ಆರ್ಎಸ್ಎಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ: ಬಿಜೆಪಿ ವಿರುದ್ಧ ಹರಿಹಾಯ್ದ ಎಚ್ಡಿ ಕುಮಾರಸ್ವಾಮಿ
ಒಬ್ಬೊಬ್ಬರದ್ದೂ ಬಂಡವಾಳ ತೆಗೆದುಬಿಟ್ಟರೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಜಯಪುರ: ಆರ್ಎಸ್ಎಸ್ ಬಗ್ಗೆ ನಾನು ಏನು ಚರ್ಚಿಸಿದ್ದೇನೋ ಅದಕ್ಕೆ ಉ್ತತರ ಕೊಡಿ. ವೈಯಕ್ತಿಕ ವಿಚಾರಗಳ ಚರ್ಚೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾಕೀತು ಮಾಡಿದರು. ಉಪಚುನಾವಣೆ ಪ್ರಚಾರಕ್ಕೆಂದು ಸಿಂದಗಿಯಲ್ಲಿರುವ ಅವರು, ಬಿಜೆಪಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ನನ್ನ ಬಗ್ಗೆ ಚರ್ಚಿಸಿದರೆ ಒಬ್ಬೊಬ್ಬರದ್ದು ಹೊರಬರುತ್ತೆ. ಆರ್ಎಸ್ಎಸ್ ಶಾಖೆಯಲ್ಲಿ ಚಡ್ಡಿಹಾಕ್ಕೊಂಡು ತರಬೇತಿ ಪಡೆದು ಬಂದವರೆಲ್ಲರದ್ದೂ ಹೊರ ಬರುತ್ತೆ. ಯಾರನ್ನು ಹೇಗೆ ಹಾಳು ಮಾಡಿದ್ದೀರಿ, ನಿಮ್ಮಿಂದ ಯಾರೆಲ್ಲಾ ಸತ್ತರು ಎನ್ನುವುದು ನನಗೆ ಗೊತ್ತಿದೆ ಎಂದು ಎಚ್ಚರಿಸಿದರು.
‘ತೆರೆದ ಪುಸ್ತಕ ತೆರೆದ ಬಾವಿಯಷ್ಟೇ ಅಪಾಯ’ ಎಂಬ ಬಿಜೆಪಿ ಟ್ವೀಟ್ ಬಗ್ಗೆ ಪ್ರಸ್ತಾಪಿಸಿದ ಅವರು, ನಾನು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಕೆಎರ್ಎಸ್ ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡವರನ್ನು ಸಿ.ಟಿ.ರವಿ ಸ್ಮರಿಸಿಕೊಳ್ಳಲಿ. ಅದಕ್ಕೆ ಕಾರಣಕರ್ತರು ಯಾರು? ಆ ಕುಟುಂಬ ಹಾಳುಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಒಬ್ಬೊಬ್ಬರದ್ದೂ ಬಂಡವಾಳ ತೆಗೆದುಬಿಟ್ಟರೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ. ಆರ್ಎಸ್ಎಸ್ ಸಂಚಾಲಕರ ಮಕ್ಕಳ ಭವಿಷ್ಯ ಹಾಳು ಮಾಡಿದವರು ಯಾರು ಎಂಬ ಪ್ರಶ್ನೆಗೆ ಕಟೀಲ್ ಉತ್ತರ ಕೊಡ್ತಾರಾ ಎಂದು ಪ್ರಶ್ನಿಸಿದರು. ನಾನು ಅವರ ರೀತಿ ಜೀವನ ಮಾಡಿಲ್ಲ. ನನ್ನನ್ನು ಕೆಣಕಿದ್ರೆ ಒಬ್ಬೊಬ್ಬರ ಬಣ್ಣವೂ ಬಯಲಾಗುತ್ತೆ, ನಿಮ್ಮ ಇತಿಹಾಸವನ್ನೇ ತೆಗೆಯುತ್ತೇನೆ ಎಂದು ಎಚ್ಚರಿಸಿದರು. ನಿಮ್ಮ ದುಡಿಮೆ ಮೇಲೆ ರಾಜಕೀಯ ಮಾಡಿ ಎಂದು ಸಲಹೆ ಮಾಡಿದರು.
ರಾಹುಲ್ ಡ್ರಗ್ ಪೆಡ್ಲರ್ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಆ ವಿಷಯ ಮಾತಾಡಿದರೆ ಇವರು ಜನರ ಮುಂದೆ ಬರಲು ಆಗುವುದಿಲ್ಲ. ನಾವು ದೇಶದ ಸಮಸ್ಯೆಗಳ ಕುರಿತು ಮಾತನಾಡಬೇಕಿದೆ. ಯಾಱರ ತಟ್ಟೆಯಲ್ಲಿ ಹೆಗ್ಗಣ, ನೊಣ ಬಿದ್ದಿದೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಱರು ಮಾತನಾಡುತ್ತಾರೆ ಅವರ ಹಿನ್ನೆಲೆ ಏನು ಎಂಬ ಬಗ್ಗೆ ಚರ್ಚೆ ಮಾಡಲು ಒಂದು ದಿನ ಬೇಕು ಎಂದರು.
ಸಿಂದಗಿ ಕ್ಷೇತ್ರದಲ್ಲಿ ಮತದಾರರ ಗಮನ ಸೆಳೆಯಲು ಆಡಳಿತ ಪಕ್ಷ ಭರವಸೆ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿದ್ದಾಗ ₹ 1200 ಕೋಟಿ ಅನುದಾನ ಬಂದಿದೆ ಎಂದು ಈಗಿನ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಅವರ ತಂದೆ ಅಭಿವೃದ್ಧಿಗಾಗಿ ಹಣ ತಂದಿದ್ದಾರೆ ಎಂದು ಹೇಳಿದ್ದಾರೆ. ಹಳ್ಳಿಗಳನ್ನು ನೋಡಿದರೆ ಆ ಹಣ ಎಲ್ಲಿಗೆ ಹೋಯ್ತು, ಅದು ಯಾರ ಅಭಿವೃದ್ಧಿಗೆ ಹೋಯ್ತು ಎಂದು ಪ್ರಶ್ನೆ ಮಾಡಬೇಕಿದೆ. ಕಾಂಗ್ರೆಸ್-ಬಿಜೆಪಿ ನಿರಂತರ ಆಡಳಿತ ನಡೆಸಿದ್ದರೂ ಕೊಡುಗೆ ಇಲ್ಲ. ನಮಗೆ ನೈತಿಕತೆ ಇದೆ, ಜನರೇ ನಮ್ಮ ಸಾಧನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ‘ಆರ್ಎಸ್ಎಸ್ ಒಂದು ಕೋಮುವಾದಿ ಸಂಘಟನೆ’- ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಇದನ್ನೂ ಓದಿ: RSS ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ: ಎಲ್ಲ ವಿವಿಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ!