ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಲ್ಲ ಕುಡಿಯುವ ನೀರು: ಹಣ ಕೊಟ್ಟು ನೀರು ಖರೀದಿಸುತ್ತಿರುವ ರೋಗಿಗಳು
ರಾಜ್ಯದಲ್ಲೆಡೆ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿರುವುದು ದಿನಬೆಳಗಾದರೆ ಸುದ್ದಿಯಾಗುತ್ತಿದೆ. ಈ ಮಧ್ಯೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ದಿನನಿತ್ಯ ನೂರಾರು ರೂಪಾಯಿ ಖರ್ಚು ಮಾಡಿ ರೋಗಿಗಳೇ ಕುಡಿಯಲು ನೀರು ತರಬೇಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಹೇಳುವುದೇನು? ರೋಗಿಗಳ ಅಳಲು ಏನು? ಇಲ್ಲಿದೆ ನೋಡಿ.
ಕೊಪ್ಪಳ, ಮಾರ್ಚ್ 6: ಬಡ ಜನರು ಸರ್ಕಾರಿ ಆಸ್ಪತ್ರೆಗೆ ಬರುವುದು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂಬ ಉದ್ದೇಶದಿಂದ. ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬರುವುದು ಬಡವರು ಮತ್ತು ಮಧ್ಯಮ ವರ್ಗದವರು. ಕೊಪ್ಪಳ ಜಿಲ್ಲೆ ಆಸ್ಪತ್ರೆಗೆ (Koppal District Hospital) ಬಂದರೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೇಯೇನೋ ಸಿಗುತ್ತಿದೆ. ಆದರೆ ಕುಡಿಯುವ ನೀರಿಗಾಗಿಯೇ (Drinking Water) ಪ್ರತಿನಿತ್ಯ ನೂರಾರು ರೂಪಾಯಿ ಖರ್ಚು ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಬಿಸಿಲುನಾಡು ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಕುಟುಂಬದವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ನೀರಿಗಾಗಿ ರೋಗಿಗಳ ಪರದಾಟ
ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ಜಿಲ್ಲೆಯಲ್ಲಿಯೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಲ್ಲಿ ಚಿಕಿತ್ಸೆ ಕೂಡಾ ತಕ್ಕಮಟ್ಟಿಗೆ ಸರಿಯಾಗಿ ಸಿಗೋದರಿಂದ ಹೆಚ್ಚಿನ ರೋಗಿಗಳು ಕೂಡಾ ಇಲ್ಲಿಗೆ ಬರ್ತಾರೆ. ಆದ್ರೆ ಇಲ್ಲಿಗೆ ಬರೋ ರೋಗಿಗಳು ಮತ್ತು ಕುಟುಂಬದವರು ಇದೀಗ ಕುಡಿಯೋ ನೀರಿಗಾಗಿ ಪರದಾಡುವಂತಾಗಿದೆ. ಕೊಪ್ಪಳದಲ್ಲಿ ಈಗಾಗಲೇ ಬಿಸಿಲಿನ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ತಿನ್ನಲು ಆಹಾರವಿಲ್ಲದೇ ಇದ್ದರು ಚಿಂತೆಯಿಲ್ಲ, ಕುಡಿಯಲು ನೀರು ಮಾತ್ರ ಬೇಕೇ ಬೇಕು. ಆದರೆ, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಸರಿಯಾಗಿ ಕುಡಿಯುವ ನೀರು ಸಿಗುತ್ತಾ ಇಲ್ಲ. ಇಡೀ ಆಸ್ಪತ್ರೆ ಅಡ್ಡಾಡಿದರೂ ಕೂಡಾ ಬಹುತೇಕ ಕಡೆ ಇರೋ ನೀರಿನ ಘಟಕಗಳಲ್ಲಿ ನೀರು ಸಿಗುತ್ತಾ ಇಲ್ಲ. ಹೀಗಾಗಿ ಅನಿವಾರ್ಯವಾಗಿ ರೋಗಿಗಳ ಕುಟುಂಬದವರು, ಹೊರಗಡೆ ನೂರಾರು ರೂಪಾಯಿ ಖರ್ಚು ಮಾಡಿ, ವಾಟರ್ ಬಾಟಲ್ಗಳನ್ನು ತಂದು ರೋಗಿಗಳಿಗೆ ಕೊಡುತ್ತಿದ್ದಾರೆ.
ನೀರಿಗಾಗಿ ಪ್ರತಿನಿತ್ಯ ನೂರಾರು ರೂಪಾಯಿ ಖರ್ಚು
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿಯೇ ಅನೇಕ ಕಡೆ ವಾಟರ್ ಫಿಲ್ಟರ್ಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರು ಪೂರೈಕೆಗಾಗಿಯೇ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಆದ್ರೆ ಒಮ್ಮೆ ಬಂದ್ರೆ ವಾರ ನೀರು ಬರೋದಿಲ್ಲ ಅಂತಿದ್ದಾರೆ ರೋಗಿಗಳ ಸಂಬಂಧಿಗಳು. ಬೇಸಿಗೆ ಬಿಸಿಲು ಹೆಚ್ಚಾಗಿದೆ. ಈ ಸಮಯದಲ್ಲಿ ನೀರು ಇಲ್ಲದೇ ಇದ್ರೆ ರೋಗವಾಸಿಯಾಗೋ ಬದಲು ಮತ್ತೆ ಬೇರೆ ಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಪ್ರತಿನಿತ್ಯ ನೂರಾರು ರೂಪಾಯಿ ಖರ್ಚು ಮಾಡಿ, ಹೊರಗಡೆ ಅಂಗಡಿಯಲ್ಲಿ ವಾಟರ್ ಬಾಟಲ್ ಖರೀದಿಸುತ್ತಿದ್ದೇವೆ ಅಂತಿದ್ದಾರೆ ರೋಗಿಯ ಸಂಬಂಧಿ ರೇಣುಕಮ್ಮ.
ಇನ್ನು ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಆಸ್ಪತ್ರೆಯ ಸಿಬ್ಬಂಧಿಯ ಗಮನಕ್ಕೆ ತಂದ್ರು ಕೂಡಾ ಡೋಂಟ್ ಕೇರ್ ಅಂತಿದ್ದಾರಂತೆ. ಹೀಗಾಗಿ ಮುಂಜಾನೆಯಿಂದ ಹಿಡಿದು ರಾತ್ರಿವರಗೆ ರೋಗಿಗಳ ಸಂಬಂಧಿಗಳು ನೀರಿಗಾಗಿ ಪರದಾಡುವದು, ಎಲ್ಲಿಯೂ ಸಿಗದೇ ಇದ್ದಾಗ ಹಣ ಕೊಟ್ಟು ವಾಟರ್ ಬಾಟಲ್ಗಳನ್ನು ಖರೀದಿಸಿಕೊಂಡು ಹೋಗುವದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಹೌಸಿಂಗ್ ಸೊಸೈಟಿಯಲ್ಲಿ ನೀರು ದುರ್ಬಳಕೆ ತಡೆಯಲು ಭದ್ರತಾ ಸಿಬ್ಬಂದಿ, 5000 ರೂ. ದಂಡ!
ಕೊಪ್ಪಳ ಜಿಲ್ಲಾ ಆಸ್ಪತ್ರೆ ಕೊಪ್ಪಳ ಮೆಡಿಕಲ್ ಕಾಲೇಜು ಅಧೀನದಲ್ಲಿದೆ. ಹೀಗಾಗಿ ಈ ಬಗ್ಗೆ ಮೆಡಿಕಲ್ ಕಾಲೇಜು ನಿರ್ದೇಶಕರ, ಡಾ ವಿಜಯನಾಥ್ ಇಟಗಿ ಅವರನ್ನು ಕೇಳಿದರೆ ಯಾವುದೇ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ನನ್ನ ಗಮನಕ್ಕೆ ಕೂಡಾ ಬಂದಿಲ್ಲ ಅಂತಿದ್ದಾರೆ. ಆದರೆ ಜನರು ಪ್ರತಿನಿತ್ಯ ಕುಡಿಯೋ ನೀರಿಗಾಗಿ ಪರದಾಡುತ್ತಿರುವದು ಮಾತ್ರ ಆಸ್ಪತ್ರೆಯ ಸಿಬ್ಬಂದಿಗೆ ಕಾಣದೇ ಇರೋದು ದುರ್ದೈವದ ಸಂಗತಿಯಾಗಿದೆ. ಇನ್ನಾದರೂ ಸಮಸ್ಯೆ ಬಗೆಹರಿಸುವ ಕೆಲಸವನ್ನು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ