Love Dhokha: ಪ್ರೀತಿ ಪ್ರೇಮ ಎಂದು ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಯುವಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ
ದೂರು ನೀಡಿದರೂ ಆರೋಪಿ ಸಚಿನ್ ನನ್ನು ಬಂಧಿಸಿಲ್ಲ. ಸದ್ಯ ಭಟ್ಕಳದ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿರೋ ಸಚಿನ್ ನನ್ನು ಯಾವ ಒತ್ತಡದಿಂದ ಬಂಧಿಸಿಲ್ಲವೋ ಗೊತ್ತಿಲ್ಲ. ಆತನ ಸಹೋದರ ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ಹೆಡ್ ಕಾನ್ಸಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾನೆ- ನೊಂದ ಯುವತಿ ಸಂಗೀತಾ
ಪ್ರೀತಿ ಹೆಸರಿನಲ್ಲಿ ಆಸೆಗಳನ್ನು ತೀರಿಸಿಕೊಂಡು ಯುವತಿಯರಿಗೆ ಮೋಸ ಮಾಡುವ (Love Dhokha) ಘಟನೆಗಳು ಹೆಚ್ಚಿವೆ. ನೀನೆ ನನ್ನ ಜೀವಾ ನೀನೇ ನನ್ನ ಜೀವ, ನನ್ನ ಪ್ರಾಣ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿರೋ ಯುವಕ ತನ್ನದೇ ಸಮುದಾಯದ ಯುವತಿಗೆ (Woman) ಮೋಸ ಮಾಡಿದ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ. ಆತನನ್ನೇ ನಂಬಿದ ಯುವತಿ ಸರ್ವಸ್ವವನ್ನೂ ಆತನಿಗೆ ನೀಡಿ ಮೋಸ ಹೋಗಿದ್ಧಾಳೆ. ಮೋಸವಾಗಿದ್ದರ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿ 25 ದಿನಗಳು ಕಳೆದರೂ ಪೊಲೀಸರು ಮಾತ್ರ ಇನ್ನೂ ಆತನನ್ನು ಬಂಧಿಸಿಲ್ಲ. ನ್ಯಾಯಕ್ಕಾಗಿ ಯುವತಿ ಹಾಗೂ ಮನೆಯವರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ಧಾರೆ. ಲವ್ ದೋಖಾ ಕುರಿತಾದ ವರದಿ ಇಲ್ಲಿದೆ ನೋಡಿ.
ಆ ಯುವಕ ಅಗ್ನಿಶಾಮಕ ದಳದಲ್ಲಿ ಫೈರ್ ಮ್ಯಾನ್ ಎಂದು ಸೇವೆ ಸಲ್ಲಿಸುತ್ತಿದ್ದಾನೆ. ಆಕೆ ಪದವಿ ಶಿಕ್ಷಣ ಮುಗಿಸಿರುವ ಯುವತಿ. ಅಕ್ಕನ ಮನೆಗೆ ಹೋದಾಗ ಪರಿಚಯವಾದ ಫೈರ್ ಮ್ಯಾನ್ ಜೊತೆಗೆ ಸ್ನೇಹವಾಗಿದೆ. ಅದೇ ಸ್ನೇಹ ಪ್ರೀತಿ ಪ್ರೇಮದಿಂದ ದೈಹಿಕ ಸಂಪರ್ಕಕ್ಕೂ ತಿರುಗಿದೆ. ತನ್ನನ್ನೇ ಮದುವೆಯಾಗುತ್ತಾನೆಂದು ನಂಬಿ ದೇಹ ಹಂಚಿಕೊಂಡಿದ್ದ ಆಕೆಗೆ ಆತ ಕೈಕೊಟ್ಟಿದ್ದಾನೆ.
ಇದೀಗ ಯುವತಿ ತನ್ನ ಕುಟುಂಬದವರೊಂದಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ಧಾಳೆ. ಹೀಗೆ ತನ್ನ ಕುಟುಂಬದವರ ಜೊತೆಗೆ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿರೋ ಈ ಯುವತಿಯ ಹೆಸರು ಸಂಗೀತಾ ಪವಾರ. ಪ್ರೀತಿ ಪ್ರೇಮದ ಹೆಸರಿನಲ್ಲಿ ನಮಗೆ ಮೋಸವಾಗಿದೆ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿರೋ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿರೋ ಸಚಿನ್ ರಾಠೋಡ್ ಎಂಬ ಯುವಕ ನನಗೆ ಮೋಸ ಮಾಡಿದ್ದಾನೆ. ಮದುವೆಯಾಗೋ ನೆಪದಲ್ಲಿ ಹಲವಾರು ಬಾರಿ ದೈಹಿಕ ಸಂಪರ್ಕ ಮಾಡಿ ಇದೀಗಾ ಬೇರೆ ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನನಗಾದ ಮೋಸದ ಕುರಿತು ದೇವರಹಿಪ್ಪರಗಿ (Devarhippargi) ಠಾಣೆಯಲ್ಲಿ ದೂರು ನೀಡಿದರೂ ಆರೋಪಿ ಸಚಿನ್ ನನ್ನು ಬಂಧಿಸಿಲ್ಲ ಎಂದು ಸಂಗೀತಾ ಜಿಲ್ಲಾಧಿಕಾರಿಗಳ ಕಚೇರಿಗೆ ನ್ಯಾಯಕ್ಕಾಗಿ ಬಂದಿದ್ದಾಳೆ.
ಬಿಸಿಎ ಪದವೀಧರೆಯಾಗಿರುವ ಸಂಗೀತಾ ಮೂಲತಃ ದೇವರಹಿಪ್ಪರಗಿ ತಾಂಡಾದ ವಾಸಿ. ತಂದೆ ಇಲ್ಲದ ಸಂಗೀತಾ ತಾಯಿಯೊಂದಿಗೆ ವಾಸವಿದ್ದಾಳೆ. ಕಳೆದ 2017 ರಲ್ಲಿ ಸಂಗೀತಾ ದೇವರಹಿಪ್ಪರಗಿ ತಾಲೂಕಿನ ಹಿಟ್ಟನಹಳ್ಳಿ ತಾಂಡಾದಲ್ಲಿರೋ ತನ್ನ ಸಹೋದರಿ ಮನೆಗೆ ಹೋಗಿದ್ದಾಗ ಅಲ್ಲಿ ಪರಿಚಯವಾಗಿದ್ದವನೇ ಸಚಿನ್ ರಾಠೋಡ್ ಎಂಬಾತ ಪರಿಚಯವಾಗಿದ್ದ. ನನ್ನ ಜೊತೆಗೆ ಸ್ನೇಹ ಬೆಳಸಿದ್ದ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನನ್ನ ನಂಬರ್ ಪಡೆದುಕೊಂಡಿದ್ದ.
ನಾನೂ ಆತನನ್ನು ನಂಬಿ ಪ್ರೀತಿ ಮಾಡಿದೆ. ಎಲ್ಲ ಪ್ರೇಮಿಗಳಂತೆ ಹೊಟೇಲ್, ಪಾರ್ಕ್ ಎಂದೆಲ್ಲಾ ಸುತ್ತಾಡಿದೆವು. ನಿತ್ಯ ಗಂಟೆಗಟ್ಟಲೆ ಪೋನಿನಲ್ಲಿ ಮಾತನಾಡುತ್ತಿದ್ದೆವು. ವಿಡಿಯೋ ಕಾಲ್ ನಲ್ಲಿಯೂ ಮಾತನಾಡುತ್ತಿದ್ದೆವು. ನನ್ನ ಮದುವೆಯಾಗೋದಾಗಿ ನಂಬಿಸಿ, ನನ್ನ ಜೊತೆಗೆ ಹಲವಾರು ಬಾರಿ ದೈಹಿಕ ಸಂಪರ್ಕವನ್ನು ಮಾಡಿದ್ದ. ಮದುವೆಯಾಗುತ್ತಾನಲ್ಲಾ ಎಂದು ನಾನು ಆತ ಹೇಳಿದಂತೆ ಕೇಳಿದೆ. ಮದುವೆ ಯಾವಾಗ ಮಾಡಿಕೊಳ್ಳೋಣವೆಂದು ಕೇಳಿದಾಗ ನನಗೆ ಪ್ರೊಮೋಷನ್ ಆದ ಬಳಿಕ ಎಂದು ಹೇಳುತ್ತಾ ದಿನಗಳೆದ.
ಇದೀಗಾ ಮತ್ತೊಬ್ಬ ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ತಾಂಡಾ ಹಿರಿಯರು ರಾಜೀ ಪಂಚಾಯತಿ ಮಾಡಿದರೂ ನನ್ನನ್ನು ಮದುವೆ ಆಗೋಲ್ಲ ಎಂದಿದ್ದಾನೆ. ನ್ಯಾಯಕ್ಕಾಗಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ದೂರು ನೀಡಿ 25 ದಿನಗಳಾದರೂ ಸಚಿನ್ ನನ್ನು ಬಂಧಿಸಿಲ್ಲ. ಕಾರಣ ನ್ಯಾಯಕ್ಕಾಗಿ ಇಂದು ಡಿಸಿ ಕಚೇರಿಗೆ ಬಂದಿದ್ದೇನೆ. ನ್ಯಾಯ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಪ್ರೀತಿ ಹೆಸರಿನಲ್ಲಿ ಮೋಸ ಹೋಗಿರೋ ಸಂಗೀತಾ ಹೇಳಿದ್ದಾಳೆ.
ಯಾವಾಗಾ ಸಂಗೀತಾ ಪವಾರ ಎಂಬ ಯುವತಿಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಮಾಡಿ ಕೈಕೊಟ್ಟ ವಿಚಾರ ಮನೆಯವರಿಗೆ ಗೊತ್ತಾಯಿತೋ ಆಗ ಯುವತಿಯ ತಾಯಿ ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ತಾಂಡಾದ ಮುಖಂಡರನ್ನು ಕರೆಯಿಸಿ ಮಗಳಿಗಾದ ಅನ್ಯಾಯವನ್ನು ಹೇಳಿದ್ದಾರೆ. ತಾಂಡಾದ ಮುಖಂಡರು ಸಂಗೀತಾ ಪವಾರ ಹಾಗೂ ಸಚಿನ್ ರಾಠೋಡ್ ಪ್ರೇಮ ಕಹಾನಿ ಹಾಗೂ ದೋಖಾ ಕುರಿತು ನ್ಯಾಯ ಪಂಚಾಯತಿ ಮಾಡಿದ್ದಾರೆ.
ತಾಂಡಾದ ಮುಖಂಡರು ಸಂಗೀತಾಳನ್ನು ಸಚಿನ್ ಮದುವೆಯಾಗಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಅದರೆ ಅದಕ್ಕೆ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿರೋ ಸಚಿನ್ ರಾಠೋಡ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಆತನ ಸಹೋದರ ಕಿಶನ್ ಮದುವೆ ಮಾಡಿಕೊಳ್ಳಲ್ಲಾ ಎಂದು ಹೇಳಿದ್ದಾರೆ. ಬದಲಾಗಿ ಒಂದಿಷ್ಟು ಹಣವನ್ನು ನೀಡುತ್ತೇವೆ, ಇದನ್ನು ಇಲ್ಲಿಗೇ ಬಿಟ್ಟುಬಿಡಿ ಎಂದಿದ್ದಾರೆ.
ಜೊತೆಗೆ, ಸಚಿನ್ ನನಗೆ ಬೇರೆ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿದೆ. ನೀನು ನನಗೆ ಇಷ್ಟವಿಲ್ಲ. ಇಷ್ಟು ದಿನ ಟೈಂಪಾಸ್ ಮಾಡಿದ್ದೇನೆ. ಹಣ ಕೊಡುತ್ತೇನೆಂದು ಹೇಳಿದ್ದಾನಂತೆ. ಹಣಕ್ಕಾಗಿ ಪ್ರೀತಿ ಪ್ರೇಮ ಮಾಡಿಲ್ಲ. ಮದುವೆಯಾತ್ತಾನೆಂಬ ನಂಬಿಕೆಯಿಂದ ಪ್ರೀತಿಸಿದ್ದ ನಮ್ಮ ಯುವತಿಗೆ ಅನ್ಯಾಯವಾಗಿದೆ. ನ್ಯಾಯ ನೀಡುವ ಪೊಲೀಸರು ಸಹ ನ್ಯಾಯ ನೀಡುತ್ತಿಲ್ಲ.
ನಾವು ದೂರು ನೀಡಿ ತಿಂಗಳಾಗುತ್ತಾ ಬಂದರೂ ಆರೋಪಿ ಸಚಿನ್ ನನ್ನು ಬಂಧಿಸಿಲ್ಲಾ. ಸದ್ಯ ಭಟ್ಕಳದ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿರೋ ಸಚಿನ್ ನನ್ನು ಯಾವ ಒತ್ತಡದಿಂದ ಬಂಧಿಸಿಲ್ಲವೋ ಗೊತ್ತಿಲ್ಲ. ಆತನ ಸಹೋದರ ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ಹೆಡ್ ಕಾನ್ಸಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನನೂ ಸಹ ಸಚೀನ್ ಬಂಧನವಾಗದಂತೆ ನೋಡಿಕೊಳ್ಳುತ್ತಿದ್ದಾನೆ. ಆದ ಕಾರಣ ನಾವು ಜಿಲ್ಲಾಧಿಕಾರಿಗಳ ಬಳಿ ಮನೆ ಮಂದಿಯೆಲ್ಲಾ ಬಂದು ನ್ಯಾಯ ಬೇಡುತ್ತಿದ್ದೇವೆ. ಸಂಗೀತಾಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯ ಮಾಡಿದ್ದಾರೆ.
ಒಟ್ಟಾರೆ ಪ್ರೀತಿ ಪ್ರೇಮವೆಂದು ನಂಬಿದ ಸಂಗೀತಾ ಸಚಿನ್ ನಿಂದ ಮೋಸ ಹೋಗಿದ್ದಾಳೆ. ಅಗ್ನಿಶಾಮದ ದಳದಲ್ಲಿ ಸೇವೆ ಸಲ್ಲಿಸುತ್ತಿರೋ ಆತನ ಮೇಲೆ ದೂರು ದಾಖಲಾಗಿದ್ದರೂ ದೇವರಹಿಪ್ಪರಗಿ ಪೊಲೀಸ್ ಠಾಣೆಯ ಆಧಿಕಾರಿಗಳು ಹಾಗೂ ಸಿಬ್ಬಂದಿ ಸಚಿನ್ ನನ್ನು ಬಂಧಿಸದೇ ಇರೋದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ನ್ಯಾಯ ನೀಡಬೇಕಾದವರೇ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ನ್ಯಾಯಕ್ಕಾಗಿ ಸಂಗೀತಾ ಹಾಗೂ ಕುಟುಂಬದವರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಈಗಲಾದರೂ ಇವರಿಗೆ ನ್ಯಾಯ ಸಿಗಬೇಕಿದೆ.
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ
Published On - 11:45 am, Wed, 8 February 23