ಚಿಕಿತ್ಸೆ ಕೊಡಿಸುವುದಾಗಿ ಕರೆತಂದು ನಡುರಸ್ತೆಯಲ್ಲೇ ವೃದ್ಧೆಯನ್ನು ಬಿಟ್ಟು ಹೋದ ಸೋದರಿ, ‘ಉಚಿತ’ ದೃಷ್ಟಿ ಭಾಗ್ಯ ನೀಡಿ ಮಾನವೀಯತೆ ಮೆರೆದ ಊರಿನ ನೇತ್ರ ತಜ್ಞ!
ಸಹೋದರಿಯೇ ನಡುರಸ್ತೆಯಲ್ಲಿ ಬಿಟ್ಟು ಹೋಗಿ ಆಸ್ಪತ್ರೆಯ ಪಾಲಾದ ವೃದ್ದೆಯ ಹೆಸರು ಗೌರಮ್ಮ ಕುಂಬಾರ. ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದವರು. ಮದುವೆಯಾಗದೇ ತಮ್ಮ ಗ್ರಾಮದ ಮಠದಲ್ಲಿದ್ದುಕೊಂಡು ಜೀವನ ಮಾಡುತ್ತಿದ್ದ ಗೌರಮ್ಮಗೆ ಎರಡೂ ಕಣ್ಣಿನ ಪೊರೆ ಬೆಳೆದು ಕಣ್ಣು ಕಾಣದಂತಾಗಿದ್ದವು. ಚಿಕಿತ್ಸೆ ಕೊಡಿಸೋದಾಗಿ ಸಹೋದರಿಯೇ ನನ್ನನ್ನು ವಿಜಯಪುರಕ್ಕೆ ಕರೆತಂದಿದ್ದಳು. ನನ್ನ ಬಳಿಯಿದ್ದ ಅಷ್ಟೋ ಇಷ್ಟೂ ಹಣವನ್ನ ಇಸ್ಕೊಂಡು, ಏನೂ ಹೇಳದೆ ಕೇಳದೇ ಬಿಟ್ಟು ಹೋಗಿದ್ದಾಳೆಂದು ಅಜ್ಜಿ ದೂರಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸೇವಾ ಮನೋಭಾವನೆ ಬಿಟ್ಟಿದ್ದು ಹಣ ಮಾಡುವಲ್ಲಿ ನಿರತವಾಗಿವೆ ಎಂಬುದು ಕ್ಲೀಷೆ ಎನಿಸುವಷ್ಟು ಹಳೆಯದ್ದಾಗಿದೆ. ಉತ್ತಮ ಚಿಕಿತ್ಸೆ ನೀಡುತ್ತಿದ್ದರೂ ಮಾನವೀಯತೆಯನ್ನೇ ಮರೆತು ವ್ಯಾಪಾರೀಕರಣ ಮಾಡುತ್ತಿವೆ ಎಂಬ ಆರೋಪಗಳು ಇತ್ತೀಚೆಗೆ ಹೆಚ್ಚು ಕೇಳಿ ಬರುತ್ತಿವೆ. ಅನೇಕ ಪ್ರಕರಣಗಳಲ್ಲಿ ಇದು ಸತ್ಯವೂ ಆಗಿವೆ. ಆದರೆ ಇದಕ್ಕೆ ಹೊರತಾದ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಎರಡೂ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದ 70 ವರ್ಷದ ವೃದ್ದೆಯನ್ನು (poor old lady) ಆಕೆಯ ಮನೆಯವರು ವಿಜಯಪಯರ ನಗರದಲ್ಲಿ ತಂದು ಬಿಟ್ಟು ಹೋಗಿದ್ದಾರೆ. ದಿಕ್ಕೇ ಕಾಣದ ಅಜ್ಜಿಗೆ ಇದೀಗ ಕಣ್ಣೂ ಕಾಣುತ್ತಿದೆ. ಎದುರಿನ ವಸ್ತುಗಳು ಕಾಣುತ್ತಿವೆ. ಇದಕ್ಕೆ ಕಾರಣವಾಗಿದ್ದೇ ಖಾಸಗಿ ಆಸ್ಪತ್ರೆಯ ವೈದ್ಯರ (eye surgeon) ಮಾನವೀಯತೆ (humanity). ಡಿಟೇಲ್ಸ್ ಇಲ್ಲಿದೆ ನೋಡಿ.
ಇಂದು ಅದೆಷ್ಟೋ ಮಕ್ಕಳು ತಮ್ಮನ್ನು ಹೆತ್ತು ಹೊತ್ತು ಬೆಳೆಸಿದ ತಂದೆ ತಾಯಿಗಳನ್ನೆ ಮನೆಯಿಂದ ಹೊರ ಹಾಕುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ. ಇನ್ನು ಕಷ್ಟದಲ್ಲಿದ್ದರೆ ಸಂಬಂಧಿಕರೂ ಸಹ ನಮ್ಮತ್ತ ನೋಡುವುದಿಲ್ಲ. ಇಲ್ಲಿಯೂ ಇದೇ ಆಗಿದ್ದು 70 ವರ್ಷದ ವೃದ್ದೆಗೆ ಎರಡೂ ಕಣ್ಣುಗಳಲ್ಲಿ ಪೊರೆ ಬೆಳೆದು ದೃಷ್ಟಿ ಹೋಗಿದೆ. ಆಕೆಗೆ ಕಣ್ಣಿನ ಚಿಕಿತ್ಸೆ ಮಾಡಿಸುತ್ತೇನೆಂದು ಕರೆದುಕೊಂಡು ಬಂದ ಆಕೆಯ ಸಹೋದರಿ ವಿಜಯಪುರ ನಗರದ ಇಬ್ರಾಹಿಂಪುರದಲ್ಲಿ ಬಿಟ್ಟು ಹೋಗಿದ್ದಾರೆ.
ಸಹೋದರಿಯೇ ಮೋಸ ಮಾಡಿದ್ದಕ್ಕೆ ಬೇಸರಗೊಂಡ ಅಜ್ಜಿ ಕಣ್ಣು ಕಾಣದೇ ರಸ್ತೆಯಲ್ಲಿ ಮುಂದೆ ಹೋಗಲು ವಿಫಲ ಪ್ರಯತ್ನ ಮಾಡಿದ್ಧಾರೆ. ಇದನ್ನು ಕಂಡ ನಗರದ ಜಲನಗರದ ನಿವಾಸಿ ರಮೇಶ ರತ್ನಾಪೂರ ಅಜ್ಜಿಯ ಸಮಸ್ಯೆ ಅರಿತು ಸಮೀಪವೇ ಇದ್ದ ಹೊಟೇಲಿಗೆ ಕರೆದುಕೊಂಡು ಹೋಗಿ ಉಪಾಹಾರ ಕೊಡಿಸಿದ್ದಾರೆ. ಅಲ್ಲಿ ಟೀ ಕುಡಿಯಲು ಬಂದಿದ್ದ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ ಪ್ರಭುಗೌಡ ಲಿಂಗದಹಳ್ಳಿ ಅಜ್ಜಿಯ ಸಮಸ್ಯೆಯನ್ನು ಆಲಿಸಿದ್ದಾರೆ. ಕೂಡಲೇ ಅಜ್ಜಿಯನ್ನು ತಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಂದು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ರೀತಿ ಸಹೋದರಿಯೇ ನಡುರಸ್ತೆಯಲ್ಲಿ ಬಿಟ್ಟು ಹೋಗಿ ಆಸ್ಪತ್ರೆಯ ಪಾಲಾದ ವೃದ್ದೆಯ ಹೆಸರು ಗೌರಮ್ಮ ಕುಂಬಾರ. ಇವರು ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದವರು. ಮದುವೆಯಾಗದೇ ತಮ್ಮ ಗ್ರಾಮದ ಮಠದಲ್ಲಿದ್ದುಕೊಂಡು ಜೀವನ ಮಾಡುತ್ತಿದ್ದ ಗೌರಮ್ಮಗೆ ಎರಡೂ ಕಣ್ಣಿನ ಪೊರೆ ಬೆಳೆದು ಕಣ್ಣುಗಳು ಕಾಣದಂತಾಗಿದ್ದವು.
Also Read: ಕಣ್ಣಿನ ದೃಷ್ಟಿಶಕ್ತಿ ವೃದ್ಧಿಸಿಕೊಳ್ಳಲು ಪ್ರತಿದಿನ ಈ ಪುಡಿಯನ್ನು ತಿನ್ನಿ.. ಕನ್ನಡಕ ಪಕ್ಕಕ್ಕೆ ಇಟ್ಟುಬಿಡಿ
ಗೌರಮ್ಮನಿಗೆ ಚಿಕಿತ್ಸೆ ಕೊಡಿಸೋದಾಗಿ ಅದೇ ಗ್ರಾಮದಲ್ಲಿದ್ದ ಆಕೆಯ ಸಹೋದರಿ ಪಾರವ್ವ ಎಂಬುವವರು ಗೌರಮ್ಮಳನ್ನು ವಿಜಯಪುರಕ್ಕೆ ಕರೆದುಕೊಂಡು ಬಂದು ಅಜ್ಜಿ ಬಳಿಯ ಹಣವನ್ನೂ ಪಡೆದುಕೊಂಡು ಏನೂ ಹೇಳದೇ ಕೇಳದೇ ಬಿಟ್ಟು ಹೋಗಿದ್ದಾಳೆಂದು ಸ್ವತಃ ಅಜ್ಜಿಯೇ ಹೇಳಿದ್ದಾರೆ. ತಮಗೆ ಉಚಿತ ಚಿಕಿತ್ಸೆ ನೀಡಿ ಊಟೋಪಚಾರ ಮಾಡಿದ ವೈದ್ಯರನ್ನು ಅಜ್ಜಿ ಈಗ ಕೃತಜ್ಞತೆಯಿಂದ ನೆನೆಯುತ್ತಾರೆ. ಜಗತ್ತೇ ಕತ್ತಲಾಗಿದ್ದ ಅಜ್ಜಿಗೆ ಕಣ್ಣು ಈಗ ಕಾಣಲಾರಂಭಿಸಿದೆ. ಕಣ್ಣು ಕಾಣುತ್ತಿರುವ ಹಿನ್ನೆಲೆಯಲ್ಲಿ ಅಜ್ಜಿ ಗೌರಮ್ಮ ಕುಂಬಾರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಎರಡ್ಮೂರು ದಿನಗಳ ಕಾಲ ಅಜ್ಜಿಗೆ ತಮ್ಮ ಆಸ್ಪತ್ರೆಯಲ್ಲಿಯೇ ಇಟ್ಟುಕೊಂಡು ಅಜ್ಜಿಯ ಶಸ್ತ್ರಚಿಕಿತ್ಸೆ ಮಾಡಿರೋ ಡಾ. ಪ್ರಭುಗೌಡ ಲಿಂಗದಳ್ಳಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೇತ್ರ ತಜ್ಞ ಡಾ ಪ್ರಭುಗೌಡ ಕಳೆದ 20 ವರ್ಷಳಿಂದ ವೈದ್ಯ ವೃತ್ತಿ ಮಾಡುತ್ತಿದ್ದು ಗ್ರಾಮೀಣ ಭಾಗದಲ್ಲಿ 40 ಸಾವಿರಕ್ಕೂ ಆಧಿಕ ಜನರಿಗೆ ಉಚಿತ್ ಚಿಕಿತ್ಸೆ ಮಾಡಿದ್ಧಾರೆ.
ಆದರೆ ಇದೀಗಾ ಮನೆಯವರಿಂದಲೇ ಪರಿತ್ಯಕ್ತವಾಗಿದ್ದ ವೃದ್ಧೆಗೆ ದೃಷ್ಟಿ ಭಾಗ್ಯ ಕೊಡುವುದರ ಜೊತೆಗೆ ಮಾನವೀಯತೆಯನ್ನೂ ಮೆರೆದಿದ್ದಾರೆ ಎನ್ನಬಹುದು. ಅಜ್ಜಿಗೆ ಉಚಿತ ಚಿಕಿತ್ಸೆ ನೀಡಿ, ಮರಳಿ ಅವರನ್ನು ಊರಿಗೆ ಮುಟ್ಟಿಸುವವರೆಗೆ ಎಲ್ಲ ವ್ಯವಸ್ಥೆಯನ್ನು ಡಾ. ಪ್ರಭುಗೌಡ ಲಿಂಗದಳ್ಳಿ ಮಾಡಿದ್ದಾರೆ. ಕಣ್ಣಿನ ದೃಷ್ಟಿ ಮರಳಿ ಪಡೆದಿರೋ ಗೌರಮ್ಮ ತಮ್ಮೂರಿಗೆ ವಾಪಸ್ ಹೋಗಿ ಮಠದಲ್ಲೇ ಉಳಿದುಕೊಳ್ಳುವ ಮಾತನ್ನಾಡಿದ್ದಾರೆ.
ಯಾವುದೇ ಕಾರಣಕ್ಕೂ ಸಹೊದರಿ ಮನೆಗೆ ಹಾಗೂ ಇತರೆ ಸಂಬಂಧಿಕರ ಮನೆಗೂ ಹೋಗಲ್ಲಾ ಎಂದು ಹೇಳಿದ್ದಾರೆ. ವೃದ್ದಾಪ್ಯವೇ ಅಜ್ಜಿಗೆ ಶಾಪವಾಗಿದ್ದು ಒಡಹುಟ್ಟಿದವಳೇ ಅಜ್ಜಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದು ಮಾತ್ರ ನಾಗರಿಕ ಸಮಾಜ ವಿಚಾರ ಮಾಡುವಂತಾಗಿದೆ. ಹಿಂದೆಮುಂದೆ ಇಲ್ಲದೇ ಅಲೆಯುತ್ತಿದ್ದ ಅಜ್ಜಿಗೆ ನಗರದ ವೈದ್ಯರ ಸಹಾಯ ಮರುಜೀವ ನೀಡಿದಂತಾಗಿದೆ.
ಕಣ್ಣು ಕಾಣದೇ ಮನೆಯವರೇ ದೂರ ಮಾಡಿದ್ದ ಅಜ್ಜಿ ತನಗೆ ಸಹಾಯ ಮಾಡಿದ ರಮೇಶ ರತ್ನಾಕರ ಹಾಗೂ ಕಣ್ಣಿನ ಚಿಕಿತ್ಸೆ ಮಾಡಿದ ಡಾ ಪ್ರಭುಗೌಡ ಲಿಂಗದಳ್ಳಿಗೆ ಶುಭ ಕೋರಿದ್ದಾರೆ. ಕಾಣದಾಗಿದ್ದ ಕಣ್ಣಿನ ದೃಷ್ಟಿ ಮತ್ತೆ ನೀಡಿದ್ದಕ್ಕೆ ಸಂತಸ ಪಟ್ಟಿದ್ದಾರೆ. ದೃಷ್ಟಿಯ ಮಹತ್ವ ಅರಿತ ಅಜ್ಜಿ ಗೌರಮ್ಮ ತಮ್ಮ ಮರಣಾನಂತರ ಎರಡೂ ಕಣ್ಣುಗಳನ್ನು ದಾನ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ. ಮನೆಯವರಿಗೆ ಬೇಡವಾಗಿದ್ದ ಅಜ್ಜಿ ಗೌರಮ್ಮ ವಿಚಾರದಲ್ಲಿ ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಂತೆ ಇದೀಗಾ ದೃಷ್ಟಿ ಭಾಗ್ಯ ಪಡೆದ ಅಜ್ಜಿ ತನ್ನೂರಿಗೆ ಹೋಗಿದ್ದಾಳೆ.