ವಿಜಯನಗರ, (ನವೆಂಬರ್ 20): ವಿಜಯನಗರದಲ್ಲಿ (Vijayanagara) ಮದುವೆಗೆ ಇನ್ನೆರಡು ದಿನ ಇರುವಾಗಲೇ ಮಧುಮಗಳು(bride) ಆತ್ಮಹತ್ಯೆ(suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ವಿಜಯನಗರದ ಟಿ.ಬಿ. ಡ್ಯಾಂ ಕಾಲೋನಿ ಅಶೋಕ್ ಹಾಗೂ ಐಶ್ವರ್ಯ ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇವರ ಮದುವೆ ಇದೇ ನವೆಂಬರ್ 23ಕ್ಕೆ ನಿಗದಿಯಾಗಿತ್ತು. ಆದ್ರೆ, ಮದ್ವೆಗೆ ಎರಡು ದಿನ ಬಾಕಿ ಇರುವಾಗಲೇ ಏಕಾಏಕಿ ಐಶ್ವರ್ಯ, ಪ್ರಿಯಕರ ಅಶೋಕ್ ಮನೆಯಲ್ಲೇ ಸಾವಿಗೆ ಶರಣಾಗಿದ್ದಾಳೆ. ಇದೀಗ ಈ ಸಾವಿನ ಹಿಂದೆ ಜಾತಿಯ ಕರಿನೆರಳು ಬೀರಿದೆ.
ಹೌದು…ಐಶ್ವರ್ಯ ಕೆಳ ಜಾತಿಯವಳಾಗಿದ್ದು, ಅಶೋಕ್ ಮೇಲ್ಜಾತಿಯವನಾಗಿದ್ದಾನೆ. ಹೀಗಾಗಿ ಅಶೋಕ್ ಪೋಷಕರು, ಐಶ್ವರ್ಯಳನ್ನು ಮನೆ ತುಂಬಿಸಿಕೊಳ್ಳಬೇಕಾದರೆ ಕೆಲವೊಂದಿಷ್ಟು ಷರತ್ತುಗಳನ್ನು ಹಾಕಿದ್ದಾರೆ. ಈ ಮದುವೆಗೆ ಐಶ್ವರ್ಯ ಪೋಷಕರು ಬರಬಾರದು ಎನ್ನುವ ಷರತ್ತು ಹಾಕಿದ್ದು. ಅಲ್ಲದೇ ಐಶ್ವರ್ಯಗೂ ಸಹ ಯುವಕನ ಮನೆಯವರು ಜಾತಿ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಐಶ್ವರ್ಯ ಸಾವಿನ ಮನೆ ಸೇರಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾಧ್ಯಮಳಿಗೆ ಪ್ರತಿಕ್ರಿಯಿಸಿದ್ದು, ಐಶ್ವರ್ಯಾ ಮತ್ತು ಅಶೋಕ್ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನವೆಂಬರ್ 23ರಂದು ಇಬ್ಬರ ಮದುವೆ ನಿಗದಿಯಾಗಿತ್ತು. ಯುವತಿ ಕೆಳಜಾತಿ ಎಂಬ ಕಾರಣಕ್ಕೆ ಯುವಕನ ಮನೆಯವರಿಂದ ಕಿರುಕುಳ ನೀಡಿದ್ದಾರೆ. ಕಿರುಕುಳದ ಬಗ್ಗೆ ತನ್ನ ಸಹೋದರಿ ಬಳಿ ಮೃತ ಐಶ್ವರ್ಯಾ ಹೇಳಿಕೊಂಡಿದ್ದಳು. ಈ ಬಗ್ಗೆ ಪ್ರಿಯಕರ ಅಶೋಕ್ ಕುಟುಂಬದ 6 ಜನರ ವಿರುದ್ಧ ಟಿ.ಬಿ.ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಶ್ವರ್ಯ ತನ್ನ ಪ್ರಿಯಕರ ಅಶೋಕ್ ಮನೆಯಲ್ಲಿ ಮೃತಪಟ್ಟಿದ್ದಾಳೆ. ಅರೇ ಇದೇನಿದು ಮದುವೆ ಮುಂಚೆಯೇ ಹುಡುಗನ ಮನೆಗೆ ಹೇಗೆ ಹೋಗಿದ್ದಾಳೆ ಎನ್ನುವ ಪ್ರಶ್ನೆಗಳು ನಿಮ್ಮನ್ನು ಕಾಡುವುದು ಸಹಜ. ಐಶ್ವರ್ಯ ಕೆಳ ಜಾತಿವಳಾಗಿದ್ದು, ಅಶೋಕ್ ಮೇಲ್ಜಾತಿ ಸಮುದಾಯಕ್ಕೆ ಸೇರಿದ್ದಾನೆ. ಹೀಗಾಗಿ ಹುಡುಗನ ಕಡೆಯವರು ಐಶ್ವರ್ಯಳನ್ನು ಮನೆ ತುಂಬಿಸಿಕೊಳ್ಳುತ್ತೇವೆ. ಆದ್ರೆ, ಈ ಮದುವೆಗೆ ಐಶ್ವರ್ಯಳ ಮನೆಯವರು ಬರಬಾರದು ಎಂದು ಷರತ್ತು ಹಾಕಿದ್ದರು. ಮಗಳ ಸಂತೋಷಕ್ಕೆ ಐಶ್ವರ್ಯ ಪೋಷಕರು ಈ ಷರತ್ತಿಗೆ ಒಪ್ಪಿ ಸುಮ್ನಾಗಿದ್ದಾರೆ. ಬಳಿಕ ಮದುವೆ ಶಾಸ್ತ್ರಕ್ಕಾಗಿ ಐಶ್ವರ್ಯಳನ್ನು ಅಶೋಕ್ ಮನೆಯವರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಯಶ್ವರ್ಯ ಏಕಾಏಕಿ ಆತ್ಮಹತ್ಯೆ ಮಾಡಿದ್ದಾಳೆ.
Published On - 3:14 pm, Mon, 20 November 23