ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗಿಲ್ಲ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯ! ನಡೆಯುತ್ತಿದೆ ವ್ಯವಸ್ಥಿತ ಸಂಚು
ಗಡಿನಾಡ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಸೂಕ್ತ ಅನುದಾನ, ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಅಷ್ಟೇ ಅಲ್ಲದೆ, ಶಿಕ್ಷಕರ ನೇಮಕವೂ ಮಾಡುವುದಿಲ್ಲ. ಇಲ್ಲಿ ಕನ್ನಡ ಶಾಲೆಗಳನ್ನೇ ಮುಚ್ಚುವ ಪ್ರಯತ್ನಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ವಿಜಯಪುರ, ಜುಲೈ 30: ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ (Maharashtra) ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ (Kannada Schools) ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಅನುದಾನ ನೀಡದೆ, ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳದೆ ನಿರಂತರವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಯತ್ನ ನಡೆಸುತ್ತಿದೆ. ಮಹಾರಾಷ್ಟ್ರ ಸರ್ಕಾರದ ಈ ಧೋರಣೆಯಿಂದ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ, ಜಲ, ಭಾಷೆಯ ವಿಚಾರಗಳು ಮಹಾಜನ್ ಆಯೋಗದ ವರದಿ ರಚನೆಗೆ ಬುನಾದಿ ಹಾಕಿತ್ತು. ಮಹಾರಾಷ್ಟ್ರದವರ ಒತ್ತಾಯದ ಮೇರೆಗೆ 1966 ಅಕ್ಟೋಬರ್ 15 ರಂದು ಅಂದಿನ ಕೇಂದ್ರ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ನೇತೃತ್ವದ ಆಯೋಗ ರಚನೆ ಮಾಡಿತ್ತು.
ಬಳಿಕ ಮಹಾಜನ್ ವರದಿ ಸಲ್ಲಿಕೆಯಾದರೂ ಇಂದಿಗೂ ಅನುಷ್ಟಾನವಾಗಿಲ್ಲ. ಅದಕ್ಕೂ ತೊಡಕಾಗಿದ್ದು ಅದೇ ಮಹಾರಾಷ್ಟ್ರ ಸರ್ಕಾರ. ಈ ನಡುವೆ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಜನರನ್ನು ಮಲತಾಯಿ ಧೋರಣೆಯಿಂದ ನೋಡಿ, ಅಲ್ಲಿ ಬೆಳೆದು ಬಂದಿರುವ ಕನ್ನಡವನ್ನೇ ಅಳಿಸಿ ಹಾಕಲು ಹೊರಟಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಮುಂದಾಗುತ್ತಿದೆ.
ಮಹಾಜನ್ ವರದಿಗೆ ಆಗ್ರಹಿಸಿ ಜಾರಿ ಮಾಡಿ ಅದೇ ವರದಿಯನ್ನು ಜಾರಿ ಮಾಡಲು ಕೊಂಕು ಹಾಕುತ್ತಿರುವ ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಕನ್ನಡಿಗರನ್ನು ಮತಯಾಯಿ ಧೋರಣೆಯಿಂದಲೇ ನೋಡಿಕೊಂಡು ಅಲ್ಲಿ ಯಾವುದೇ ಅಭಿವೃದ್ದಿ ಮಾಡದೇ ಮೂಲ ಸೌಕರ್ಯ ನೀಡದದೇ ಗಡಿನಾಡ ಕನ್ನಡಿಗರನ್ನು ನಿಕೃಷ್ಟವಾಗಿ ನಡೆಸಿಕೊಂಡು ಬಂದಿದೆ. ಇಷ್ಟೆಲ್ಲ ಸಮಸ್ಯೆಗಳ ಜೊತೆಗೆ ವ್ಯವಸ್ಥಿತವಾಗಿ ಅಲ್ಲಿ ಸ್ವಾತಂತ್ರ್ಯ ಪೂರ್ವದಿಂದ ನಡೆದುಕೊಂಡು ಬಂದಿರುವ ಕನ್ನಡ ಮಾದ್ಯಮ ಶಾಲೆಗಳನ್ನು ಮುಚ್ಚಲು ಸಂಚನ್ನೇ ನಿರೂಪಿಸಿಕೊಂಡು ಬಂದಿದೆ.
ಇದನ್ನೂ ಓದಿ: ದೂಧ್ಗಂಗಾ ನದಿ ನೀರು ಸರಬರಾಜಿಗೆ ವಿರೋಧ; ಕರ್ನಾಟಕಕ್ಕೆ ಸೇರಿಕೊಳ್ಳಲು ಇಚ್ಛಿಸಿದ ಮಹಾರಾಷ್ಟ್ರದ ಮತ್ತಷ್ಟು ಗ್ರಾಮಗಳು
ಮಹಾರಾಷ್ಟ್ರದ ಸಾಂಗ್ಲಿ, ದಕ್ಷಿಣ ಸೊಲ್ಲಾಪುರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಕನ್ನಡ ಶಾಲೆಗಳಿವೆ. ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಜತ್ ತಾಲೂಕಿನಲ್ಲಿ ಇರುವ 132 ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಲ್ಲಿ 8,000 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು 37 ಇದ್ದು, 5000 ವಿದ್ಯಾರ್ಥಿಗಳಿದ್ದಾರೆ.
ಸಾಂಗ್ಲಿ ಜಿಲ್ಲೆಯ ಮಿರಜ ತಾಲೂಕಿನಲ್ಲಿ 3 ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಿದ್ದು, 1200 ವಿದ್ಯಾರ್ಥಿಗಳಿದ್ದಾರೆ. ಎರಡು ಖಾಸಗಿ ಕನ್ನಡ ಮಾದ್ಯಮ ಶಾಲೆಗಳಲ್ಲಿ 60 ವಿದ್ಯಾರ್ಥಿಗಳಿದ್ದಾರೆ. ಇನ್ನು, ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ 37 ಇದ್ದು, 6800 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು 30 ಇದ್ದು, 4500 ವಿದ್ಯಾರ್ಥಿಗಳು ಅಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.
ದಕ್ಷಿಣ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಸೊಲ್ಲಾಪುರ ತಾಲೂಕಿನಲ್ಲಿ 11 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿದ್ದು, 500 ವಿದ್ಯಾರ್ಥಿಗಳಿದ್ದಾರೆ. 6 ಖಾಸಗಿ ಕನ್ನಡ ಮಾದ್ಯಮ ಶಾಲೆಗಳಿದ್ದು 1500 ವಿದ್ಯಾರ್ಥಿಗಳಿದ್ದಾರೆ. ಸೊಲ್ಲಾಪುರ ನಗರದಲ್ಲಿ ಮೂರು ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಲ್ಲಿ 200 ವಿದ್ಯಾರ್ಥಿಗಳಿದ್ದಾರೆ. ಎಂಟು ಖಾಸಗಿ ಕನ್ನಡ ಮಾದ್ಯಮ ಶಾಲೆಗಳಲ್ಲಿ 1500 ವಿದ್ಯಾರ್ಥಿಗಳು ವ್ಯಾಸಾಂಗ ನಡೆಸುತ್ತಿದ್ದಾರೆ. ಐದು ಕನ್ನಡ ಮಾದ್ಯಮ ಪ್ರೌಢ ಶಾಲೆಗಳಿದ್ದು 900 ವಿದ್ಯಾರ್ಥಿಗಳು ಇದ್ದಾರೆ.
ಆದರೆ, ಗಡಿನಾಡಿದ ಈ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಸೂಕ್ತ ಅನುದಾನ, ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಮಾತ್ರವಲ್ಲದೆ, ಶಿಕ್ಷಕರ ನೇಮಕವೂ ಮಾಡುತ್ತಿಲ್ಲ. ಇಲ್ಲಿ ಕನ್ನಡವನ್ನೇ ಮುಗಿಸಿ ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆದಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕನ್ನಡದ ಉಳಿವಿಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಹಾಗೂ ಗಡಿನಾಡ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಗಡಿನಾಡ ಪ್ರಾಧಿಕಾರದಿಂದ ಅಲ್ಪ ಪ್ರಮಾಣದ ಸಹಾಯವನ್ನೂ ಮಾಡಲಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರದ ಗಡಿನಾಡ ಪ್ರಾಧಿಕಾರದಿಂದ ನೀಡುವ ಅಲ್ಪ ಅನುದಾನದಿಂದ ಕನ್ನಡ ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲ. ಗಡಿನಾಡ ಕನ್ನಡಿಗರಿಗೆ ಇತರೆ ಸಹಾಯ ಮಾಡಲು ಸಹ ಸಾಗುತ್ತಿಲ್ಲ. ಇಂತವೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದ್ದ ಮಹಾಜನ್ ವರದಿ ಜಾರಿಯಾಗದೇ ಈ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.
ಹಿಂದೆ ಮಹಾರಾಷ್ಟ್ರದ ಒತ್ತಾಯದಂತೆ ಕೇಂದ್ರ ಸರ್ಕಾರ 1966 ಅಕ್ಟೋಬರ್ 15 ರಂದು ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ನೇತೃತ್ವದ ಆಯೋಗ ರಚನೆ ಮಾಡಿತ್ತು. ಮಹಾಜನ್ ಆಯೋಗ ಕರ್ನಾಟಕ ಕೇರಳ ಮಹಾರಾಷ್ಟ್ರ ಗಡಿ ಭಾಗದ ಸಮಸ್ಯೆಯ ಕುರಿತು 1967 ರ ಅಗಷ್ಟ 25 ರಂದು ವರದಿ ಸಲ್ಲಿಸಿತ್ತು. ಆದರೆ ಮಹಾಜನ್ ಆಯೋಗದ ವರದಿ ಇನ್ನೂ ಜಾರಿಗೆ ಬಂದಿಲ್ಲ.
ಹೀಗಾಗಿ ಗಡಿನಾಡಿನಲ್ಲಿ ಕನ್ನಡ ಮಾದ್ಯಮ ಶಾಲೆಗಳನ್ನು ನಡೆಸಲು ಕನ್ನಡಿಗರು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಗಡಿನಾಡ ಕನ್ನಡ ಶಾಲೆಗಳ ಉಳಿಸಲು ಕರ್ನಾಟಕ ಸರ್ಕಾರ ಅನುದಾನ ಹೆಚ್ಚಳ ಮಾಡುವುದರ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಸಹಜವಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಮಹಾರಾಷ್ಟ್ರದ ಸರ್ಕಾರಿ ನೌಕರಿ ನೀಡುತ್ತಿಲ್ಲ. ಗಡಿನಾಡ ಕನ್ನಡಿಗರಿಗೆ ಶೇಕಡಾ ಐದರಷ್ಟಾದರೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಮಹಾರಾಷ್ಟ್ರದ ಗಡಿ ಭಾಗದ ಕನ್ನಡಿಗರು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಕನ್ನಡ ಶಾಲೆಗಳನ್ನು ಮುಚ್ಚಿ ಹಾಕುವ ಯತ್ನದ ಬದಲಾಗಿ ಮಹಾರಾಷ್ಟ್ರ ಸರ್ಕಾರ ಅವುಗಳ ಉಳಿವಿಗೆ ಸಹಾಯ ಮಾಡುವ ಮೂಲಕ ಸಹೋದರತೆಯನ್ನು ಬಿಂಬಿಸಬೇಕಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯ ಹಾಗೂ ಶಿಕ್ಷಕರ ನೇಮಕಾತಿ ಮಾಡಬೇಕು. ಉದ್ಯೋಗದಲ್ಲಿಯೂ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ನೀಡಬೇಕು. ಇಲ್ಲವಾದರೆ ಗಡಿಭಾಗದ ಜನರು ನಾವು ಕರ್ನಾಟಕಕ್ಕೆ ಸೇರುತ್ತೇವೆಂದು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ನಿಲುವು ಮತ್ತಷ್ಟು ಗಟ್ಟಿಯಾಗಿ ಹೋರಾಟದ ರೂಪ ಪಡೆದುಕೊಳ್ಳುತ್ತದೆ ಎಂದು ಗಡಿನಾಡ ಕನ್ನಡಿಗರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ