ಜನವರಿ 22 ರಂದು ವಿಜಯಪುರದ ಐತಿಹಾಸಿಕ ರಾಮ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ, ಜಾಗೃತಿ ಜಾಥ
ವಿಜಯಪುರ ನಗರದ ಹೃದಯ ಭಾಗದಲ್ಲಿರುವ ರಾಮಮಂದಿರ ಅತ್ಯಂತ ವಿಶೇಷವಾಗಿದ್ದು, 150 ವರ್ಷಗಳ ಇತಿಹಾಸವನ್ನೂ ಸಹ ಹೊಂದಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾಗುವ ಸಮಯದಲ್ಲಿ ವಿಜಯಪುರದ ಈ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ವಿಜಯಪುರ, ಜ.20: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣಕ್ಕಾಗಿ ಅನೇಕ ಹೋರಾಟ, ತ್ಯಾಗ ಬಲಿದಾನಗಳೇ ನಡೆದಿವೆ. ರಾಮ ಮಂದಿರ ನೋಡಲು ಸಮಸ್ತ ಹಿಂದೂ ಜನಾಂಗ ಹಾತೊರೆಯುತ್ತದೆ. ಆದರೆ ಎಲ್ಲರಿಗೂ ಅಯೋಧ್ಯೆಗೆ ಹೋಗಲು ಆಗುವುದಿಲ್ಲ. ಇದೇ ಕಾರಣಕ್ಕೆ ವಿಜಯಪುರ (Vijayapura) ನಗರದ ಹೃದಯ ಭಾಗದಲ್ಲಿರುವ 150 ವರ್ಷಗಳ ಇತಿಹಾಸ ಹೊಂದಿರುವ ರಾಮ ಮಂದಿರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜನವರಿ 22 ರಂದು ಆಯೋಜಿಸಲಾಗಿದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಂದು ವಿಜಯಪುರ ನಗರದ ರಾಮ ಮಂದಿರ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಳೆದ 150 ವರ್ಷಗಳ ಹಿಂದೆ ವಿಜಯಪುರದ ಸಂಕಪಾಲ ಪರಶುರಾಮ ಬಾಹಿತಿ ಎಂಬುವವರು ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ರಾಜಸ್ಥಾನದ ಜೈಪುರದಿಂದ ರಾಮ, ಲಕ್ಷ್ಮಣ ಹಾಗೂ ಸೀತಾ ಒಟ್ಟಿಗೆ ಇರುವ ಪ್ರತಿಮೆಯನ್ನು ತಂದು ಪ್ರತಿಷ್ಠಾಪಿಸಿದ್ದಾರೆ. ನಿತ್ಯ ಪೂಜೆ ಆರತಿ ಕಾರ್ಯಗಳು ತಪ್ಪದೇ ನಡೆಯುತ್ತವೆ.
ಅಂದಿನಿಂದ ಶುರುವಾದ ರಾಮನ ಜಪ ವಿಜಯಪುರದ ಮನೆ ಮನೆಯಲ್ಲೂ ಗುನುಗುನಿಸುತ್ತಿದೆ. ಇನ್ನು ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಜನವರಿ 22 ರಂದು ರಾಮ ಮಂದಿರದಿಂದ ಜಾಥಾ ನಡೆಯಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿ ರಾಮಮಂದಿರ ಉದ್ಘಾಟನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಇದನ್ನೂ ಓದಿ: ರಾಜಕಾರಣಿಗಳ ನೀಚ ರಾಜಕೀಯದ ನಡುವೆ ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಿ ಹಾರೈಸಿದ ಮುಸ್ಲಿಮರು
ಬಳಿಕ ದೇವಸ್ಥಾನದಲ್ಲಿ ಸಹಸ್ರ ನಾಮಜಪ, ವಿಶೇಷ ಪೂಜೆ ಹೋಮ ಹವನ ಕಾರ್ಯಗಳು ನಡೆಯುತ್ತವೆ. ನಂತರ ದೇವರಿಗೆ ಆರತಿ ಸೇವೆ ಮಾಡಲಾಗುತ್ತದೆ. ಎಲ್ಲ ಪೂಜಾ ಕೈಂಕರ್ಯಗಳ ಬಳಿಕ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರಾಮಮಂದಿರ ಟ್ರಸ್ಟಿ ಮಾಹಿತಿ ನೀಡಿದ್ದಾರೆ.
ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ಅಯೋಧ್ಯೆಯಲ್ಲಿ ಆಗುತ್ತಿರುವಾಗಲೇ ಇಲ್ಲಿ ಜಾಗೃತಿ ಜಾಥಾ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಬಾಹಿತಿ ಕುಟುಂಬದವರ ಸ್ವಂತ ದೇವಸ್ಥಾನ ಇದಾಗಿದ್ದು, ಯಾವುದೇ ಸರ್ಕಾರ ಹಾಗೂ ಸರ್ಕಾರೇತರರ ಸಂಸ್ಥೆಗಳಿಂದ ನೆರವು ಪಡೆಯಲಾಗುವುದಿಲ್ಲ. ಬಾಹಿತಿ ಕುಟುಂಬದವರೇ ದೇವಸ್ಥಾನದ ಖರ್ಚು ವೆಚ್ಚಗಳನ್ನು ನೋಡಿಕೊಂಡು ಹೋಗುತ್ತದೆ.
ಇನ್ನು, ಗುಮ್ಮಟ ನಗರಿಯಲ್ಲಿ ರಾಮನನ್ನು ಆರಾಧಿಸುವ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದು, ನಿತ್ಯವೂ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ನಿತ್ಯ ಬೆಳಗ್ಗೆ 6 ಗಂಟೆಗೆ ತೆರೆಯುವ ರಾಮ ಮಂದಿರ ರಾತ್ರಿ 9 ಗಂಟೆಯವರೆಗೂ ತೆರೆದಿರುತ್ತದೆ. ಹೀಗಾಗಿ ಭಕ್ತರು ನಿರಂತರವಾಗಿ ಆಗಮಿಸಿ ರಾಮನ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ಉದ್ಘಾಟನೆಗೆ ನಮಗೆ ಹೋಗಲು ಆಗುವುದಿಲ್ಲ. ನಾವು ಇಲ್ಲಿರುವ ರಾಮ ಮಂದಿರಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದಿದ್ದಾರೆ. ಇನ್ನು ಈ ಮಂದಿರವನ್ನು ಪುನಶ್ಚೇತನ ಮಾಡಲಾಗುತ್ತದೆ ಎಂದು ಟ್ರಸ್ಟಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಅಣಿಯಾಗುತ್ತಿದ್ದರೆ ವಿಜಯಪುರದಲ್ಲೂ ಅದಕ್ಕೆ ಪೂರಕ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ನಗರದ ರಾಮಮಂದಿರಲ್ಲಿ ವಿಶೇಷ ಪೂಜಾ ಕಾರ್ಯಗಳು ಸೇರಿದಂತೆ ಇತರೆ ಕಡೆಗಳಲ್ಲಿ ಮಂದಿರ ಉದ್ಘಾಟನೆ ನಿಮಿತ್ಯ ದೀಪೋತ್ಸವ ಅನ್ನ ಸಂತರ್ಪಣೆ, ಪೂಜಾ ಕಾರ್ಯಗಳು ಸೇರಿದಂತೆ ಹತ್ತಾರು ಕಾರ್ಯಗಳು ನಡೆಯಲಿವೆ. ಅಯೋಧ್ಯೆಯಲ್ಲಿ ಮಾತ್ರವಲ್ಲದೆ, ದೇಶದ ಗಲ್ಲಿ ಗಲ್ಲಿಗಳಲ್ಲಿಯೂ ಹಬ್ಬದ ವಾತಾವರಣ ಮನೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Sat, 20 January 24