ಮಹಾರಾಷ್ಟ್ರದ ದಾನಮ್ಮ ದೇವಿ ಕ್ಷೇತ್ರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಅಡಿಗಲ್ಲು
ಈ ಬಾರಿಯ ಆಯವ್ಯಯದಲ್ಲಿ 119 ಕೋಟಿ ರೂಪಾಯಿಗಳ ಅನುದಾನವನ್ನ ಮುಜರಾಯಿ ಇಲಾಖೆಗೆ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ 168 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿದ್ದು, ಒಟ್ಟಾರೆ ಪ್ರಸಕ್ತ ವರ್ಷ ಇದುವರೆಗೂ 287 ಕೋಟಿ ಅನುದಾನ ನೀಡಲಾಗಿದೆ.
ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರದ (Maharashtra) ಲಕ್ಷಾಂತರ ಭಕ್ತರ ತಾಣ ದಾನಮ್ಮ ದೇವಿಯ ದೇವಸ್ಥಾನ (Danamma Devi Temple). ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿರುವ ಗುಡ್ಡಾಪುರದ ದಾನಮ್ಮ ದೇವಿಗೆ ಕರ್ನಾಟಕ ರಾಜ್ಯದ ಲಕ್ಷ ಲಕ್ಷ ಭಕ್ತರಿದ್ದಾರೆ. ಪ್ರತಿ ವರ್ಷ ಛಟ್ಟಿ ಅಮಾವಾಸ್ಯೆಯಲ್ಲಿ ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಇಂಥ ಪವಿತ್ರ ಕ್ಷೇತ್ರದಲ್ಲಿ ಕರ್ನಾಟಕದ ಜನರಿಗೆ ಅನುಕೂಲವಾಗಲು ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ನಿನ್ನೆ (ಫೆ.16) ಅಡಿಗಲ್ಲು ಹಾಕಲಾಯಿತು. ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಅಡಿಗಲ್ಲು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ನಮ್ಮ ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಯತ್ತ ವಿಶೇಷ ಕಾಳಜಿಯನ್ನ ಹೊಂದಿದೆ. ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಹಾಗೂ ನಮ್ಮ ರಾಜ್ಯದ ಭಕ್ತಾದಿಗಳಿಗೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಡೆ ನಾವು ಗಮನ ನೀಡುತ್ತಿದ್ದೇವೆ ಎಂದರು. ದೇವಸ್ಥಾನಗಳ ಅಭಿವೃದ್ಧಿಯತ್ತ ವಿಶೇಷ ಕಾಳಜಿಯನ್ನು ಹೊಂದಿರುವ ಮುಖ್ಯಮಂತ್ರಿಗಳು ಮುಂದಿನ ಆಯವ್ಯಯದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಆಯವ್ಯಯದಲ್ಲಿ 119 ಕೋಟಿ ರೂಪಾಯಿಗಳ ಅನುದಾನವನ್ನ ಮುಜರಾಯಿ ಇಲಾಖೆಗೆ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ 168 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿದ್ದು, ಒಟ್ಟಾರೆ ಪ್ರಸಕ್ತ ವರ್ಷ ಇದುವರೆಗೂ 287 ಕೋಟಿ ಅನುದಾನ ನೀಡಲಾಗಿದೆ. ಪ್ರತಿ ವರ್ಷ ಬಜೆಟ್ನಲ್ಲಿ 60 ರಿಂದ 70 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಲಾಗಿದ್ದು, ಈ ಬಾರಿಯ ಬಜೆಟ್ನಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವ ಭರವಸೆಯನ್ನು ವ್ಯಕ್ತಪಡಿಸಿದರು.
ಈಗಾಗಲೇ ಶ್ರೀಶೈಲ, ಅಯೋಧ್ಯ, ಪಂಡರಾಪುರ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಗುಡ್ಡಾಪುರಕ್ಕೆ ಕರ್ನಾಟಕ ರಾಜ್ಯದಿಂದ ಅಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಲಭ್ಯ ಒದಗಿಸಲು ಕರ್ನಾಟಕ ಭವನ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈಗಾಗಲೇ ದೇವಾಲಯದ ಹೆಸರಿನಲ್ಲಿರುವ 2 ಏಕರೆ ಜಮೀನನ್ನು ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಕ್ತರಿಗೆ ವಿಶಾಲವಾದ ದಾಸೋಹ ಭವನ, ವಾಸ್ತವ್ಯಕ್ಕಾಗಿ ಭವನವನ್ನು ನಿರ್ಮಿಸಲಾಗುವುದು. ಇದು ಮೊದಲ ಹಂತದ ಕಾಮಗಾರಿಯಾಗಿದ್ದು, ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದ ಸೊಲ್ಲಾಪುರ ಸಂಸದ ಡಾ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕರ್ನಾಟಕ ಸರಕಾರದ ವತಿಯಿಂದ ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳ ಅನುದಾನ ದೊರಕಿರುವುದು ಬಹಳ ಸಂತಸದ ವಿಷಯ. ಪ್ರಸಿದ್ಧ ಪುಣ್ಯ ಕ್ಷೇತ್ರವಾದ ದಾನಮ್ಮ ದೇವಿ ಕ್ಷೇತ್ರ ಅಭಿವೃದ್ದಿಗೆ ಇನ್ನಷ್ಟು ಅನುದಾನ ಶಶಿಕಲಾ ಜೊಲ್ಲೆ ನೀಡಲಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಲಿ ಎಂದರು. ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ಜತ್ತ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಕ್ರಮಸಿಂಹ ಸಾವಂತ್, ಸಂಸದರಾದ ಸಂಜಯ್ ಕಾಕಾ ಪಾಟೀಲ್, ದಾನಮ್ಮ ದೇವಿ ಟ್ರಸ್ಟ್ ಕಮಿಟಿಯ ಸದಸ್ಯರು, ಆ ಭಾಗದ ಇತರ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ
ಕಸ, ವಾಮಾಚಾರ ಆರೋಪ; ಮಾರಾಮಾರಿ, ನಿವೃತ್ತ ಎಎಸ್ಐ ಕುಟುಂಬಸ್ಥರ ಮೇಲೆ ಪೀಣ್ಯ ಠಾಣೆಯಲ್ಲಿ ಎಫ್ಐಆರ್
Published On - 12:10 pm, Thu, 17 February 22