ವಿಜಯಪುರದಲ್ಲೊಂದು ಮನಕಲಕುವ ಘಟನೆ: ಮಕ್ಕಳನ್ನ ನಂಬಿ ಸಾಲ‌ ಕೊಡಿಸಿದ್ದ ವೃದ್ದ ದಂಪತಿ‌ ಬೀದಿಗೆ

ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಂದೆ ತಾಯಿಗಳು ಇರಲ್ಲ ಎಂಬ ಮಾತು ಇಲ್ಲಿ ನಿಜವಾಗಿದೆ. ತಮ್ಮ ಮಗಾ ಚೆನ್ನಾಗಿರಬೇಕು ಎಂದು ಸಹಾಯ ಮಾಡಿದ ವೃದ್ದ ತಂದೆ ತಾಯಿ ಇದೀಗ ಅದೇ ಮಗನಿಂದಲೇ ಬೀದಿ ಪಾಲಾಗಿದ್ದಾರೆ. ಮಗನಿಗೆ ಮಿಡಿದ ಹೆತ್ತ ಕರಳು ಇದೀಗ ಕಣ್ಣೀರು ಹಾಕುತ್ತಾ, ರಸ್ತೆ ಮೇಲೆ ದಿನಗಳನ್ನು ಕಳೆಯುತ್ತಿದ್ದಾರೆ. ಪಾಪಿ ಮಗನಿಂದ ಸಂಕಷ್ಟಕ್ಕೆ ಸಿಲುಕಿದ ವೃದ್ದ ದಂಪತಿಯ ಮನಕಲಕುವ ಘಟನೆ ವಿವರ ಇಲ್ಲಿದೆ.

ವಿಜಯಪುರದಲ್ಲೊಂದು ಮನಕಲಕುವ ಘಟನೆ: ಮಕ್ಕಳನ್ನ ನಂಬಿ ಸಾಲ‌ ಕೊಡಿಸಿದ್ದ ವೃದ್ದ ದಂಪತಿ‌ ಬೀದಿಗೆ
Vijayapura Elderly Couple
Edited By:

Updated on: Mar 15, 2025 | 11:03 AM

ವಿಜಯಪುರ, (ಮಾರ್ಚ್ 15): ಮಗನ ಏಳ್ಗೆ ಬಯಸಿ ಮೈಕ್ರೋ ಪೈನಾನ್ಸ್ ನಲ್ಲಿ 5 ಲಕ್ಷ ಸಾಲ ಮಾಡಿದ್ದ ವೃದ್ದ ತಂದೆ ತಾಯಿ ಇದೀಗ ಬೀದಿ ಪಾಲಾಗಿದ್ದಾರೆ. ಹೌದು…ವೃದ್ಯಾಪ್ಯದಲ್ಲಿ ಮಕ್ಕಳು ತಂದೆ ತಾಯಿಗಳಿಗೆ ಆಸರೆಯಾಗಬೇಕು. ಆದರೆ ವಿಜಯಪುರ ನಗರದ ಆಲಕುಂಟೆ ನಗರದ ವೀರಭದ್ರ ಹಾಗೂ ಬಾಗಮ್ಮ ಹಡಪದ ದಂಪತಿಗೆ ಇಳಿವಯಸ್ಸಿನಲ್ಲಿ ಮಕ್ಕಳೇ ವಿಲನ್ ಆಗಿದ್ಧಾರೆ. ಬಾಗಮ್ಮ ಹಾಗೂ ವೀರಭದ್ರ ಎನ್ನುವ ವೃದ್ಧ ದಂಪತಿ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಪುಟ್ಟ ನಿವೇಶನ ತೆಗೆದುಕೊಂಡು ತಮ್ಮದೇ ಒಂದು ಮನೆ ಕಟ್ಟಿಕೊಂಡಿದ್ದರು. ಅಲ್ಲದೇ ಸಾಲ ಸೂಲ ಮಾಡಿ ತಮ್ಮಿಬ್ಬರು ಮಕ್ಕಳಾದ ಬಸವರಾಜ ಹಾಗೂ ನಾಗೇಶನಿಗೆ ಮದುವೆ ಮಾಡಿ ನೆಲೆ ನೀಡಿದ್ದರು. ಆದ್ರೆ, ಇದೀಗ  ಮಕ್ಕಳೇ ತಂದೆ-ತಾಯಿಯನ್ನು ಬೀದಿ ಪಾಲು ಮಾಡಿದ್ದು, ಈ ವೃದ್ಧ ದಂಪತಿಗಳು ಅಕ್ಕ-ಪಕ್ಕದವರೇ ನೀಡುವ ಆಹಾರ ಸೇವಿಸಿ ರಸ್ತೆಗಳಲ್ಲೇ ದಿನ ಕಳೆಯುತ್ತಿದ್ದಾರೆ.

ಮಕ್ಕಳಿಗಾಗಿ ಸಾಲ ಮಾಡಿದ್ದ ವೃದ್ಧ ದಂಪತಿ

ಬಾಗಮ್ಮ ಹಾಗೂ ವೀರಭದ್ರ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಪುಟ್ಟ ನಿವೇಶನ ತೆಗೆದುಕೊಂಡು ತಮ್ಮದೇ ಒಂದು ಮನೆ ಕಟ್ಟಿಕೊಂಡಿದ್ದರು. ಇವರಿಗೆ ಬಸವರಾಜ ಹಾಗೂ ನಾಗೇಶ ಎಂಬ ಇಬ್ಬರು ಗಂಡು ಮಕ್ಕಳು. ಮಕ್ಕಳಿಗೆ ಮದುವೆ ಮಾಡಿ ನೆಲೆ ನೀಡಿದ್ದರು. 5 ವರ್ಷದ ಹಿಂದೆ ಬಸವರಾಜಗೆ ಹೇರ್ ಕಟಿಂಗ್ ಸಲೂನ್ ಹಾಕಲು ಜೀವನಕ್ಕೆ ಆಸರೆಯಾಗಿದ್ದ ಮನೆಯ ಮೇಲೆ ನಗರದ ಜನ ಸ್ಮಾಲ್ ಫೈನಾನ್ಸ್ ನಲ್ಲಿ 5 ಲಕ್ಷ ಸಾಲ ಪಡೆದುಕೊಟ್ಟಿದ್ದರು. ಈ ಹಣ ಪಡೆದ ಬಸವರಾಜ ಸಲೂಲ್ ಶಾಪ್ ಹಾಕಿದ್ದ. ನಂತರ ಸಾಲದ ಕಂತು ಕಟ್ಟದೇ ತಂದೆ-ತಾಯಿ ಬಿಟ್ಟು ಬೇರೆಯಾಗಿದ್ದಾನೆ. ಇನ್ನು ಕಿರಿಯ ಮಗನೂ ಸಹ ತಂದೆ ತಾಯಿಯನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದಾನೆ.

ವೃದ್ದ ಬಾಗಮ್ಮ ವೀರಭದ್ರ ಒಬ್ಬರಿಗೊಬ್ಬರು ಆಸರೆಯಾಗಿದ್ದರು. ತಮ್ಮ ಬಳಿಯಿದ್ದ 3 ಲಕ್ಷ ರೂಪಾಯಿ ಹಣವನ್ನು ಪ್ರತಿ ತಿಂಗಳು 14,000 ರೂಪಾಯಿಗಳ ಸಾಲದ ಕಂತುಗಳನ್ನು ಭರಿಸುತ್ತಾ ಬಂದಿದ್ದಾರೆ. ಆದ್ರೆ, ಕೈಲಿದ್ದ ಎಲ್ಲಾ ಹಣವೂ ಖಾಲಿಯಾಗಿದೆ. ದುಡಿದು ಸಾಲ ಕಟ್ಟಬೇಕೆಂದರೆ ದೇಹದಲ್ಲಿ ಶಕ್ತಿ ಬೇರೆ ಇಲ್ಲ. ಈ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಜಲ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗೆ ಸಾಲದ ಕಂತು ಕಟ್ಟಲು ಆಗಿಲ್ಲ. ಕಾರಣ ಈ ಫೈನಾನ್ಸ್ ನವರು ನ್ಯಾಯಾಲಯದ ಮೊರೆ ವೃದ್ಧದಂಪತಿಯ ಮನೆಯನ್ನು ಸೀಜ್ ಮಾಡಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ಬಾಗಮ್ಮ ವೀರಭದ್ರ ಕಳೆದ ಮೂರು ದಿನಗಳಿಂದ ಮನೆ ಎದುರಿನ ರಸ್ತೆ ಮೇಲೆ ಜೀವನ ಮಾಡುತ್ತಿದ್ದಾರೆ. ಇಷ್ಟಾದರೂ ಇಬ್ಬರು ಮಕ್ಕಳು ತಂದೆ ತಾಯಿಯನ್ನು ನೋಡಲು ಬಂದಿಲ್ಲ. ಮಗನಿಂದ ಮೋಸ ಹೋದ ದಂಪತಿ ಮಕ್ಕಳಿಲ್ಲದಿದ್ದರೆ ಚೆಂದ, ಯಾರೂ ಮಕ್ಕಳನ್ನು ಹೇರಬಾರದು ಎಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಮನೆ ಸೀಜ್​, ಬೀದಿಯಲ್ಲಿ ವೃದ್ಧ ದಂಪತಿ

ಕಳೆದ ಮಾರ್ಚ್ 12 ರಂದು ಪೊಲೀಸರ ಭದ್ರತೆಯಲ್ಲಿ ನ್ಯಾಯಾವಾದಿಗಳೊಂದಿಗೆ ಆಗಮಿಸಿದ್ದ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವರು ವೃದ್ದ ದಂಪತಿಗಳನ್ನು ಹೊರಗೆ ಕಳುಹಿಸಿ ಮನೆ ಬಾಗಿಲಿಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ. ಮನೆ ಸೀಜ್ ಮಾಡಿದ ಜನ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮನೆ ಗೋಡೆಗೆ ನೊಟೀಸ್ ಅಂಟಿಸಿದ್ದಾರೆ. ಈ ಅಡಮಾನದ ಆಸ್ತಿಯ ಭೌತಿಕ ಸ್ವಾಧೀನವನ್ನು ಜೆ ಎಸ್ ಎಫ್ ಬಿ ಘನ ನ್ಯಾಯಾಲಯದ ಆದೇಶ ಸಂಖ್ಯೆ C/R Num 102/24 ಸ್ವಾದೀನ ಪಡೆದುಕೊಂಡಿದ್ದು ಮತ್ತು ಈ ಆಸ್ತಿ ಮೇಲೆ ಹಕ್ಕನ್ನು ಹೊಂದಿದೆ. ಅತಿಕ್ರಮಣಕಾರರು ಮತ್ತು ಈ ಆಸ್ತಿಗೆ ಹಾನಿ ಉಂಟು ಮಾಡುವ ವ್ಯಕ್ತಿಗಳಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಫಲಕವನ್ನು ತೆಗೆಯುವುದು ಕಾನೂನು ಬಾಹಿರ ಎಂದು ನೋಟಿಸ್ ಅಂಟಿಸಿದ್ದಾರೆ.

ಮನೆ ಸೀಜ್ ಆಗಿರುವುದು ಒಂದು ಕಡೆ, ಮಕ್ಕಳಿದ್ದರೂ ಸಹಾಯಕ್ಕೆ ಬರುತ್ತಿಲ್ಲ ಎಂದು ವೃದ್ದ ದಂಪತಿ ತೀವ್ರವಾಗಿ ನೊಂದಿದ್ದಾರೆ. ಎಲ್ಲವನ್ನೂ ಮೇಲಿರೋ ದೇವರು ನೋಡಿಕೊಳ್ಳಲಿ ಎಂದು ವೃದ್ದ ವೀರಭದ್ರ ಹಡಪದ ಮುಗಿಲ ಕಡೆಗೆ ಮುಖ ಮಾಡುತ್ತಾರೆ. ಇನ್ನು ರಸ್ತೆ ಮೇಲೆಯೇ ಠಿಕಾಣಿ ಹೂಡಿರೋ ಇವರಿಗೆ ಸುತ್ತಮುತ್ತಲ ಜನರು ಉಪಹಾರ ಊಟ ನೀಡುತ್ತಾ ಸಹಾಯ ಮಾಡುತ್ತಿದ್ದಾರೆ.

ಎಲ್ಲವೂ ಕಾನೂನು ಭದ್ದವಾಗಿಯೇ ಮಾಡಿದ್ದರೂ ಇಲ್ಲಿ ವೃದ್ದ ದಂಪತಿ ಎನ್ನದೇ ಮಾನವೀಯತೆಯನ್ನು ತೋರದೇ ಇರುವುದು ದುರಂತವೇ ಸರಿ. ಈ ಬಗ್ಗೆ ಜಿಲ್ಲಾಡಳಿತ ವೃದ್ಧ ದಂಪತಿಯ ನೆರವಿಗೆ ಧಾವಿಸಿ ಇದಕ್ಕೊಂದು ಪರಿಹಾರ ಹುಡುಕಿಕೊಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ