ಅಗತ್ಯವಾದ್ರೆ ರಾಜಕೀಯ ಬಿಡ್ತೀನಿ, ಪಂಚಮಸಾಲಿ ಸಮುದಾಯ ಬಿಡಲ್ಲ: ವಿಜಯಾನಂದ ಕಾಶಪ್ಪನವರ್

| Updated By: ganapathi bhat

Updated on: Apr 06, 2022 | 7:51 PM

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಹೆಸರು ಘೋಷಣೆಯಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವನ್ನು ಸಮಾವೇಶದಲ್ಲಿ ಅಧಿಕೃತವಾಗಿ ಘೋಷಿಸಿದರು.

ಅಗತ್ಯವಾದ್ರೆ ರಾಜಕೀಯ ಬಿಡ್ತೀನಿ, ಪಂಚಮಸಾಲಿ ಸಮುದಾಯ ಬಿಡಲ್ಲ: ವಿಜಯಾನಂದ ಕಾಶಪ್ಪನವರ್
ವಿಜಯಾನಂದ ಕಾಶಪ್ಪನವರ್
Follow us on

ಬೆಂಗಳೂರು: ಪಂಚಮಸಾಲಿಯವರು ಗುರಿ ಇಟ್ಟರೆ ಅದ್ಯಾವುದೂ ತಪ್ಪಲ್ಲ. ಮಳೆ ಬರಲಿ, ಏನೇ ಬರಲಿ ಯಾರೂ ಇಲ್ಲಿಂದ ಕದಲಬೇಡಿ. ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲೇಬೇಕು. ನಮ್ಮ ಹೋರಾಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಯಬೇಕು. 27 ವರ್ಷಗಳು ಕಳೆದರೂ ನಮ್ಮ ಬೇಡಿಕೆ ಈಡೇರಲಿಲ್ಲ. ಎಲ್ಲಾ ಸರ್ಕಾರಗಳು ನಮ್ಮ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಈಗ ನಮಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯಬಾರದು ಎಂದು ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ವಿಜಯಾನಂದ ಕಾಶಪ್ಪನವರ್ ಹೇಳಿದರು.

ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸುವಂತೆ ಕಳೆದ ಕೆಲವಾರು ದಿನಗಳಿಂದ ಹೋರಾಟ ನಡೆಯುತ್ತಿದೆ. ಸುಮಾರು 700 ಕಿ.ಮೀ. ಪಾದಯಾತ್ರೆ ನಡೆಸಿದ ಬಳಿಕ ಇಂದು (ಫೆ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಸಮಾರಂಭ ಆಯೋಜಿಸಲಾಗಿದೆ. ಸಮಾರಂಭದಲ್ಲಿ ವಿಜಯಾನಂದ ಕಾಶಪ್ಪನವರ್ ಮಾತನಾಡಿದರು.

ಮೀಸಲಾತಿ ಸಿಗುವವರೆಗೆ ಸರ್ಕಾರವನ್ನು ಸುಮ್ಮನೆ ಬಿಡಬಾರದು. ಈ ಹೋರಾಟಕ್ಕೆ 2 ಪಂಚಮಸಾಲಿ ಪೀಠಗಳು ಒಂದಾಗಿವೆ. ಇಂದು ಪೂಜ್ಯರು ಹೇಳಿದಂತೆ ನಾವು ಮುಂದೆ ಸಾಗೋಣ. ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡೋಣ. ಮಾರ್ಚ್ 4ರವರೆಗೆ ಧರಣಿ ಸತ್ಯಾಗ್ರಹ ಮಾಡೋಣ. ನಂತರ ಉಪವಾಸ ಸತ್ಯಾಗ್ರಹ ಮಾಡೋಣ ಎಂದು ವಿಜಯಾನಂದ ಕಾಶಪ್ಪನವರ್ ಸಮುದಾಯಕ್ಕೆ ಕರೆನೀಡಿದರು.

ಅಗತ್ಯ ಬಿದ್ದರೆ ರಾಜಕೀಯ ಬೇಕಾದರೂ ತೊರೆಯುತ್ತೇನೆ. ಆದರೆ ಪಂಚಮಸಾಲಿ ಸಮುದಾಯವನ್ನು ಮಾತ್ರ ಬಿಡುವುದಿಲ್ಲ. ಬೇಕೇ ಬೇಕು ನಮಗೆ ಮೀಸಲಾತಿ ಬೇಕು ಎಂದು ಅವರು ಘೋಷಣೆ ಕೂಗಿದರು.

ಸಮಾವೇಶದ ಕೊನೆಗೆ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಹೆಸರು ಘೋಷಣೆಯಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವನ್ನು ಸಮಾವೇಶದಲ್ಲಿ ಅಧಿಕೃತವಾಗಿ ಘೋಷಿಸಿದರು.

ಜುಲೈ 23ರಿಂದ ಅಕ್ಟೋಬರ್ 23ರವರೆಗೆ ರಥಯಾತ್ರೆ
ಸರ್ಕಾರದ ನಿಲುವು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಮಾವೇಶದ ಬಳಿಕ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ನಾನು ಮಠ ಕಟ್ಟಿಲ್ಲ ಎಂದು ಸಮುದಾಯದವರು ಹೇಳ್ತಿದ್ದರು. ಆದರೆ ನಿಮಗಾಗಿ ಪಾದಯಾತ್ರೆ, ಹೋರಾಟ ಮಾಡಿದ್ದೇನೆ. ಮೀಸಲಾತಿ ನೀಡಿದ್ದಕ್ಕೆ ಡಾ.ಅಂಬೇಡ್ಕರ್ ಇತಿಹಾಸದಲ್ಲಿದ್ದಾರೆ. ಇನ್ಮುಂದೆ ಮಠವನ್ನು ಕಟ್ಟುವ ಕೆಲಸವನ್ನು ಕೂಡ ಮಾಡುತ್ತೇನೆ. ಜುಲೈ 23-ಅಕ್ಟೋಬರ್ 23ರವರೆಗೆ ರಥಯಾತ್ರೆ ಮಾಡುತ್ತೇನೆ ಎಂದು ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೂ ನ್ಯಾಯ ಸಿಗಬೇಕು. ಇತರೆ ಸಮುದಾಯಗಳಿಗೂ ನ್ಯಾಯ ಸಿಗಬೇಕಾಗಿದೆ. ಪಂಚಮಸಾಲಿಗರು ಒಗ್ಗಟ್ಟಾಗಿ ಇರುವ ಸಂದೇಶ ರವಾನೆ ಆಗಬೇಕಿದೆ. ಈ ಸಮಾವೇಶದ ಮೂಲಕ ಪ್ರಧಾನಿ ಮೋದಿಗೆ ಒಗ್ಗಟ್ಟಿನ ಸಂದೇಶ ರವಾನೆಯಾಗಿದೆ. ಸಮಾಜದ ವಿಚಾರದಲ್ಲಿ ನಾವೆಲ್ಲಾ ಒಂದಾಗುತ್ತೇವೆ. ರಾಣಿ ಚೆನ್ನಮ್ಮನ ಮಕ್ಕಳು ಒಗ್ಗಟ್ಟಾಗಿದ್ದೇವೆಂದು ಸಾಬೀತಾಗಿದೆ. ವಿಜಯಪುರದಿಂದ ಅತಿ ಹೆಚ್ಚಿನ ಸಂಖ್ಯೆಯ ಜನ ಬಂದಿದ್ದಾರೆ. ಯತ್ನಾಳ್, ಕಾಶಪ್ಪನವರ ಏನು ಹೇಳುತ್ತಾರೋ ನೋಡೋಣ. ಅವರು ಹೇಳಿದ್ದನ್ನು ಕೇಳಿಕೊಂಡು ಮುಂದೆ ಸಾಗೋಣ ಎಂದು ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು: ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ

ಪಂಚಮಸಾಲಿ ಸಮಾವೇಶ: ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು: ಕೈಮುಗಿದು ಕೇಳಿಕೊಂಡ ಆರ್. ಅಶೋಕ್

Published On - 2:39 pm, Sun, 21 February 21