ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ವಿಮಾನ ಟಿಕೆಟ್ ರದ್ದು, ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ ನಡೆ

| Updated By: ಗಣಪತಿ ಶರ್ಮ

Updated on: May 15, 2024 | 9:01 AM

ಇಂದು ಬರುವ ವಿಮಾನದ ಟಿಕೆಟ್ ರದ್ದು ಮಾಡಿ ಕಾದು ನೋಡುವ ತಂತ್ರವನ್ನು ಪ್ರಜ್ವಲ್ ಅನುಸರಿಸುತ್ತಿದ್ದಾರೆ. ಹೀಗಾಗಿ ವಿಮಾನ ಟಿಕೆಟ್​ಗೆ ನೀಡಿದ್ದ ಹಣವನ್ನು ಹಿಂಪಡೆಯದೆ ಅದನ್ನೇ ಮುಂದಿನ ಟಿಕೆಟ್​ಗೆ ಮುಂಗಡವಾಗಿ ಇಟ್ಟಿದ್ದಾರೆ ಎನ್ನಲಾಗಿದೆ. 3.5 ಲಕ್ಷ ರೂ. ಮೊತ್ತದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ಪ್ರಜ್ವಲ್ ಕಾಯ್ದಿರಿಸಿದ್ದರು.

ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ವಿಮಾನ ಟಿಕೆಟ್ ರದ್ದು, ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ ನಡೆ
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, ಮೇ 15: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇಂದೂ ಸಹ ಬೆಂಗಳೂರಿಗೆ ಬರುವುದು ಅನುಮಾನವಾಗಿದೆ. ಪ್ರಜ್ವಲ್ ರೇವಣ್ಣ ಜರ್ಮನ್​​​​ನ ಮ್ಯೂನಿಚ್​​ನಿಂದ ಬೆಂಗಳೂರಿಗೆ ಬುಕ್ ಆಗಿದ್ದ ವಿಮಾನ ಟಿಕೆಟ್ (Flight Ticket) ರದ್ದುಗೊಳಿಸಲಾಗಿದೆ. ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ಈಗಾಗಲೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಲುಪ್ತಾನ್ಸಾ ವಿಮಾನದಲ್ಲಿ ಬುಕ್ ಆಗಿದ್ದ ಟಿಕೆಟ್ ಅನ್ನು ನಾಲ್ಕು ದಿನಗಳ ಹಿಂದೆಯೇ ರದ್ದು ಮಾಡಿಕೊಂಡಿರುವುದು ತಿಳಿದುಬಂದಿದೆ. ಆದರೆ, ಟಿಕೆಟ್ ರದ್ದು ಮಾಡಿದರೂ ಅದರ ಹಣ ವಾಪಸ್ ಪಡೆಯದೆ ಪ್ರಜ್ವಲ್ ಗೊಂದಲ ಮೂಡಿಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೂಡಿರಬಹುದು ಎನ್ನಲಾಗಿದೆ.

ಈ ಮಧ್ಯೆ, ಪ್ರಜ್ವಲ್ ರೇವಣ್ಣ ಚಲನ ವಲನಗಳ ಮೇಲೆ ಎಸ್ಐಟಿ ತಂಡ ನಿಗಾ ಇಟ್ಟಿದೆ. ಬೇರೆ ವಿಮಾನದಲ್ಲಿ ಟಿಕೆಟ್ ಬುಕ್ ಆಗುತ್ತದೆಯೇ, ಆಗಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್​ಐಟಿ ತಂಡ ಬೀಡುಬಿಟ್ಟಿದೆ.

ಕಾದು ನೋಡುವ ತಂತ್ರ

ಇಂದು ಬರುವ ವಿಮಾನದ ಟಿಕೆಟ್ ರದ್ದು ಮಾಡಿ ಕಾದು ನೋಡುವ ತಂತ್ರವನ್ನು ಪ್ರಜ್ವಲ್ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಮಾನ ಟಿಕೆಟ್​ಗೆ ನೀಡಿದ್ದ ಹಣವನ್ನು ಹಿಂಪಡೆಯದೆ ಅದನ್ನೇ ಮುಂದಿನ ಟಿಕೆಟ್​ಗೆ ಮುಂಗಡವಾಗಿ ಇಟ್ಟಿದ್ದಾರೆ ಎನ್ನಲಾಗಿದೆ. 3.5 ಲಕ್ಷ ರೂ. ಮೊತ್ತದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ಪ್ರಜ್ವಲ್ ಕಾಯ್ದಿರಿಸಿದ್ದರು.

ಈಗಾಗಲೇ 2 ಬಾರಿ ಪ್ರಜ್ವಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಅಂದರೆ ಜೂನ್ 4ರ ನಂತರ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ಮಂಗಳವಾರ ವರದಿಯಾಗಿತ್ತು. ಮತ್ತೊಂದೆಡೆ, ವಾಪಸಾಗುವಂತೆ ಕುಟುಂಬಸ್ಥರಿಂದ ಪ್ರಜ್ವಲ್​ಗೆ ಒತ್ತಡ ಹೆಚ್ಚಾಗಿದೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​: ತಮ್ಮ ಆಪ್ತರ ಬಂಧನಕ್ಕೆ ಸ್ಪಷ್ಟನೆ ನೀಡಿದ ಪ್ರೀತಂಗೌಡ

ಈ ಮಧ್ಯೆ, ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇಂದು ಹೊಳೆನರಸೀಪುರಕ್ಕೆ ತೆರಳಲಿದ್ದಾರೆ. ನಂತರ ವಿವಿಧ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ