ವಿಜಯಪುರ, ಮೇ.01: ಮಹಾರಾಷ್ಟ್ರದ ಗಡಿ ಭಾಗವನ್ನು ಹಂಚಿಕೊಂಡಿರುವ ವಿಜಯಪುರ(Vijayapur) ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೇನೂ ಕಡಿಮೆ ಇಲ್ಲ. ಅದರಲ್ಲೂ ಅಕ್ರಮ ಗಾಂಜಾ(Ganja), ಕೊಕೇನ್, ಚರಸ್, ಡ್ರಗ್ಸ್ ಸಾಗಾಟ ಮಾರಾಟ ಹಾಗೂ ಸಂಗ್ರಹದ ತಾಣವಾಗಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಆಧಿಕಾರಿಗಳೂ ಅಲ್ಲಲ್ಲಿ ದಾಳಿ ನಡೆಸಿ ಈ ಅಕ್ರಮಕ್ಕೆ ಬ್ರೇಕ್ ಹಾಕುತ್ತಿದ್ದರೂ, ಸಂಪೂರ್ಣವಾಗಿ ನಿಂತಿಲ್ಲ. ಸದ್ಯ ನಗರದ ಆದರ್ಶನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಗಾಂಜಾ ತಂಡವನ್ನೇ ಬೇಧಿಸಿದ್ದಾರೆ.
ನಗರದ ಸೊಲ್ಲಾಪುರ ಬ್ರಿಡ್ಜ್ ಬಳಿ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಬೈಕ್ಗಳ ಮೇಲೆ ತಂದಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ಗ್ಯಾಂಗ್ನ್ನು ಆದರ್ಶ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು 7.50 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನಗರದ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ರಾಠೋಡ್, ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿ ಸಾಯಿಹೇಮಂತ ತಾಟಿ ಇವರಿಗೆ ಸಹಾಯ ಮಾಡಿದ ಅಭಿಮನ್ಯು ಚವ್ಹಾಣ ಹಾಗೂ ಅವಿನಾಶ ಮೇತ್ರಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಬೀದರ್ನಲ್ಲಿ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ NCB ಅಧಿಕಾರಿಗಳು
ಇದರಲ್ಲಿ ಅಭಿಮನ್ಯು ಚವ್ಹಾಣ ಮಧ್ಯಪ್ರದೇಶದ ಮೂಲಕ ಗಾಂಜಾ ತಂದು ಸಹಾಯಕ ಉಪನ್ಯಾಸಕ ಪ್ರಕಾಶ ರಾಠೋಡ್ಗೆ ನೀಡುತ್ತಿದ್ದ. ಬಳಿಕ ಅದನ್ನು ಸಹಾಯಕ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ ಇತರರು ಕೂಡಿಟ್ಟು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಗಾಂಜಾ ಎಲ್ಲಿಂದ ಬಂತು, ಹೇಗೆ ಬಂತು? ಯಾರಿಗೆ ಕೊಡುತ್ತಿದ್ದರು , ಎಲ್ಲಿ ಹಾಗೂ ಯಾರ್ಯಾರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬುದರ ಕುರಿತು ತನಿಖೆ ನಡೆಸೋದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಕಾನೂನು ಬಾಹಿರವಾಗಿ ಗಾಂಜಾ ಸಂಗ್ರಹ ಮಾಡಿಕೊಂಡ ಜಾಲದ ಪೈಕಿ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾದ್ಯಾಪಕ ಹಾಗೂ ಓರ್ವ ವಿದ್ಯಾರ್ಥಿ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಶ್ಲಾಘನೀಯವೆಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಚನದಿಗಳು ನಾಡು ಎಂದು ಪಂಜಾಬ್ ಹಾಗೂ ವಿಜಯಪುರವನ್ನು ಕರೆಯಲಾಗುತ್ತಿತ್ತು. ಇದೀಗ ಅದೇ ಉಡ್ತಾ ಪಂಜಾಬ್ ಮಾದರಿಯಲ್ಲೇ ನಮ್ಮ ಜಿಲ್ಲೆಯೂ ಉಡ್ತಾ ವಿಜಯಪುರ ಆಗುತ್ತಿದೆ. ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರದ ಮೂಲಕ ನಮ್ಮ ಜಿಲ್ಲೆಗೆ ನಿಷೇಧಿತ ನಶೆಯ ಪದಾರ್ಥಗಳು ಸರಬರಾಜಾಗುತ್ತಿದೆ.
ಇದನ್ನೂ ಓದಿ:ಗಾಂಜಾ ಮತ್ತಿನಲ್ಲಿ ಮೂವರು ಯುವಕರ ಪುಂಡಾಟ: ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯ
ಜಿಲ್ಲೆಯಲ್ಲಿ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ಕಾಲೇಜುಗಳಿದ್ದು, ಅನ್ಯ ರಾಜ್ಯದ ಯುವಕರು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು, ಇಲ್ಲಿ ನಶೆಯ ಪದಾರ್ಥಗಳು ಮಾರಾಟ ಆಗುತ್ತಿವೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಯುತ್ತಿದ್ದು, ನಮ್ಮ ಜಿಲ್ಲೆಯ ಸುಶಿಕ್ಷಿತ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಾಗಿದೆ. ಹಾಗಾಗಿ ಅಂತರ್ ರಾಜ್ಯಗಳ ಬಾರ್ಡರ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಜನರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಈ ಪ್ರಕರಣ ಪೊಲೀಸರು ಬೇಧಿಸಿದ್ದು, ಅಕ್ರಮ ನಿಷೇಧಿತ ಗಾಂಜಾ ಸಾಗಾಟ ಸಂಗ್ರಹ ಹಾಗೂ ಮಾರಾಟದ ವ್ಯವಹಾರದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಾಮೀಲಾಗಿದ್ದು, ಭಯಕ್ಕೆ ಕಾರಣವಾಗಿದೆ.
ಒಟ್ಟಾರೆ ಗಾಂಜಾ ಹಾಗೂ ನಿಷೇಧಿತ ನಶೆಯ ಪದಾರ್ಥಗಳ ಕಾರಣದಿಂದ ಕಾನೂನು ಬಾಹಿರ ಕೃತ್ಯಗಳು ಸಹ ನಡೆಯುತ್ತವೆ. ಗಾಂಜಾದ ಗಮ್ಮತ್ತಿನಲ್ಲಿ ಮಾಡಬಾರದ ಕೃತ್ಯಗಳನ್ನು ಮಾಡುವ ಸಾಧ್ಯತೆಯಿದೆ. ಹಾಗಾಗಿ ಒಂದು ಪ್ರಕರಣ ಕಂಡು ಹಿಡಿದು ಸುಮ್ಮನೇ ಕೂಡದೇ ಪೊಲೀಸರು ಹಾಗೂ ಇತರೆ ಸಂಬಂಧಿಸಿದ ಆಧಿಕಾರಿಗಳು ಸಹ ಇಂತಹ ಅಕ್ರಮವನ್ನು ತಡೆಯಬೇಕಿದೆ. ಅಕ್ರಮ ಗಾಂಜಾ ಹಾಗೂ ನಶೆಯ ಪದಾರ್ಥಗಳ ವ್ಯವಹಾರ ಮಾಡುವವರು ವಿದ್ಯಾರ್ಥಿಗಳನ್ನೇ ಗುರಿ ಮಾಡಿದ್ದಾರೆ. ಹಾಗಾಗಿ ಈ ಅಕ್ರಮಕ್ಕೆ ಬ್ರೇಕ್ ಬೀಳಲೇ ಬೇಕಿದೆ. ಇಲ್ಲವಾದರೆ ನಶಾ ಲೋಕಕ್ಕೆ ವಿದ್ಯಾರ್ಥಿಗಳು ಬಲಿಯಾಗೋದು ಮಾತ್ರ ತಪ್ಪಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ