ಮಡಿಕೇರಿ: ಖುಷಿಯಲ್ಲಿದ್ದ ರೈತರಿಗೆ ಶಾಕ್, ಕಾಫಿ ದರ ದಿಢೀರ್ ಕುಸಿತ
ಕಳೆದ ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ದಾಖಲೆ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಸಿಕ್ಕಿ ಮಾರಾಟವಾಗಿತ್ತು. ಕಾಪಿ ದರ ಗಗನಕ್ಕೆ ಏರಿತ್ತು. ಆದರೆ ಈ ತಿಂಗಳು ಕಾಫಿ ಬೆಲೆ ದಿಢೀರನೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಕಾಫಿ ಬೆಳೆಗಾರರೆಲ್ಲಾ ಮತ್ತಷ್ಟು ದರ ಏರಿಕೆಯಾಗಬಹುದೆಂಬ ನಿರೀಕ್ಷೆಯಿಂದ ತಮ್ಮ ಸಾವಿರಾರು ಟನ್ ಕಾಫಿಯನ್ನ ಮಾರಾಟ ಮಾಡದೆ ಕೂಡಿಟ್ಟಿದ್ದರು. ಆದರೆ ಈಗ ಲೆಕ್ಕಾಚಾರ ತಲೆ ಕೆಳಗಾಗಿದೆ.
ಕೊಡಗು , ಮೇ.15: ಕಾಫಿ ಕಣಜ ಕೊಡಗು ಜಿಲ್ಲೆಯ ಕಾಫಿ (Coffee) ಬೆಳೆಗಾರರ ಮುಖದಲ್ಲಿ ಎಷ್ಟೋ ವರ್ಷಗಳ ಬಳಿಕ ಮಂದಹಾಸ ಮೂಡಿತ್ತು. ನಿರೀಕ್ಷೆಗೂ ಮೀರಿ ಕಾಫಿ ದರ ಗಗನಕ್ಕೇರಿತ್ತು. ಆದರೆ ಇದೀಗ ಏಕಾಏಕಿ ದರ ಕುಸಿತವಾಗುತ್ತಿದೆ. ಇದು ಕಾಫಿ ಕಣಜ ಕೊಡಗು ಜಿಲ್ಲೆಯನ್ನ ಆತಂಕಕ್ಕೆ ದೂಡಿದೆ.
ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದವರೆಗೂ ಖುಷಿಯೋ ಖುಷಿ ಇತ್ತು. ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ರೀತಿ ಕಾಫಿ ಬೆಲೆ ಗಗನಕ್ಕೆ ಏರಿತು. ಪ್ರತಿ ವರ್ಷ 50 ಕೆಜಿ ಕಾಫಿ ಚೀಲಕ್ಕೆ ಅಬ್ಬಬ್ಬಾ ಅಂದ್ರೆ 3 ಸಾವಿರ ರೂ ಆಸುಪಾಸಿನಲ್ಲಿ ಬೆಲೆ ಇರ್ತಾ ಇತ್ತು. ಆದರೆ ಈ ಬಾರಿ ಭರ್ತಿ 11 ಸಾವಿರ ರೂ ವರೆಗೆ ದರ ದಾಖಲಿಸಿತ್ತು. 300% ಅಧಿಕ ದರ ದಾಖಲಿಸಿ ಕೊಡಗಿನ ಸಣ್ಣ ಪುಟ್ಟ ಕಾಫಿ ಬೆಳೆಗಾರರೆಲ್ಲಾ ಇನ್ನಿಲ್ಲದ ಖುಷಿ ಪಟ್ಟಿದ್ದರು. ಆದರೆ ಏಪ್ರಿಲ್ ಅಂತ್ಯದವರೆಗೂ ಏರುಗತಿಯಲ್ಲಿದ್ದ ಕಾಫಿ ದರ ಮೇ ಶುರುವಾಗುತ್ತಲೇ ಇಳಿಕೆಯಾಗಲಾರಂಭಿಸಿದೆ. ಯಾವ ಕಾರಣಕ್ಕಾಗಿ ದರ ಕುಸಿತವಾಗುತ್ತಿದೆ ಎಂಬ ಅರಿವೇ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆ, ಕಾಫಿ ಬೆಳೆಗಾರರಲ್ಲಿ ಹರ್ಷೋಲ್ಲಾಸ
ಜಿಲ್ಲೆಯಲ್ಲಿ ಕಾಫಿ ಬೆಳೆಯ ಬೆಲೆ ಏರಿಕೆಯಾಗುತ್ತಿದ್ದಂತೆ ದೊಡ್ಡ ದೊಡ್ಡ ಕಾಫಿ ಬೆಳೆಗಾರರೆಲ್ಲಾ ಮತ್ತಷ್ಟು ದರ ಏರಿಕೆಯಾಗಬಹುದೆಂಬ ನಿರೀಕ್ಷೆಯಿಂದ ತಮ್ಮ ಸಾವಿರಾರು ಟನ್ ಕಾಫಿಯನ್ನ ಮಾರಾಟ ಮಾಡದೆ ಕೂಡಿಟ್ಟಿದ್ದರು. ಆದರೆ ಇದೀಗ ಏಕಾ ಏಕಿ ಅನಿರೀಕ್ಷಿತವಾಗಿ ಕಾಫಿ ಮಾರುಕಟ್ಟೆ ಇಳಿಕೆಯತ್ತ ಸಾಗಿರುವುದು ಇವರೆಲ್ಲರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಕುಸಿಯಬಹುದು ಎನ್ನುವ ಆತಂಕವೂ ಇದೆ.
ಕಳೆದ ಮೂರು ವರ್ಷಗಳ ಕಾಲ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆ ನೆಲಕಚ್ಚಿತ್ತು. ಆದರೆ ಈ ಬಾರಿ ಕಾಫಿ ಬೆಳೆ ಕೊಡಗಿನ ರೈತರ ಕೈ ಹಿಡಿದಿದೆ ಎಂದೇ ಎಲ್ಲರು ಭಾವಿಸಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅನಿಶ್ಚಿತತೆಯಿಂದಾಗಿ ಕೊಡಗಿನ ಕಾಫಿ ಬೆಳೆಗಾರರು ಅತಂತ್ರವಾಗುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ