ಒಯ್ಯೋದು ಬಿಟ್ಟು ಒಮ್ಮೆಲೆ ಹಾರಿ ಬಿಡುತ್ತವೆ. ಅಂಬರ ಗುಬ್ಬಿಗಳು ಒಂದರ ಹಿಂದೆ ಒಂದು, ಗುಂಪು ಗುಂಪಾಗಿ ಹಾರುವುದನ್ನು ನೋಡಲು ಖುಷಿಯಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿರುವ ಗುಬ್ಬಚ್ಚಿಗಳು ವರ್ಷಕ್ಕೊಮ್ಮ ಹೀಗೆ ನದಿ ದಡದಲ್ಲಿ ನೆಲೆ ನಿಲ್ಲುತ್ತವೆ ಎಂದು ಸಾಹಿತಿ ಪುಷ್ಪಾ ಶಲವಡಿಮಠ ಹೇಳಿದ್ದಾರೆ.
ಸಾಮಾನ್ಯವಾಗಿ ಮನುಷ್ಯರು ಮನೆಗಳ ನಿರ್ಮಾಣಕ್ಕೆ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಬಳಕೆ ಮಾಡುತ್ತಾರೆ. ಆದರೆ ಈ ಅಂಬರ ಗುಬ್ಬಿಗಳು ಕೇವಲ ನದಿ ದಡದಲ್ಲಿ ಸಿಗುವ ಫಲವತ್ತಾದ ಮಣ್ಣನ್ನು ಬಳಸಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತವೆ. ಒಟ್ಟಿನಲ್ಲಿ ಮನುಷ್ಯರಿಗಿಂತಲೂ ಅದ್ಭುತವಾದ ಕಲಾತ್ಮಕತೆ ಬಳಸಿ ಅಂಬರ ಗುಬ್ಬಿಗಳು ಮನೆ ನಿರ್ಮಿಸಿರುವುದನ್ನು ನೋಡಿ ಕಣ್ತುಂಬಿಕೊಳ್ಳಲು ಸಂತೋಷವಾಗುವುದಂತು ನಿಜ.
ಇದನ್ನೂ ಓದಿ:
ಜೀವಂತ ಕಾಡುಪ್ರಾಣಿ ಮಾರಾಟ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ: ವುಹಾನ್ ಪ್ರಕರಣದಿಂದ ಪಾಠ ಕಲಿಯಲು ಸಲಹೆ
ಕೃಷ್ಣಾ, ಘಟಪ್ರಭಾ ಹಿನ್ನೀರಿನಲ್ಲಿ ತಲೆ ಎತ್ತಲಿದೆ ಸುಂದರ ಪಕ್ಷಿಧಾಮ; ಹಲವು ವರ್ಷಗಳ ಬೇಡಿಕೆಗೆ ಸರ್ಕಾರದಿಂದ ಅನುಮೋದನೆ
(very attracting sparrows birds nest is built near river in Haveri)