ವಿಜಯಪುರ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಕಾರ್ಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಡಾ.ವೀರೇಂದ್ರ ಹೆಗ್ಗಡೆ
ಡಾ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಗ್ಗೆ ವಿವರಣೆ ನೀಡಿದ್ದು, ವಿಜಯಪುರ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಘೋಷಣೆ ಮಾಡಿದರು.
ವಿಜಯಪುರ: ಸ್ವಸಹಾಯ ಸಂಘಗಳ ಸಮಾವೇಶ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮವನ್ನು ಇಂದು (ನವೆಂಬರ್ 12) ವಿಜಯಪುರದ ಬಿಎಲ್ಡಿಇ ಸಂಸ್ಥೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಡಾ. ಡಾ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು. ಶಾಸಕರಾದ ಎಂ.ಬಿ.ಪಾಟೀಲ್, ಸೋಮನಗೌಡ ಪಾಟೀಲ್, ದೇವಾನಂದ ಚೌಹಾಣ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಗ್ಗೆ ವಿವರಣೆ ನೀಡಿದ್ದು, ವಿಜಯಪುರ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಘೋಷಣೆ ಮಾಡಿದರು.
ಗಾಂಧೀಜಿ ಅವರ ಕಂಡ ಗ್ರಾಮೀಣ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಅನಕೂಲವಾಗಲೆಂದು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಜಿಲ್ಲೆಯ 19 ಕೆರೆಗಳನ್ನು ಹೂಳೆತ್ತುವುದು, ಹತ್ತಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವುದು, ವಿವಿಧ ಶಾಲೆಗಳಿಗೆ ಪಿಠೋಪಕರಣ ನೀಡುವುದು, ವಿಕಲಾಂಗರಿಗೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡುವುದು ಹಾಗೂ ಸಾಧನೆ ಮಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.
ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು. ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಉಪಯೋಗಗಳನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ಜೀವನ ನಡೆಸಬೇಕು. ಅಲ್ಲದೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಆರಂಭ, ನಡೆದು ಬಂದ ದಾರಿ ಹಾಗೂ ಮಾಡಿದ ಸಾಧನೆ, ಗ್ರಾಮೀಣ ಭಾರತದ ಕನಸು, ಜನರಿಗೆ ಆದಂಥ ಉಪಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಸ್ ಆರು ತಾಲೂಕುಗಳಲ್ಲಿ 4 ವಲಯಗಳನ್ನು ಹೊಂದಿದೆ. 474 ಕಾರ್ಯಕ್ಷೇತ್ರಗಳ ಪೈಕಿ 345 ಹಣ ಸಂಗ್ರಹಣಾ ಕೇಂದ್ರಗಳನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ 39 ಕೋಟಿ ಹಣ ಉಳಿತಾಯವನ್ನು ಸದಸ್ಯರು ಮಾಡಿದ್ದಾರೆ. ಜಿಲ್ಲೆಯಲ್ಲಿ 90 ಕೋಟಿ ಪ್ರಗತಿ ನಿಧಿ ವಿತರಣೆ ಮಾಡಲಾಗಿದೆ. 189 ಕೋಟಿ ಬಾಕಿ ಬರಬೇಕಿದೆ. ಗ್ರಾಮೀಣ ಭಾರತದ ಕನಸು ನನಸು ಮಾಡಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನಿತ್ಯ ಕೆಲಸ ಮಾಡುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಎಂ. ಬಿ. ಪಾಟೀಲ್, ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ ಟ್ರಸ್ಟ್ ಮೂಲಕ ನನಸಾಗುತ್ತಿದೆ. ಯಾವುದೇ ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ. ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಹೆಗ್ಗಡೆ ಅವರ ಕಾರ್ಯ ಅಮೋಘವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ದಾಖಲೆ ಪ್ರಮಾಣದಲ್ಲಿ ಸಂಘಗಳನ್ನು ತೆರೆದು ಸುಸಜ್ಜಿತ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಇಡೀ ವಿಶ್ವದಲ್ಲೇ ಬೃಹತ್ ಸಂಘಟನೆಯಾಗಿ ಬೆಳೆದು ಸಾಮಾಜಿಕ ಸೇವೆಯನ್ನು ಮತ್ತಷ್ಟು ಮಾಡಲಿ ಎಂದು ಹೇಳಿದರು.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ 73ನೇ ಜನ್ಮದಿನದ ಸಂಭ್ರಮ, ಶುಭಾಶಯಗಳ ಸುರಿಮಳೆ
National Farmers Day 2020: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರೂಪಿಸಿದ ಸಮಗ್ರ ಕೃಷಿ ಪದ್ಧತಿಗಳ ಪರಿಚಯ
Published On - 4:04 pm, Fri, 12 November 21