ಪ್ರತಿ ವರ್ಷದಂತೆ ಈ ವರ್ಷವೂ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ಬಳಿಕ ನಡೆಯೋ ಬಬಲಾದಿಯ ಶ್ರೀ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ದೇವರಿಗೆ ವಿವಿಧ ಭಕ್ಷ್ಯ ಭೋಜನಗಳ ನೈವೇದ್ಯವಷ್ಟೇ ಅಲ್ಲ ಮದ್ಯದ ನೈವೇದ್ಯವೂ (Liquor) ನಡೆಯುತ್ತದೆ. ಹಲವಾರು ತಲೆ ತಲೆಮಾರುಗಳಿಂದ ನಡೆದುಕೊಂಡು ಬಂದಿರೋ ಚಂದ್ರಗಿರಿ ಸದಾಶಿವ ಮಠ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಇಂದು ಬುಧವಾರ ಇದೇ ಚಂದ್ರಗಿರಿ ಸದಾಶಿವ ಮಠದಲ್ಲಿ ಕಾಲಜ್ಞಾನ ಭವಿಷ್ಯ ನುಡಿಯಲಾಗುತ್ತದೆ. ಈ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲಾ ಎಂಬ ಪ್ರತೀತಿ ಇದೆ. ನಿನ್ನೆ ಮಂಗಳವಾರ ನಡೆದ ಜಾತ್ರೆಯ ಕುರಿತಾದ ವರದಿ ಇಲ್ಲಿದೆ ನೋಡಿ. ಬಬಲಾದಿಯ ಚಂದ್ರಗಿರಿ ಸದಾಶಿವ ಮಠದಲ್ಲಿ ದೇವರಿಗೆ ಮದ್ಯ ನೈವೇದ್ಯ… ಕಾಲಾನು ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇಲ್ಲಿನ ದೇವರಿಗೆ ಮದ್ಯವನ್ನು ಅರ್ಪಿಸಿ, ಅದನ್ನೇ ಪ್ರಸಾದ ರೂಪದಲ್ಲಿ ಸ್ವೀಕರಿಸೋ ಭಕ್ತರು. ಇಷ್ಟರ ಜೊತೆಗೆ ವಿವಿಧ ಭಕ್ಷ್ಯ ಭೋಜನಗಳ ನೈವೇದ್ಯವೂ ಇಲ್ಲಿಂಟು. ವಿಜಯಪುರ (Vijayapura) ಜಿಲ್ಲೆ ಬಬಲೇಶ್ವರ (Babaleshwar) ತಾಲೂಕಿನ ಬಬಲಾದಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿರೋ ಗ್ರಾಮ. ಬಬಲಾದಿಯ ಗ್ರಾಮದಲ್ಲಿ ನೂರಾರು ವರ್ಷಗಳ ಐತಿಹ್ಯವಿರೋ ಚಂದ್ರಗಿರಿ ಸದಾಶಿವ ಮುತ್ಯಾರ ಮಠವಿದೆ. ಸದಾಶಿವ ಮುತ್ಯಾ (Muttyna Babalad) ಎಂಬ ಮಹಾಪುರುಷ ನಿರ್ಮಾಣ ಮಾಡಿರೋ ಮಠದಲ್ಲಿ ಪ್ರತಿವರ್ಷ ಶಿವರಾತ್ರಿ ಬಳಿಕ ಜಾತ್ರೆಯನ್ನು ಮಾಡಲಾಗುತ್ತದೆ.
ಕಳೆದ 700 ವರ್ಷಗಳಿಗೂ ಆಧಿಕ ವರ್ಷಗಳಿಂದ ಜಾತ್ರೆಯನ್ನು ಚಾಚೂ ತಪ್ಪದೇ ಆಚರಣೆ ಮಾಡಿಕೊಂಡು ಬರಲಾಗಿದೆ. ಶ್ರೀ ಸದಾಶಿವ ಮುತ್ಯಾರ ಹೆಸರಿನಲ್ಲಿ ನಡೆಯೋ ಜಾತ್ರೆಯ ಆಚರಣೆಯೇ ವಿಶಿಷ್ಟವಾಗಿದೆ. ಶಿವರಾತ್ರಿ ಬಳಿಕ ಆರಂಭವಾಗೋ ಜಾತ್ರೆಗೆ ಮಠದ ಆವರಣದಲ್ಲಿರೋ ದೇವರ ಮೂರ್ತಿಗಳಿಗೆ ಮದ್ಯವನ್ನು ತರ್ಪಣ ಮಾಡುವ ಮೂಲಕ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಚಂದ್ರಗಿರಿ ದೇವಿಯಿಂದ ವರ ಪಡೆದುಕೊಂಡಿದ್ದ ಶ್ರೀ ಸದಾಶಿವ ಮುತ್ಯಾರ ಜಾತ್ರೆಗೆ ಮದ್ಯವೇ ನೈವೇದ್ಯವಾಗಿದೆ.
ಇದನ್ನು ಬೆಂಕಿ ಬಬಲಾದಿ ಅಥವಾ ಬೆಂಕಿ ಮಠ ಎಂದು ಕರೆಯಲಾಗುತ್ತದೆ. ಮಠದಲ್ಲಿ ಅಸತ್ಯ ಮಾತು ನಡೆಯಲ್ಲ. ಇಂಥಹ ಮಹಾನ್ ಮಠದ ಪೀಠಾಧೀಪತಿಯಾಗಿದ್ದ ಸದಾಶಿವರು ಸಿದ್ದಿ ಸಾಧನೆಗಾಗಿ ಮದ್ಯ ಸೇವಿಸುತ್ತಿದ್ದರಂತೆ. ಇದೀಗಾ ಅದೇ ಐತಿಹ್ಯದೊಂದಿಗೆ ಮದ್ಯವೇ ಇಲ್ಲಿ ನೈವೇದ್ಯವಾಗಿದೆ. ಮದ್ಯವನ್ನು ನೈವೇದ್ಯವನ್ನಾಗಿ ಮಾಡುವುದನ್ನು ಕುಹಕ ಮಾಡಬಾರದು ಹಾಗೆ ಮಾಡಿದರೆ ಅಂಥವರಿಗೆ ಕೆಟ್ಟದಾಗುತ್ತದೆ ಎಂದು ನಂಬಿಕೆಯೂ ಇದೆ. ಜಾತ್ರೆಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಮದ್ಯ ನೈವೇದ್ಯ ಮಾಡಿ ಭಕ್ತಿಯನ್ನು ಮೆರೆದರು. ಬಹುತೇಕರು ನೈವೇದ್ಯದ ಬಳಿಕ ಪ್ರಸಾದದ ರೂಪದಲ್ಲಿ ಮದ್ಯವನ್ನು ಸ್ವೀಕರಿಸಿದರು
ಇನ್ನು ಕೇವಲ ಮದ್ಯವನ್ನಷ್ಟೇ ಅಲ್ಲಾ ವಿವಿಧ ಪ್ರಕಾರದ ಭಕ್ಷ್ಯ ಭೋಜನಗಳನ್ನು ಸಹ ಮಾಡಿ ನೈವೇದ್ಯ ಮಾಡುವ ಪದ್ದತಿಯೂ ಇದೆ. ಭಕ್ತರು ಹೋಳಿಗೆ, ಕಡಬು, ಪಾಯಿಸ ಸೇರಿದಂತೆ ಅನೇಕ ಖಾದ್ಯಗಳನ್ನು ನೈವೇದ್ಯ ಮಾಡುತ್ತಾರೆ. ಮಠದ ಆವರಣದಲ್ಲಿ ಸದಾಶಿವ ಮುತ್ಯಾರ ಭಾವಚಿತ್ರ ಇಡಲಾಗಿದ್ದು ಅಪಾರ ಪ್ರಮಾಣದ ಭಕ್ತರು ಅಲ್ಲಿ ಈ ತರಹದ ನೈವೇದ್ಯ ಅರ್ಪಿಸುತ್ತಾರೆ. ಜಾತ್ರೆಗೆ ವಿಜಯಪುರ ಜಿಲ್ಲೆಯ ಭಕ್ತರಷ್ಟೇ ಅಲ್ಲ ಉತ್ತರ ಕರ್ನಾಟಕ ಇತರ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ಯಾದಗಿರಿ, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳ ಹಾಗೂ ನೆರೆಯ ಗೋವಾ ಮಹಾರಾಷ್ಟ್ರ ತೆಲಂಗಾಣ ಆಂಧ್ರ ಪ್ರದೇಶ ರಾಜ್ಯಗಳ ಭಕ್ತರೂ ಸಹ ಆಗಮಿಸಿ ಸದಾಶಿವನ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ಎರಡು ದಿನಗಳ ಮುಂಚೆಯೇ ಆಗಮಿಸಿ ಮಠದ ಆವರಣದಲ್ಲಿ ಬಿಡಾರ ಹೂಡಿ ಸಂಭ್ರಮಿಸುತ್ತಾರೆ. ಇನ್ನು ಜಾತ್ರೆಯ ಮತ್ತೊಂದು ವಿಶೇಷತೆ ಎಂದರೆ ಕಾಲಜ್ಞಾನ ಭವಿಷ್ಯ ನುಡಿಯುವುದು. ಸಕಲ ವಿಧಿವಿಧಾನಗಳ ಆಚರಣೆ ಸಹಿತ ಸದಾಶಿವ ಅಜ್ಜನವರು 700 ಕ್ಕೂ ಆಧಿಕ ವರ್ಷಗಳ ಹಿಂದೆ ಬರೆದಿಟ್ಟಿರೋ ಕಾಲಜ್ಞಾನ ಭವಿಷ್ಯವನ್ನು ಆಯಾ ವರ್ಷದಂತೆ ಪ್ರತಿ ವರ್ಷ ನುಡಿಯಲಾಗುತ್ತದೆ. ಕಳೆದ ಬಾರಿ ಸೇರಿದಂತೆ ಈ ಹಿಂದೆ ಪ್ರತಿವರ್ಷ ನುಡಿದ ಕಾಲಜ್ಞಾನ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ. ಇಂದು ಬುಧವಾರ ಮಧ್ಯಾಹ್ನದ ವೇಳೆಗೆ ಕಾಲಜ್ಞಾನ ಭವಿಷ್ಯ ನುಡಿಯುವುದು ಸಹ ನಡೆಯುತ್ತದೆ. ದೂರದೂರುಗಳಿಂದ ಆಗಮಿಸೋ ಭಕ್ತರಿಗೆ ಸದಾಶಿವ ಮುತ್ಯಾ ಬೇಡಿದ ವರ ಕೊಡುವ ದೇವರು ಎಂಬ ನಂಬಿಕೆಯಿದೆ. ನಮ್ಮ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುತ್ತಾರೆ. ನಾವು ಹಲವಾರು ವರ್ಷಗಳಿಂದ ಜಾತ್ರೆಗೆ ಆಗಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಯಾರಿಗೂ ಮದ್ಯ ಸೇವನೆ ಮಾಡಬೇಕೆಂಬ ಒತ್ತಾಯವಿಲ್ಲ. ಕಾರಣ ಭಕ್ತರೂ ಸಹ ಮದ್ಯವನ್ನು ನೈವೇದ್ಯ ಮಾಡುವ ನೆಪದಲ್ಲಿ ಹೆಚ್ಚಾಗಿ ಮದ್ಯ ಸೇವಿಸಬಾರದು ಎಂದು ಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೊಳಿಮಠ ಹೇಳಿದ್ದಾರೆ. ಜೊತೆಗೆ ಮಠದ ಜಾತ್ರೆಗೆ ಎಲ್ಲಾ ಧರ್ಮೀಯರೂ ಆಗಮಿಸಿ ಭಕ್ತಿ ಮೆರೆಯುತ್ತಾರೆ. ಇದನ್ನು ಜ್ಯಾತ್ಯಾತೀತ ಜಾತ್ರೆಯೆಂದು ಕರೆಯಲಾಗುತ್ತದೆ. ಇಷ್ಟರ ಮಧ್ಯೆ ಇಲ್ಲಿ ಜಾತ್ರೆಯ ಅಂಗವಾಗಿ ಮಾರಾಟವಾಗೋ ವಿವಿಧ ನಮೂನೆಯ ಮದ್ಯ ಅಬಕಾರಿ ಇಲಾಖೆಯ ಸುಪರ್ದಿಯಲ್ಲೇ ಮಾರಾಟವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಜಾತ್ರೆಯ ಸಂಭ್ರಮ ಮುಂದುವರೆದಿದೆ
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ