ಸಿಂದಗಿ ಅತ್ಯಾಚಾರ ಆರೋಪಿ ಪೊಲೀಸ್ ಠಾಣೆಯಲ್ಲಿ ನೇಣು ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಠಾಣೆಗೆ ಮುತ್ತಿಗೆ ಹಾಕಿದ ಪೋಷಕರು ಹಾಗೂ ಸಂಬಂಧಿಗಳು ಮಾತ್ರ ಯಾರ ಸಮಜಾಯಿಷಿಗೂ ಜಗ್ಗದೇ ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ನಿಮ್ಮ ನಿರ್ಲಕ್ಷ್ಯದಿಂದಲೇ ಯುವಕನ ಸಾವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಂಧನಕ್ಕೊಳಗಾದ ಆರೋಪಿ ಪೊಲೀಸ್ ಠಾಣೆಯಲ್ಲಿ ನೇಣು ಹಾಕಿಕೊಂಡ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅಪ್ರಾಪ್ತೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನಿನ್ನೆ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಆದರೆ, ಇಂದು ನಸುಕಿನ ವೇಳೆ ಆತ ಪೊಲೀಸ್ ಠಾಣೆಯ ಶೌಚಾಲಯದಲ್ಲೇ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ತಂದ ಪೊಲೀಸರು ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ಆದರೆ, ಈ ನಡುವೆ ಠಾಣೆಗೆ ಮುತ್ತಿಗೆ ಹಾಕಿದ ಪೋಷಕರು ಹಾಗೂ ಸಂಬಂಧಿಗಳು ಮಾತ್ರ ಯಾರ ಸಮಜಾಯಿಷಿಗೂ ಜಗ್ಗದೇ ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ನಿಮ್ಮ ನಿರ್ಲಕ್ಷ್ಯದಿಂದಲೇ ಯುವಕನ ಸಾವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನಸುಕಿನ ಜಾವ ಶೌಚಾಲಯಕ್ಕೆ ತೆರಳಿದ್ದ ಆರೋಪಿ ಅಲ್ಲಿ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಮೃತಪಟ್ಟಿದ್ದಾನೆ. ಲಾಕಪ್ ಡೆತ್ ಎನ್ನಬಹುದಾದರೂ ಪೊಲೀಸರ ಕಿರುಕುಳದಿಂದ ಆರೋಪಿ ಮೃತಪಟ್ಟಿಲ್ಲ. ನೇಣು ಹಾಕಿಕೊಂಡಿದ್ದ ಕಾರಣ ಮೃತಪಟ್ಟಿದ್ದಾನೆ. ಇಂಥ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ. ಈ ಘಟನೆ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.
ಮೃತನ ಪೋಷಕರು ಹಾಗೂ ಸಂಬಂಧಿಕರಿಂದ ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂಥ ಘಟನೆಯಿಂದ ಸಹಜವಾಗಿ ಮನೆಯವರಿಗೆ ನೋವಾಗುತ್ತದೆ. ಆದರೆ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ವಿಜಯಪುರ ನಗರದಲ್ಲಿ ಎಸ್ಪಿ ಆನಂದಕುಮಾರ ಹೇಳಿಕೆ ನೀಡಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವರದಿಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಯುವಕ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿ ಯುವಕ ದೇವಿಂದ ಸಂಗೋಗಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ತಿಳಿದುಬಂದಿತ್ತು. ಸಿಂದಗಿ ಪೊಲೀಸರು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ರಾತ್ರಿ ಆತನನ್ನು ಬಂಧಿಸಿದ್ದರು. ಆದರೆ, ಬೆಳಗ್ಗೆ ಆಗುವಷ್ಟರಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆರೋಪಿ ದೇವಿಂದ ಸಂಗೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆರೋಪಿಯ ಸಾವಿಗೆ ಪೋಷಕರು, ಸಂಬಂಧಿಕರು ಆಕ್ರೋಶ ಹೊರಹಾಕಿದ್ದು, ಪೊಲೀಸರ ನಿರ್ಲಕ್ಷ್ಯದಿಂದ ದೇವಿಂದ ಮೃತಪಟ್ಟಿದ್ದಾನೆಂದು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಆರೋಪಿಯ ಪೋಷಕರು ಹಾಗೂ ಸಂಬಂಧಿಕರು ಸಿಂದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಕಾರಣ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ:
ವಿಜಯಪುರ: ನಿನ್ನೆ ಬಂಧನಕ್ಕೊಳಗಾಗಿದ್ದ ಅತ್ಯಾಚಾರ ಆರೋಪಿ ಠಾಣೆ ಶೌಚಾಲಯದಲ್ಲಿ ನೇಣಿಗೆ ಶರಣು; ಪೋಷಕರ ಆಕ್ರೋಶ
(Home Minister Araga Jnanendra announced Vijayapura Sindagi rape case arrested accused suicide case investigation to CID)