ಬಿ.ಡಿ ಜತ್ತಿ ಕಾಲೇಜ್ ಆಫ್ ಎಜುಕೇಶನ್ನಲ್ಲಿ ಭಾರೀ ಗೋಲ್ಮಾಲ್; ಬಿಎಡ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮಹತ್ವದ್ದಾಗಿರುತ್ತದೆ. ಪಾಠ-ಪ್ರವಚನ ಬೋಧಿಸಿ ಸಚ್ಚಾರಿತ್ರ್ಯ ನಾಗರೀಕರನ್ನಾಗಿ ಮಕ್ಕಳನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಶಿಕ್ಷಕರೇ ದಾರಿ ತಪ್ಪಿದರೆ ಉತ್ತಮ ನಾಗರೀಕರನ್ನಾಗಿ ಮಕ್ಕಳನ್ನು ಹೇಗೆ ನಿರೂಪಿಸ ಬಲ್ಲರು ಎಂಬ ಪ್ರಶ್ನೆ ಎದ್ದಿದೆ. ‘ಭಾವಿ ಶಿಕ್ಷಕರಾಗಬೇಕಾದವರೇ ದಾರಿ ತಪ್ಪಿದ ಮಕ್ಕಳಂತಾಗಿದ್ದಾರೆ. ಇಂಥವರಿಂದ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಹೇಗೆ ಮಾಡಲು ಸಾಧ್ಯ? ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.
ವಿಜಯಪುರ, ಜು.23: ನಗರದ ಟಕ್ಕೆ ಪ್ರದೇಶದಲ್ಲಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧೀನದಲ್ಲಿ ನಡೆಯುವ ಬಿ ಡಿ ಜತ್ತಿ ಕಾಲೇಜ್ ಆಫ್ ಎಜುಕೇಶನ್ನಲ್ಲಿ ಬಿ.ಎಡ್ ಪರೀಕ್ಷೆ(B.Ed Exams)ಗಳು ನಡೆಯುತ್ತಿವೆ. ಕಳೆದ ಜುಲೈ 19 ರಿಂದ ಬಿಎಡ್ 2 ನೇ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು, ಈ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಎಲ್ಲೆಡೆ ಕಂಡು ಬಂದಿದೆ. ಇಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಿಎಡ್ ಪರೀಕ್ಷೆಗೆ ಹಾಜರಾಗಿದ್ದಾರೆ. ಒಟ್ಟು 84 ಪರೀಕ್ಷಾರ್ಥಿಗಳು ಪರೀಕ್ಷೆಗಳನ್ನು ಬರೆಯುತ್ತಿದ್ದು, ಎಲ್ಲರೂ ಸಾಮೂಹಿಕ ನಕಲು ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ನಕಲು ಮಾಡ್ತಿರುವ ದೃಶ್ಯ, ಮೊಬೈಲ್ನಲ್ಲಿ ಸೆರೆ
ನಿತ್ಯ ತರಗತಿಗಳಿಗೆ ಹಾಜರಾಗಿ, ಪರೀಕ್ಷೆ ಬರೆಯಬೇಕು. ಆದರೆ, ಇಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೇ ಕೇವಲ ಪರೀಕ್ಷೆಗೆ ಮಾತ್ರ ಹಾಜರಾಗುತ್ತಾರೆ. ಕ್ಲಾಸ್ಗೆ ಹಾಜರಾಗದೇ ಎಕ್ಸಾಂಗೆ ಮಾತ್ರ ಹಾಜರಾಗೋ ಕಾರಣ ಇಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಪರೀಕ್ಷಾ ಪರಿವೀಕ್ಷಕರು ಆರೋಪ ಮಾಡಿದ್ದಾರೆ. ಜುಲೈ. 19 ರಿಂದಲೇ ಪರೀಕ್ಷೆಗಳು ನಡೆದಿದ್ದು, ನಿತ್ಯ ನಕಲು ಮಾಡಿಯೇ ಉತ್ತರ ಬರೆಯುತ್ತಿದ್ದಾರೆಂದು ಮೊಬೈಲ್ನಲ್ಲಿ ಚಿತ್ರೀಕರಿಸಿದ ದೃಶ್ಯಗಳನ್ನು ನೀಡಿದ್ದಾರೆ.
ಇದನ್ನೂ ಓದಿ:ಪರೀಕ್ಷೆಯಲ್ಲಿ ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು ಮಾಡಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್
ಬಿಎಡ್ ಎರಡನೇ ವರ್ಷದ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಕುರಿತು ಮುಖ್ಯ ಪರೀಕ್ಷಾ ಮೇಲ್ವೀಚಾರಕರನ್ನು ಪ್ರಶ್ನೆ ಮಾಡಿದಾಗ, ‘ವಿದ್ಯಾರ್ಥಿಗಳು ನಕಲು ಮಾಡಲು ಮುಂದಾಗುತ್ತಾರೆ, ಕಾಪಿ ಚೀಟಿ ತರುತ್ತಾರೆ. ನಾವು ಅದನ್ನು ತಡೆಯುವ ಕೆಲಸ ಮಾಡುತ್ತೇವೆ. ಆದರೂ ಕೆಲವರು ನಕಲು ಮಾಡುತ್ತಾರೆ. ಇದು ಎಲ್ಲೆಡೆ ನಡೆಯುವ ಪದ್ದತಿಯಂತಾಗಿದೆ. ನಾವೇನೂ ಮಾಡಲಾಗುತ್ತದೆ ಎಂದು ಹೇಳಿದ್ಧಾರೆ.
ಇನ್ನು ಮುಖ್ಯ ಪರೀಕ್ಷಾ ಮೇಲ್ವೀಚಾರಕರು, ‘ಇದೇನೂ ಮಾಸ್ ಕಾಪಿ ಅಲ್ಲ, ಕೆಲವೊಮ್ಮೆ ಕಾಪಿ ಮಾಡುತ್ತಾರೆ. ಕಾಪಿ ಸಿಕ್ಕಾಗ ಅವುಗಳನ್ನು ತೆಗೆದು ಹೊರಗೆ ಒಗೆಯುತ್ತೇವೆ. ಇಲ್ಲಿ ನಿನ್ನೆ, ಮೊನ್ನೆ ನಕಲು ಮಾಡಿರುವ ಉದಾಹರಣೆಯಿದೆ ಎಂದಿದ್ದಾರೆ. ಇಲ್ಲಿನ ಬಿ.ಎಡ್ ಕಾಲೇಜಿನಲ್ಲಿ ನಿತ್ಯ ತರಗತಿಗಳು ನಡೆಯದೇ ಕೇವಲ ಪರೀಕ್ಷೆಗಳಿಗೆ ಮಾತ್ರ ವಿದ್ಯಾರ್ಥಿಗಳು ಹಾಜರಾಗೋದರ ಕುರಿತು ಪ್ರಾಂಶುಪಾಲರು ಉತ್ತರಿಸಿ, ‘ನಿತ್ಯ ತರಗತಿಗಳು ನಡೆಯುತ್ತವೆ. ಈಗ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆಯಲ್ಲಿ ನಕಲು ಮಾಡಲಾಗುತ್ತಿರೋ ಬಗ್ಗೆ ನನಗೆ ಗೊತ್ತೇ ಇಲ್ಲ. ಹಾಲ್ ಟಿಕೆಟ್ ಕೊಡೋವರೆಗೆ ಮಾತ್ರ ನನ್ನ ಜವಾಬ್ದಾರಿ. ಪರೀಕ್ಷೆಗಳನ್ನು ಚೆನೈನಲ್ಲಿರುವ ಹಿಂದಿ ಪ್ರಚಾರ ಸಭೆಯವರು ನೋಡಿಕೊಳ್ಳುತ್ತಾರೆ. ಪರೀಕ್ಷೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಸದ್ಯ ಇಲ್ಲಿ ನಡೆಯುತ್ತಿರುವ ಪರೀಕ್ಷೆಗಳು ಮಾಸ್ ಕಾಪಿಯ ಮೂಲಕ ನಡೆಯುತ್ತಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಓಡಿಸ್ಸಾ ಮೂಲದ ವಿದ್ಯಾರ್ಥಿಗಳು ಇಲ್ಲಿ ಆಡ್ಮಿಷನ್ ಮಾಡಿದ್ದು, ಯಾವುದೇ ತರಗತಿಗಳು ನಡೆಯುವುದಿಲ್ಲ. ಎಲ್ಲರೂ ಪರೀಕ್ಷೆಗೆ ಮಾತ್ರ ಹಾಜರಾಗುತ್ತಾರೆ. ಈ ಹಿನ್ನಲೆ ಸಂಬಂಧಿಸಿದವರು ಇತ್ತ ಸೂಕ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ಶಿಕ್ಷಣದ ಮೂಲ ತತ್ವಗಳನ್ನೇ ಗಾಳಿಗೆ ತೂರಿ ಅಪ್ರಭುದ್ದ ಶಿಕ್ಷಕರ ನಿರ್ಮಾಣ ಮುಂದುವರೆದಂತಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ