ವಿಜಯಪುರ: ವಿವಿಧ ರೋಗಗಳಿಂದ ನೆಲಕಚ್ಚಿದ ಈರುಳ್ಳಿ ಬೆಳೆ; ರೈತರಲ್ಲಿ ಹೆಚ್ಚಿದ ಆತಂಕ
ಕಳೆದ 2019-20 ರಲ್ಲಿ 23,000 ಹೆಕ್ಟೇರ್, 2020-21 ರಲ್ಲಿ 40,000 ಹೆಕ್ಟೇರ್, 2021-22 ರಲ್ಲಿ 45,440 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಸತತ ಪ್ರವಾಹ, ಅಕಾಲಿಕ ಮಳೆ, ಹವಾಮಾನ ವೈಪರಿತ್ಯದ ಕಾರಣ ಸತತ ಮೂರು ವರ್ಷಗಳಿಂದ ಈರುಳ್ಳಿ ನೆಲ ಕಚ್ಚಿದೆ. ಇದೇ ಕಾರಣದಿಂದ ಈರುಳ್ಳಿ ಬೆಳೆಗೆ ಎಲೆಚುಕ್ಕೆ ರೋಗ ಬಂದಿದೆ.
ವಿಜಯಪುರ: ನೆರೆಯ ಮಹಾರಾಷ್ಟ್ರದ ನಾಸಿಕ್ ಹಾಗೂ ಪೂನಾದ ಸುತ್ತಮುತ್ತ ಬೆಳೆಯುವ ಉತ್ತಮ ಗುಣಮಟ್ಟದ ಈರುಳ್ಳಿಯನ್ನು(Onion) ಕರ್ನಾಟಕದ ವಿಜಯಪುರ ಜಿಲ್ಲೆಯ ನಿಡಗುಂದಿ ಕೋಲ್ಹಾರ ಬಸವನಬಾಗೇವಾಡಿ ತಾಲೂಕುಗಳಲ್ಲಿ ಕೂಡ ಬೆಳೆಯಲಾಗುತ್ತದೆ. ಪ್ರಮುಖ ಆರ್ಥಿಕ ಬೆಳೆಯನ್ನಾಗಿ(Crop) ಈರುಳ್ಳಿಯನ್ನು ರೈತರು(Farmers) ಬೆಳೆಯುತ್ತಾರೆ. ಈ ಭಾಗವನ್ನು ಈರುಳ್ಳಿ ಕಣಜವೆಂದು ಕರೆಯಲಾಗುತ್ತದೆ. ಇಂತಹ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿನ ರೈತರು ಬೆಳೆದ ಈರುಳ್ಳಿ ಈಗ ಹಾಳಾಗಿದೆ. ಸಾವಿರಾರು ಟನ್ ಈರುಳ್ಳಿ ಉತ್ಪಾದನೆಗೆ ಹೊಡೆತ ಬಿದ್ದಿದೆ.
ರಾಜ್ಯದಲ್ಲಿಯೇ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳ ಪೈಕಿ ವಿಜಯಪುರ ಜಿಲ್ಲೆಯೂ ಒಂದಾಗಿದೆ. ಜಿಲ್ಲೆ ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕಿನ ಭಾಗದಲ್ಲಿ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ವರ್ಷದಲ್ಲಿ ಎರಡು ಬಾರಿ ಈರುಳ್ಳಿ ಬೆಳೆಯುವುದು ಇಲ್ಲಿನ ರೈತರ ಮತ್ತೊಂದು ಹೆಗ್ಗಳಿಕೆ. ಉತ್ತಮ ಇಳುವರಿಯ ಜೊತೆಗೆ ಇಲ್ಲಿನ ಹವಾಮಾನ ಈರುಳ್ಳಿ ಬೆಳೆಯಲು ಪೂರಕವಾಗಿದೆ. ಜೊತೆಗೆ ಕೃಷ್ಣೆಯ ನೀರು ಈರುಳ್ಳಿಗೆ ವರವಾಗಿದೆ. ಹೀಗಾಗಿ ಈ ಭಾಗದ ರೈತರಿಗೆ ನಿರ್ದಿಷ್ಟ ವರಮಾನದ ಬೆಳೆ ಈರುಳ್ಳಿಯಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಬೆಳೆಗಾರರಿಗೂ ಈರುಳ್ಳಿ ಕಣ್ಣೀರು ತರಿಸಿದೆ.
ಮೂರು ವರ್ಷಗಳಿಂದ ಈರುಳ್ಳಿ ಬೆಳೆಗಾರರಿಗೆ ಬರೆ ಹಾಕುತ್ತಿದೆ. ಸತತ ಎರಡು ವರ್ಷಗಳ ಪ್ರವಾಹದಲ್ಲಿ ಈರುಳ್ಳಿ ಕೊಚ್ಚಿ ಹೋಗಿತ್ತು. ಈ ಬಾರಿ ಉತ್ತಮ ಬೆಳೆ ಬರುತ್ತದೆ ಎಂದು ನಂಬಿದ್ದವರಿಗೆ ಮೋಸವಾದಂತಾಗಿದೆ. ಕಾರಣ ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯ, ಆಧಿಕ ಮಂಜು ಬಿದ್ದಿರುವ ಹಾಗೂ ಅಕಾಲಿಕ ಮಳೆ ಈರುಳ್ಳಿ ಬೆಳೆಯನ್ನು ಸಂಪೂರ್ಣವಾಗಿ ಅಪೋಷಣ ತೆಗೆದುಕೊಂಡಿದೆ. ಸತತವಾಗಿ ವಾಯುಭಾರ ಕುಸಿತ, ಮೋಡ ಮುಸುಕಿದ ವಾತಾವರಣ, ಅಕಾಲಿಕ ಮಳೆ ಕಾರಣ ಈರುಳ್ಳಿಗೆ ವಿವಿಧ ರೋಗಗಳು ಕಾಡಿ, ಇಡೀ ಬೆಳೆಗಳು ಹಾಳಾಗಿದೆ ಎಂದು ಈರುಳ್ಳಿ ಬೆಳೆಗಾರ ಈರಣ್ಣ ಹಂಚಿನಾಳ ಹೇಳಿದ್ದಾರೆ.
ಕಳೆದ 2019-20 ರಲ್ಲಿ 23,000 ಹೆಕ್ಟೇರ್, 2020-21 ರಲ್ಲಿ 40,000 ಹೆಕ್ಟೇರ್, 2021-22 ರಲ್ಲಿ 45,440 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಸತತ ಪ್ರವಾಹ, ಅಕಾಲಿಕ ಮಳೆ, ಹವಾಮಾನ ವೈಪರಿತ್ಯದ ಕಾರಣ ಸತತ ಮೂರು ವರ್ಷಗಳಿಂದ ಈರುಳ್ಳಿ ನೆಲ ಕಚ್ಚಿದೆ. ಇದೇ ಕಾರಣದಿಂದ ಈರುಳ್ಳಿ ಬೆಳೆಗೆ ಎಲೆಚುಕ್ಕೆ ರೋಗ ಬಂದಿದೆ. ಎಲೆ ಸುರಳಿ ರೋಗ, ಹಳದಿ ರೋಗ, ಕೊಳೆ ರೋಗ, ಪರ್ಪಲ್ ಬ್ಲಾಚ್, ಥ್ರೀಪ್ಸ್ ನುಶಿ ಭಾದೆ, ಬೂದಿ ರೋಗಗಳು ವ್ಯಾಪಿಸಿ ಎಲ್ಲಾ ಬೆಳೆಗಳನ್ನು ಹಾಳು ಮಾಡಿವೆ.
ಎಷ್ಟೇ ಔಷದೋಪಚಾರ ಮಾಡಿದರೂ ಬೆಳೆಯನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಒಂದು ಎಕರೆ ಈರುಳ್ಳಿ ಬೆಳೆ ಬೆಳೆಯಲು ಕನಿಷ್ಟ 30 ರಿಂದ 35 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಈರುಳ್ಳಿ ಮಾರಾಟ ಮಾಡಿದರೂ ಪ್ರತಿ ಎಕರೆಗೆ 20 ರಿಂದ 25 ಸಾವಿರ ರೂಪಾಯಿಯೂ ವಾಪಸ್ ಬಾರದಂತಾಗಿದೆ. ಹೀಗಾಗಿ ಈರುಳ್ಳಿಯನ್ನು ನೆಚ್ಚಿಕೊಂಡಿದ್ದ ಅನ್ನದಾತರು ಹಾನಿಯನ್ನು ಅನುಭವಿಸುತ್ತಿದ್ದಾರೆ. ಇಷ್ಟೆಲ್ಲಾ ನಷ್ಟವಾಗಿದ್ದರೂ ನಮ್ಮ ಜಿಲ್ಲೆಗೆ ಪರಿಹಾರ ನೀಡಿಲ್ಲ. ಉಳೀದ ಜಿಲ್ಲೆಗಳ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದರೂ ನಮಗೆ ನೀಡಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಶಾಸಕರು ರೈತರ ಪರ ಗಮನ ಹರಿಸಬೇಕಿದೆ ಎಂದು ರೈತ ಪರ ಹೋರಾಟಗಾರ ಸೋಮು ಬಿರಾದಾರ್ ಒತ್ತಾಯ ಮಾಡಿದ್ದಾರೆ.
ಒಟ್ಟಾರೆ ಅನ್ನದಾತರ ಬದುಕು ನಿಕೃಷ್ಟವಾಗಿದೆ. ಅತಿವೃಷ್ಟಿ- ಅನಾವೃಷ್ಟಿ. ಪ್ರಾಕೃತಿಕ ವಿಕೋಪ, ಹವಾಮಾನ ವೈಪರಿತ್ಯ, ರೋಗ ಭಾದೆಗಳನ್ನು ದಾಟಿ ಕೊನೆಗೆ ಉಳಿಯುವ ಬೆಳೆ ರೈತನ ಪಾಲಿನದ್ದು. ಕಾರಣ ಜಿಲ್ಲೆಯ ಪ್ರಮುಖ ಆರ್ಥೀಕ ತೋಟಗಾರಿಕೆ ಬೆಳೆಯಾದ ಈರುಳ್ಳಿ ಈ ಬಾರಿಯೂ ಹಾನಿಯಾಗಿದೆ. ಜೊತೆಗೆ ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರು ಹಾಗೂ ಸರ್ಕಾರ, ವಿಜಯಪುರ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಸಹಾಯ ಮಾಡಬೇಕಿದೆ. ಇಲ್ಲವಾದರೆ ಈರುಳ್ಳಿ ಬೆಳೆಗಾರರು ಸಾಲದ ಸೂಳಿಯಲ್ಲಿ ಸಿಲುಕುವಂತಾಗುತ್ತದೆ.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ:
ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ
ಬೋನ್ಸಾಯ್ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ; ಪರಿಸರ ಸಂರಕ್ಷಣೆಗೆ ಮುಂದಾದ ನಿವೃತ್ತ ಅರಣ್ಯಾಧಿಕಾರಿ