ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಭಾರೀ ಯಡವಟ್ಟು; ಬಾಣಂತಿಯ ರಕ್ತದ ಗುಂಪಿನ ಬದಲಾಗಿ ಬೇರೆ ಗುಂಪಿನ ರಕ್ತ ಹಾಕಿದ ನರ್ಸಿಂಗ್ ಆಫೀಸರ್ಸ್
ಆ ದಂಪತಿಗೆ ಮದುವೆಯಾಗಿ ಐದು ವರ್ಷವಾಗಿದೆ. ಮೊದಲ ಹೆರಿಗೆಯಲ್ಲಿ ಗಂಡು ಮಗುವಾಗಿತ್ತು. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಅದರಂತೆ ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾಯಿತು. ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳು ಜನಿಸಿದ್ದರು. ಕುಟುಂಬದಲ್ಲಿ ಎಲ್ಲರಿಗೂ ಸಂತಸವಾಗಿತ್ತು. ಆದರೆ, ಹೆರಿಗೆಯಾದ ಬಳಿಕ ಬಾಣಂತಿ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಳು. ಈ ಹಿನ್ನಲೆ ರಕ್ತ ಹಾಕುವಾಗ ಬಾಣಂತಿಯ ರಕ್ತದ ಗುಂಪಿನ ಬದಲಾಗಿ ಬೇರೆ ಗುಂಪಿನ ರಕ್ತ ಹಾಕಿದ್ದಾರೆ.
ವಿಜಯಪುರ, ಮಾ.14: ಕಳೆದ ಫೆಬ್ರವರಿ 23 ರಂದು ಎರಡನೇ ಹೆರಿಗೆಗಾಗಿ ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದ ಶಾರದಾ ದೊಡಮನಿ ಎಂಬ ಗರ್ಭಿಣಿ, ವಿಜಯಪುರ ಜಿಲ್ಲಾಸ್ಪತ್ರೆ(Vijayapur District Hospital)ಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಶಾರದಾ ಅವರಿಗೆ ಹೆರಿಗೆ ಮಾಡಿಸಲಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳ ಜನನವಾಗಿತ್ತು. ಹೆರಿಗೆ ಬಳಿಕ ಶಾರದಾಳಿಗೆ ತೀವ್ರ ರಕ್ತಸ್ರಾವವಾದ ಹಿನ್ನಲೆ ಆಕೆಗೆ ರಕ್ತ ಹಾಕಲು ವೈದ್ಯರು ಮುಂದಾಗಿದ್ದಾರೆ. ಎ ಪಾಸಿಟಿವ್ ಗುಂಪಿನ ರಕ್ತ ಹೊಂದಿರೋ ಶಾರದಾಳಿಗೆ ಎ ಪಾಸಿಟವ್ ಬದಲಾಗಿ ಬಿ ಪಾಸಿಟಿವ್ ರಕ್ತ ಹಾಕಿಬಿಟ್ಟಿದ್ದಾರೆ.
ಇದರಿಂದ ಶಾರದಾಳ ಆರೋಗ್ಯ ಸ್ಥಿತಿ ಮತ್ತಷ್ಟು ಸಮಸ್ಯೆಗೀಡಾಗಿದೆ. ಆಗ ಶಾರದಾ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಿಎಲ್ಡಿಇ ಸಂಸ್ಥೆಯ ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶಾರದಾ ಪೋಷಕರಿಗೆ ಹಾಗೂ ಪತಿಯ ಮನೆಯವರಿಗೆ ಜಿಲ್ಲಾಸ್ಪತ್ರೆಯಲ್ಲಿ ಬದಲಿ ರಕ್ತ ಹಾಕಿರುವ ವಿಚಾವೇ ಗೊತ್ತಿಲ್ಲ. ಹೆರಿಗೆ ಬಳಿಕ ರಕ್ತಸ್ರಾವ ಆಗಿದೆ. ಅದಕ್ಕಾಗಿ ಇಲ್ಲಿ ದಾಖಲು ಮಾಡಿದ್ದಾರೆಂದು ಹೇಳಿದ್ದಾರಂತೆ. ಗ್ರಾಮೀಣ ಭಾಗದ ಜನರಾದ ಅವರಿಗೆ ಬದಲಿ ರಕ್ತ ಹಾಕಿದ್ದರ ಕುರಿತು ಮಾಹಿತಿಯನ್ನು ಜಿಲ್ಲಾಸ್ಪತ್ರೆಯವರು ನೀಡಿಲ್ಲ. ತಮ್ಮ ಮಗಳು ಗುಣಮುಖವಾಗಲಿ ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ:ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಲ್ಲ ಕುಡಿಯುವ ನೀರು: ಹಣ ಕೊಟ್ಟು ನೀರು ಖರೀದಿಸುತ್ತಿರುವ ರೋಗಿಗಳು
ಅಂಗಾಂಗಗಳ ಮೇಲೆ ತೀವ್ರ ಪರಿಣಾಮ
ಹೆರಿಗೆಗೆ ಬಂದಿದ್ದ ಶಾರದಾ ದೊಡ್ಡಮನಿಗೆ ರಕ್ತದ ಗುಂಪು ಬದಲಾದ ಪರಿಣಾಮ, ಶಾರದಾಳ ದೇಹದಲ್ಲಿರುವ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ರಕ್ತದೊತ್ತಡ, ಹೃದಯ ಬಡಿತ ಹಾಗೂ ಕಿಡ್ನಿಯಲ್ಲಿ ಸಮಸ್ಯೆಯಾಗಿತ್ತು. ಆಕೆಯನ್ನು ಬಿಎಲ್ಡಿಇ ಆಸ್ಪತ್ರೆಯಲ್ಲಿ ಕಳೆದ ಫೆಬ್ರವರಿ 23 ರಿಂದಲೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾರದಾಳ ಆರೋಗ್ಯದ ಕುರಿತು ಬಿಎಲ್ಡಿಇ ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್ ನ ಮೆಡಿಲ್ ಸೂಪರಿಟೆಂಡೆಂಟ್ ಡಾ ರಾಜೇಶ ಹೊನ್ನುಟಗಿ ಮಾಹಿತಿ ನೀಡಿದ್ದಾರೆ. ಫೆಬ್ರವರಿ 23 ರಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಾರದಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ರಕ್ತದೊತ್ತಡ, ಹೃದಯ ಬಡಿತ ಸಹಜ ಸ್ಥಿತಿಗೆ ಬಂದಿವೆ. ಕಿಡ್ನಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಿಡ್ನಿ ಸಹಜ ಸ್ಥಿತಿಗೆ ಬರುವಂತೆ ಚಿಕಿತ್ಸೆ ಮಾಡಲಾಗುತ್ತಿದೆ. ಆದಷ್ಟು ಬೇಗಾ ಶಾರದಾ ಗುಣಮುಖಳಾಗುತ್ತಾಳೆ ಎಂಬ ವಿಶ್ವಾಸವಿದೆ ಎಂದು ಎಎಲ್ಡಿಇ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಾಣಂತಿ ಮಹಿಳೆ ನರಳಾಟ
ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ಸಿಬ್ಬಂದಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಅವಳಿ ಮಕ್ಕಳು ತಾಯಿ ಮಡಿಲಿನಿಂದ ದೂರವಾಗಿದ್ದು. ಪುಟ್ಟ ಪುಟ್ಟ ಅವಳಿ ಮಕ್ಕಳಿಗೆ ತಾಯಿ ಎದೆ ಹಾಲು ಸಿಗದಂತಾಗಿದೆ. ಬದಲಿ ಗುಂಪಿನ ರಕ್ತ ಹಾಕಿದ್ದನ್ನು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿತ್ಸಕ ಡಾ ಶಿವಾನಂದ ಮಾಸ್ತಿಹೊಳಿ ಗಂಭೀರವಾಗಿ ಪರಿಗಣಿಸಿದ್ದಾರೆ. ಇಡೀ ಘಟನೆಯ ಕುರಿತು ಸತ್ಯಾಸತ್ಯತೆ ಅರಿಯಲು ಕಮೀಟಿ ಮಾಡಿ ತನಿಖೆ ಮಾಡಿದ್ದಾರೆ. ತನಿಖಾ ವರದಿಯಲ್ಲಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಲ್ಯಾಬ್ ಟೆಕ್ನಿಷಿಯನ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಆಪೀಸರ್ಸ್ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದಿದೆ.
ಶಾರದಾಳಿಗೆ ಹಾಕಬೇಕಿದ್ದ ಎ ಪಾಸಿಟಿವ್ ಬ್ಲಡ್ ಬದಲಾಗಿ ಪಕ್ಕದ ಮತ್ತೋರ್ವ ಮಹಿಳೆಗೆ ಹಾಕಲು ಇಟ್ಟಿದ್ದ ಬಿ ಪಾಸಿಟಿವ್ ರಕ್ತವನ್ನು ನಿರ್ಲಕ್ಷ್ಯದಿಂದ ಹಾಕಿದ್ದಾರೆ. ಈ ಕಾರಣ ಲ್ಯಾಬ್ ಟೆಕ್ನಿಷಿಯನ್ ಈರಪ್ಪ ಜಂಬಗಿ, ನರ್ಸಿಂಗ್ ಆಫೀಸರ್ಸ್ ಆಗಿರೋ ಸುರೇಖಾ, ಲಕ್ಷ್ಮೀ ಹಾಗೂ ಸವಿತಾ ಎಂಬುವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಶಾರದಾ ದೊಡಮನಿ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಸ್ಪತ್ರೆಯಿಂದ ಭರಿಸಲಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ಡಿಎಸ್ ಡಾ ಶಿವಾನಂದ ಮಾಸ್ತಿಹೊಳಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ