ಇಲ್ಲಿ ಕಿಡ್ನಿ ಕಸಿ ದುಬಾರಿ ಅಲ್ಲ: ಊರು ಯಾವುದು, ಆಸ್ಪತ್ರೆ ಯಾವುದು? ವಿವರ ಇಲ್ಲಿದೆ
ವೈದ್ಯಕೀಯ ಚಿಕಿತ್ಸೆ ವ್ಯಾಪಾರೀಕರಣವಾಗಿರುವ ದಿನಗಳಲ್ಲಿ ವಿಜಯಪುರಲ್ಲಿ ಕಡಿಮೆ ವೆಚ್ಚದಲ್ಲಿ ಕಿಡ್ನಿ ಕಸಿ ಚಿಕಿತ್ಸೆ ಮಾಡುತ್ತಿರೋದು ಶ್ಲಾಘನೀಯ ಕಾರ್ಯವಾಗಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ, ಸ್ಥಳೀಯರಿಗೆ ಇದರಿಂದ ಅನುಕೂಲವಾಗಿದೆ. ಕಡಿಮೆ ಶುಲ್ಕ ಹಾಗೂ ಸ್ವಂತ ಊರಿನಲ್ಲೇ ಚಿಕಿತ್ಸೆ ಸಿಗುತ್ತಿರೋದು ಸಮಾಧಾನಕರ ಸಂಗತಿಯಾಗಿದೆ.
ವೈಜ್ಞಾನಿಕವಾಗಿ ನಾವು ಬಹಳಷ್ಟು ಮುಂದುವರೆದಿದ್ದೇವೆ. ಮಾನವನ ಅಂಗಾಂಗ ಕೃಷಿ ಮಾಡುವ ವಿಧಾನ ಇಂದು ಸಲೀಸಾಗಿದೆ. ಇದರಿಂದ ಅದೆಷ್ಟೋ ರೋಗಿಗಳು ಬದುಕುಳಿದಿದ್ದಾರೆ. ಆದರೆ ಅಂಗಾಂಗ ಕೃಷಿ ಚಿಕಿತ್ಸೆ ಮಾತ್ರ ದುಬಾರಿಯೇ ಎನ್ನಬಹುದು. ಇಂದಿನ ದಿನಗಳಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ದೊಡ್ಡದಾಗುತ್ತಾ ಸಾಗಿದೆ. ಕಿಡ್ನಿ ಕಸಿ ಚಿಕಿತ್ಸೆ ಸುಲಭವಾಗಿದ್ದರೂ ದುಬಾರಿಯಾಗಿದೆ. ಮಧ್ಯಮ ವರ್ಗದ ಬಡವರಿಗೆ ಕಷ್ಟದ ಚಿಕಿತ್ಸೆಯಾಗಿದೆ. ಇದಕ್ಕೆ ಅಪವಾದವೆಂಬಂತೆ ಅತೀ ಕಡಿಮೆ ದರದಲ್ಲಿ ಕಿಡ್ನಿ ಕಸಿ ಮಾಡುತ್ತಿದ್ದಾರೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆ ವೈದ್ಯರು. ಬಡವರಿಗೆ, ಮಧ್ಯಮ ವರ್ಗದವರಿಗೆ ಅನಕೂಲವಾಗಲಿ, ಎಲ್ಲರಿಗೂ ಸಮರ್ಪಕ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಅತೀ ಕಡಿಮೆ ವೆಚ್ಚದಲ್ಲಿ ಇಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ನಲ್ಲಿ ಇದೇ ಮೊದಲ ಬಾರಿಗೆ ಕಿಡ್ನಿ ಕಸಿ ಚಿಕಿತ್ಸೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬಿಹಾರ ಮೂಲಕ 17 ವರ್ಷದ ಯುವಕನಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬಿಎಲ್ಡಿಇ ಆಸ್ಪತ್ರೆಯಲ್ಲಿ ಬಿಹಾರದ ಬಡ ಕುಟುಂಬದ ಯುವಕನಿಗೆ ಯಾವುದೇ ವೈದ್ಯ ಶುಲ್ಕ, ಹಾಸಿಗೆ ಶುಲ್ಕ, ಆಪರೇಷನ್ ಥಿಯೇಟರ್ ಶುಲ್ಕಗಳನ್ನು ಪಡೆಯದೇ ಆದಷ್ಟು ಆಸ್ಪತ್ರೆಯ ಔಷಧಿಗಳನ್ನೇ ನೀಡಿ ಉಚಿತವಾಗಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೊದಲೇ ಆಸ್ಪತ್ರೆ ವತಿಯಿಂದ ರಿಯಾಯಿತಿ ದರದಲ್ಲಿ ಐದು ಮಂದಿಗೆ ಕಿಡ್ನಿ ಕಸಿಗಳನ್ನು ಯಾವುದೇ ಖರ್ಚುಗಳಿಲ್ಲದೇ ಮಾಡುವುದಾಗಿ ನಾವು ಹೇಳಿದ್ದೆವು. ಅದರಂತೆ ಮೊದಲ ಮೂತ್ರಪಿಂಡ ಕಸಿ ಯಶಸ್ವಿಯಾಗಿ ಮಾಡಿದ್ದೇವೆಂದು ಡಾ ಎಸ್ ಬಿ ಪಾಟೀಲ್, ಯುರೋಲಾಜಿ ವಿಭಾಗದ ಮುಖ್ಯ ವೈದ್ಯರು ಮಾಹಿತಿ ನೀಡಿದ್ದಾರೆ.
ಬಿಹಾರ ಮೂಲದ 17 ವರ್ಷದ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದ. ಬಿಹಾರ ದೆಹಲಿ ಸೇರಿದಂತೆ ಇತರೆ ಹತ್ತಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಕಿಡ್ನಿ ಬದಲಾವಣೆ ಮಾಡಬೇಕೆಂದು ಎಲ್ಲಾ ವೈದ್ಯರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಯುವಕನಿಗೆ ಕಿಡ್ನಿ ಕಸಿಗೆ ಮುಂದಾದಾಗ 10 ರಿಂದ 15 ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚವಾಗುತ್ತದೆ ಎಂದು ಹೇಳಿದ್ದರಂತೆ.
ಇಷ್ಟು ಹಣ ಯುವಕನ ಕುಟುಂಬದವರ ಬಳಿ ಇರಲಿಲ್ಲ. ಅವರು ಬಡವರಾಗಿದ್ದು ಕಿಡ್ನಿ ಕಸಿ ಮಾಡಿಸಲು ಸಾಧ್ಯವಾಗದೇ ಡಯಾಲಿಸಿಸ್ ಚಿಕಿತ್ಸೆ ಮೊರೆ ಹೋಗಿದ್ದರು. ಈ ವಿಚಾರ ಬಿಹಾರದ ಪೊಲೀಸ್ ಆಧಿಕಾರಿಗಳಿಗೆ ತಿಳಿದಿದ್ದು ಅವರ ಸೂಚನೆಯಂತೆ ಯುವಕ ವಿಜಯಪುರ ನಗರದ ಬಿಎಲ್ಡಿಇ ಹಾಸ್ಪಿಟಲ್ ಗೆ ದಾಖಲಾಗಿದ್ದಾನೆ.
ಆತನಿಗೆ ಆತನ ತಾಯಿಯ ಕಿಡ್ನಿಯನ್ನೇ ತೆಗೆದು ಕಸಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಇಲ್ಲಿ ಯುವಕನಿಗೆ ಕೆಲ ತಪಾಸಣೆಗಳ ಶುಲ್ಕ ಮಾತ್ರ ಪಡೆದಿದ್ದು ಇನ್ನುಳಿದ ಶಸ್ತ್ರಚಿಕಿತ್ಸೆ, ಆಸ್ಪತ್ರೆ ಶುಲ್ಕ, ವೈದ್ಯರ ಶುಲ್ಕ, ಬೆಡ್ ಚಾರ್ಜಸ್ ಸೇರಿದಂತೆ ಇತರೆ ಯಾವುದೇ ಶುಲ್ಕಗಳನ್ನು ಪಡೆದಿಲ್ಲ. ಬಿಎಲ್ಡಿಇ ಸಂಸ್ಥೆಯ ಆಧ್ಯಕ್ಷ ಹಾಗೂ ಸಚಿವ ಎಂ ಬಿ ಪಾಟೀಲ್ ಸೂಚನೆ ಮೇರೆಗೆ ಸರ್ಕಾರದ ಆರೋಗ್ಯ ಸೇವೆ ಯೋಜನೆಗಳಿಂದ ಸಿಗುವ ಹಣದಲ್ಲೇ ಕಿಡ್ನಿ ಕಸಿ ಚಿಕಿತ್ಸೆ ನೀಡಲು ತೀರ್ಮಾನ ಮಾಡಲಾಗಿದೆ. ಸುಮಾರು 3 ಲಕ್ಷ ರೂಪಾಯಿಗಳಲ್ಲೇ ಕಿಡ್ನಿ ಕಸಿ ಚಿಕಿತ್ಸೆ ಇಲ್ಲಿ ಸಿಗಲಿದೆ. ಇನ್ನು ಕಿಡ್ನಿ ಕಸಿಗೆ ಒಳಗಾಗಿ ಗುಣಮುಖವಾಗಿರುವ ಬಿಹಾರ ಮೂಲದ ಯುವಕನ ಕುಟುಂಬದವರು ಇಲ್ಲಿನ ಚಿಕಿತ್ಸೆ ಬಗ್ಗೆ ಮೆಚ್ಚುಗೆ ಸೂಚಿಸಿದ್ಧಾರೆ. ಉಚಿತವಾಗಿ ಕಿಡ್ನಿ ಕಸಿ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಡಾ ವಿಜಯಕುಮಾರ ಕಲ್ಯಾಣಪ್ಪಗೋಳ, ಬಿಎಲ್ಡಿಇ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ತಿಳಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆ ಒಂದು ರೀತಿಯ ವ್ಯಾಪಾರೀಕರಣವಾದ ದಿನಗಳಲ್ಲಿ ವಿಜಯಪುರಲ್ಲಿ ಕಡಿಮೆ ವೆಚ್ಚದಲ್ಲಿ ಕಿಡ್ನಿ ಕಸಿ ಚಿಕಿತ್ಸೆ ಮಾಡುತ್ತಿರೋದು ಶ್ಲಾಘನೀಯ ಕಾರ್ಯವಾಗಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಇದು ಅನಕೂಲವಾಗಿದೆ. ಕಿಡ್ನಿ ಕಸಿಗಾಗಿ ಇಲ್ಲಿಂದ ಇತರೆ ನಗರಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದವರಿಗೆ ಇಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಕಡಿಮೆ ಶುಲ್ಕ ಹಾಗೂ ಸ್ವಂತ ಊರಿನಲ್ಲೇ ಚಿಕಿತ್ಸೆ ಸಿಗುತ್ತಿರೋದು ಸಮಾಧಾನಕರ ಸಂಗತಿಯಾಗಿದೆ.