ವಿಜಯಪುರ ಜಿಲ್ಲೆಯಲ್ಲಿ ಕಾನೂನು ಬಾಹೀರವಾಗಿ ಮಕ್ಕಳ ಸಾಕಾಣಿಕೆ ದಂಧೆ? ಸ್ಟಾಪ್ ನರ್ಸ್ ವಿರುದ್ಧ ದೂರು ದಾಖಲು
ನಾಲ್ಕು ಮಕ್ಕಳ ರಕ್ಷಣೆ ಮಾಡಿದ ಪೊಲೀಸರು, ನಾಲ್ವರನ್ನು ಸಿದ್ದೇಶ್ವರ ದತ್ತು ಕೇಂದ್ರದಲ್ಲಿರಿಸಿದ್ದಾರೆ. ಇನ್ನೊಂದು 5 ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಟ್ಟಿದ್ದು, ಯಾರ ಬಳಿ ಮಗುವನ್ನು ಬಿಟ್ಟಿದ್ದಾಳೆ ಎಂದು ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದೆ.
ವಿಜಯಪುರ: ಕಾನೂನು ಬಾಹೀರವಾಗಿ ಜಿಲ್ಲೆಯಲ್ಲಿ ಅನೈತಿಕವಾಗಿ ವಿವಾಹ ಪೂರ್ವದಲ್ಲಿ ಜನನವಾದ ಮಕ್ಕಳ ಸಾಕಾಣಿಕೆ ದಂಧೆ ನಡೆದಿದೆಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಅನಧಿಕೃತವಾಗಿ ಮಕ್ಕಳ ಸಾಕಾಣಿಕೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೈವಾಡ ಕೂಡ ಇದೆ ಎನ್ನಲಾಗುತ್ತಿದೆ. ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿರೋ ಜಯಮಾಲಾ ಬಿಜಾಪುರ ಅನಧಿಕೃತವಾಗಿ ಮಕ್ಕಳನ್ನು ಸಾಕಿರೋ ಮಹಿಳೆ. ನಗರದ ಅಥಣಿ ಗಲ್ಲಿಯ ನಿವಾಸಿಯಾಗಿರೋ ಜಯಮಾಲಾ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಘಟನೆ ಕುರಿತು ಜಯಮಾಲಾ ವಿರುದ್ದ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಜಯಮಾಲಾ ಬಿಜಾಪುರ ವಶಕ್ಕೆ ಪಡೆದ ಮಹಿಳಾ ಪೊಲೀಸ್ ಠಾಣೆಯ ಆಧಿಕಾರಿಗಳು, ವಿಚಾರಣೆ ವೇಳೆ ಐದು ಮಕ್ಕಳನ್ನು ಸಾಕಿದ್ದ ಮಾಹಿತಿ ಬಹಿರಂಗವಾಗಿದೆ. ಮನೆಯಲ್ಲಿ ಹಾಗೂ ಇತರರ ಬಳಿ ಒಟ್ಟು ಐದು ಮಕ್ಕಳನ್ನು ಅನಧಿಕೃತವಾಗಿ ಸಾಕಿದ್ದಾಳೆ. 5 ವರ್ಷದ ಗಂಡು ಮಗು, 3 ವರ್ಷದ ಹೆಣ್ಣು ಮಗುವನ್ನು ಜಯಮಾಲಾ ತನ್ನ ಮನೆಯಲ್ಲೇ ಸಾಕಿದ್ದು, 3 ವರ್ಷದ ಹೆಣ್ಣು ಮಗುವನ್ನು ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಬಳಿ ಇಟ್ಟಿದ್ದಾಳೆ. ಮಗುವಿಲ ಪಾಲನೆಗಾಗಿ ಪ್ರತಿ ತಿಂಗಳು 3 ಸಾವಿರ ರೂಪಾಯಿ ಜಯಮಾಲಾ ಶಾಂತಮ್ಮಗೆ ನೀಡುತ್ತಿದ್ದಳು. 11 ತಿಂಗಳ ಇನ್ನೊಂದು ಮಗುವನ್ನು ಚಂದ್ರಮ್ಮಾ ಮಾದರ ಎಂಬುವವರ ಬಳಿ ಸಾಕಲು ಬಿಟ್ಟಿದ್ದು, ಈ ಮಗುವಿನ ಪಾಲನೆಗೆ ಚಂದ್ರಮ್ಮಗೆ ಹಣ ನೀಡುತ್ತಿರಲಿಲ್ಲಾ.
ನಾಲ್ಕು ಮಕ್ಕಳ ರಕ್ಷಣೆ ಮಾಡಿದ ಪೊಲೀಸರು, ನಾಲ್ವರನ್ನು ಸಿದ್ದೇಶ್ವರ ದತ್ತು ಕೇಂದ್ರದಲ್ಲಿರಿಸಿದ್ದಾರೆ. ಇನ್ನೊಂದು 5 ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಟ್ಟಿದ್ದು, ಯಾರ ಬಳಿ ಮಗುವನ್ನು ಬಿಟ್ಟಿದ್ದಾಳೆ ಎಂದು ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರೋ ಮಗು ರಕ್ಷಣೆಗೆ ಪೊಲೀಸರ ತಂಡ ತೆರಳಿದೆ. ಅನಧಿಕೃತವಾಗಿ ಮಕ್ಕಳ ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಳಾ ಎಂಬ ಸಂಶಯ ಮೂಡಿದ್ದು, ಪೊಲೀಸರ ತನಿಖೆಯಿಂದ ಮತ್ತಷ್ಟು ರಹಸ್ಯಗಳು ಬಹಿರಂಗವಾಗುವ ಸಾಧ್ಯತೆಯಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದೆ. ಪೂರ್ಣ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬಿಳಲಿದೆ.
ರಾಜ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.