ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು; ಮುಗಿಲು ಮುಟ್ಟಿದ ಆಕ್ರಂದನ

ಆಟವಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ನಡೆದಿದೆ. ಕರುಳ ಕುಡಿಗಳನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು; ಮುಗಿಲು ಮುಟ್ಟಿದ ಆಕ್ರಂದನ
ಮೃತ ಮಕ್ಕಳು
Edited By:

Updated on: Oct 17, 2025 | 1:16 PM

ವಿಜಯಪುರ, ಅಕ್ಟೊಬರ್​ 17: ಆಟವಾಡುವ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ವಿಜಯಪುರ (Vijayapura) ತಾಲೂಕಿನ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ನಡೆದಿದೆ. ಶಿವಮ್ಮ‌ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಹಾಗೂ ಸ್ವಪ್ನಾ ರಾಜು ರಾಠೋಡ್ (12) ಮೃತ ಮಕ್ಕಳಾಗಿದ್ದು,ಕರುಳ ಕುಡಿಗಳನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಹದೇವ ನಗರದ ಬಳಿಯ ರಾಠೋಡ್ ಎಂಬವರ ಜಮೀನಿನಲ್ಲಿ ಮೂವರು ಮಕ್ಕಳು ಕುರಿಗಳ ಜೊತೆಗೆ ಆಟವಾಡುತ್ತಿದ್ದರು.ಕುಟುಂಬದವರು ಸಹ ಮಕ್ಕಳು ಇಲ್ಲಿಯೇ ಆಟವಾಡುತ್ತಿದ್ದಾರಲ್ಲ ಎಂದು ಅಂದುಕೊಂಡಿದ್ದರು. ಹೀಗೆ ಕುರಿಗಳ ಜೊತೆ ಆಡುತ್ತ ಕೃಷಿ ಹೊಂಡದ ಬಳಿ ತೆರಳಿರುವ ಮಕ್ಕಳು ಆಯತಪ್ಪಿ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಮಕ್ಕಳು ಬಾರದಿರುವ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಸಂಶಯ ಬಂದು ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಮೂವರು ಮಕ್ಕಳ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಆಸ್ಪತ್ರೆಯಲ್ಲಿ ಮಲಗಿದ ಹಾಗೆ ನಟನೆ ಮಾಡಿ ಮೊಬೈಲ್ ಎಗಿರಿಸಿದ ಖದೀಮ

ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಕಾನೂನಿನ ಪ್ರಕಾರ ಕೃಷಿಹೊಂಡದ ಸುತ್ತಲೂ ತಂತಿ ಬೇಲಿಯನ್ನ ಕಡ್ಡಾಯವಾಗಿ ಹಾಕಬೇಕು. ಕೃಷಿ ಹೊಂಡದ ಬಳಿ ಯಾರೂ ಓಡಾಡದಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಇದ್ಯಾವುದೇ ನಿಯಮಗಳನ್ನು ಕೆಲ ರೈತರು ಪಾಲನೆ ಮಾಡದಿರುವುದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಹೀಗಾಗಿ ಇನ್ನಾದರೂ ಕೃಷಿ ಹೊಂಡಗಳನ್ನು ಹೊಂದಿರುವ ರೈತರು ಎಚ್ಚೆತ್ತುಕೊಳ್ಳಬೇಕಿದ್ದು, ಕೃಷಿ ಹೊಂಡದ ಸುತ್ತ ಬೇಲಿ ಅಥವಾ ತಡೆಗೋಡೆಯನ್ನ ಖಡ್ಡಾಯವಾಗಿ ನಿರ್ಮಿಸಬೇಕು ಎಂಬ ಮಾತುಗಳು ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us