AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಖಾನೆಯ ವಿಷಪೂರಿತ ಹೊಗೆಯಿಂದ ಗ್ರಾಮಸ್ಥರಿಗೆ ಸಮಸ್ಯೆ; ಫ್ಯಾಕ್ಟರಿ ಮುಚ್ಚಿಲ್ಲವೆಂದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ

ಎಲ್ಲೆಡೆ ಲೋಕಸಭಾ ಚುನಾವಣೆ ಅಬ್ಬರ ಜೋರಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಮತಯಾಚನೆ, ಸಭೆ-ಸಮಾರಂಭ ಎಂದೆಲ್ಲರೂ ಬ್ಯುಸಿಯಾಗಿದ್ದಾರೆ. ಶತಾಯ ಗತಾಯವಾದರೂ ಗೆಲ್ಲಬೇಕೆಂದು ಪಣ ತೊಟ್ಟು ಕಾಲಿಗೆ ಗಾಲಿ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇದೇ ವೇಳೆ ಯಾವುದೇ ಪಕ್ಷದ ಅಭ್ಯರ್ಥಿ ಮುಖಂಡರು ನಮ್ಮೂರಿಗೆ ಬರಬೇಡಿ, ನಾವು ನಿಮ್ಮನ್ನು ನಮ್ಮೂರಿಗೆ ಬಿಡಲ್ಲ. ನಾವು ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಹಾಕಿದ್ದೇವೆಂದು ವಿಜಯಪುರ ಜಿಲ್ಲೆಯ ಲಂಬಾಣಿ ತಂಡಾವೊಂದರ ನಿವಾಸಿಗಳು ನಿರ್ಧಾರ ಮಾಡಿದ್ದಾರೆ.

ಕಾರ್ಖಾನೆಯ ವಿಷಪೂರಿತ ಹೊಗೆಯಿಂದ ಗ್ರಾಮಸ್ಥರಿಗೆ ಸಮಸ್ಯೆ; ಫ್ಯಾಕ್ಟರಿ ಮುಚ್ಚಿಲ್ಲವೆಂದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ
ಫ್ಯಾಕ್ಟರಿ ಮುಚ್ಚಿಲ್ಲವೆಂದ್ರೆ ಮತದಾನ ಬಹಿಷ್ಕಾರ ಎಂದ ಮದಭಾವಿ ತಾಂಡಾ ಜನರು
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Apr 17, 2024 | 7:19 PM

Share

ವಿಜಯಪುರ, ಏ.17: ತಾಲೂಕಿನ ಮದಭಾವಿ ತಾಂಡಾ 1 ರ ಜನರು ಮುಂಬರುವ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ(Election boycott) ಹಾಕಿದ್ದಾರೆ. ಸುಮಾರು 5 ಸಾವಿರಕ್ಕೂ ಆಧಿಕ ಜನಸಂಖ್ಯೆಯನ್ನು ಹೊಂದಿರೋ ತಂಡಾದಲ್ಲಿ, 3 ಸಾವಿರ ಮತದಾರರಿದ್ದಾರೆ. ಆದರೆ, 2024 ರ ಲೋಕಸಭಾ ಚುನಾವಣೆಗೆ ಮದಭಾವಿ(Madabhavi) ತಾಂಡಾದವರು ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೌದು, ಕಳೆದ 6 ವರ್ಷಗಳ ಹಿಂದೆ ಮದಭಾವಿ ತಾಂಡಾ 1 ರ ಅನತಿ ದೂರದಲ್ಲಿ ಮುಂಬೈ ಮೂಲದ ಹೆಸರಿರುವ ಉದ್ಯಮಿ, ಟೈರ್ ನಾಶ ಮಾಡಿ ಇತರೆ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಾರ್ಖಾನೆಯಿಂದ ವಿಪರೀತ ಕೆಟ್ಟ ವಾಸನೆಯ ಜೊತೆಗೆ ಹೊಗೆ ಹೊರಬರುತ್ತಿದೆ.

ಕಾರ್ಖಾನೆ ಬಂದ್ ಮಾಡಿಲ್ಲವೆಂದರೆ ಮತದಾನ ಬಹಿಷ್ಕಾರದ ಎಚ್ಚರಿಕೆ

ಇದರಿಂದ ಮದಭಾವಿ ತಾಂಡಾ 1 ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಿಷಕಾರಿ ಹೊಗೆಯ ಕಾರಣ ಜನರು ಪಾರ್ಶುವಾಯು, ಶ್ವಾಸಕೋಶದ ತೊಂದರೆ, ಹೃದಯ ಸ್ತಂಭನ, ಮಹಿಳೆಯರಲ್ಲಿ ಗರ್ಭಪಾತ ಸೇರಿದಂತೆ ಇತರೆ ರೋಗಗಳಿಂದ ಬಾಧಿತರಾಗಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ದರು ಅನೇಕ ರೋಗಗಳಿಂದ ಬಳಲುವಂತಾಗಿದೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಬಂದ್ ಮಾಡಬೇಕೆಂದು ಕೆಲ ವರ್ಷಗಳಿಂದ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಆರೋಗ್ಯಕ್ಕೆ ಮಾರಕವಾಗಿರುವ ಕಾರ್ಖಾನೆ ಬಂದ್ ಮಾಡಿಸಿಲ್ಲ. ಹಾಗಾಗಿ ಕಾರ್ಖಾನೆ ಬಂದ್ ಮಾಡೋವರೆಗೂ ನಾವು ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಹಾಕುತ್ತೇವೆಂದು ಇಡೀ ತಂಡಾದ ಜನರು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ:ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ಅನಾರೋಗ್ಯಕ್ಕೆ ಕಾರಣವಾಗಿರುವ ಟೈರ್ ನಾಶ ಮಾಡುವ ಕಾರ್ಖಾನೆ ಮೇಲೆ ಜಿಲ್ಲಾಡಳಿತ, ಕೈಗಾರಿಕಾ ಇಲಾಖೆ ಆಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರೋದಕ್ಕೆ ಜನರು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕಾರ್ಖಾನೆಯಿಂದ ನಮ್ಮ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯ ಅಷ್ಟೇಯಲ್ಲ, ಕೃಷಿಕರ ಬೆಳಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ವಿಷಪೂರಿತ ಹೊಗೆಯಿಂದ ಹಾಳಾಗಿವೆ. ಈ ಕುರಿತು ಆಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನೆವೇ ಇಲ್ಲವಾಗಿದೆ ಎಂದು ಇಲ್ಲಿಯ ಜನರು ಆಕ್ರೋಶವನ್ನು ಹೊರ ಹಾಕಿದ್ಧಾರೆ.

ಹತ್ತಾರು ಸಮಸ್ಯೆಗೆ ಕಾರಣವಾಗಿರುವ ಈ ಫ್ಯಾಕ್ಟರಿ ಮುಚ್ಚಿದ್ರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮೂರ ಒಳಗೆ ಯಾವ ಪಕ್ಷದ ಅಭ್ಯರ್ಥಿ, ಮುಖಂಡರನ್ನು ಅಧಿಕಾರಿಯನ್ನು ಬಿಡುವುದಿಲ್ಲ ಎಂದು ತಾಂಡಾದ ಜನರು ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಹಾಕುವ ನಿರ್ಧಾರ ಮಾಡಿದ್ದಾರೆ. ವಿಷಕಾರಿ ಹೊಗೆ-ಧೂಳಿನಿಂದ ಜನರ ಪ್ರಾಣಕ್ಕೆ ಕುತ್ತಾಗಿರುವ ಟೈರ್ ನಾಶ ಮಾಡುವ ಹಾಗೂ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆಯ ವಿರುದ್ದ ಈಗಲಾದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರಾ ಕಾದುನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Wed, 17 April 24