
ವಿಜಯಪುರ, ಅಕ್ಟೋಬರ್ 07: ಒಂದೆಡೆ ಬರ ತಾಂಡವ ಆಡುತ್ತಿದೆ. ಇನ್ನೊಂದೆಡೆ ಕಷ್ಟಪಟ್ಟು ಬೆಳೆದ ಬೆಳೆಗೆ ನಿರೀಕ್ಷಿಸಿ ಬೆಲೆ ಸಿಗುತ್ತಿಲ್ಲ. ಹೀಗಿರುವಾಗ ಇದೀಗ ರೈತರಿಗೆ ವಂಚನೆ ಆಘಾತ ಎದುರಾಗಿದೆ. ಕೋಲ್ಡ್ ಸ್ಟೋರೇಜ್‌ನಲ್ಲಿ ಕಡಿಮೆ ಬಾಡಿಗೆ ಹಾಗೂ ಹೆಚ್ಚಿನ ಬೆಲೆಯ ಆಮಿಷವೊಡ್ಡಿ ಲಕ್ಷಾಂತರ ರೂ ಮೌಲ್ಯದ ಒಣದ್ರಾಕ್ಷಿ ಪಡೆದುಕೊಂಡ ಖದೀಮ, ಇನ್ನೊಬ್ಬರಿಗೆ ಮಾರಾಟ ಮಾಡಿ ಪರಾರಿ ಆಗಿರುವ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅತ್ತ ಹಣವೂ ಇಲ್ಲ, ಒಣದ್ರಾಕ್ಷಿಯೂ ಇಲ್ಲದೆ ರೈತ ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ನಡುವೆ ಕಷ್ಟಪಟ್ಟು ದ್ರಾಕ್ಷಿ ಬೆಳೆದ ರೈತರಿಗೆ ಇದೀಗ ವಂಚಿಸಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಉತ್ತಮ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಒಣದ್ರಾಕ್ಷಿಯನ್ನು ರೈತರಿಗೆ ತಿಳಿಯದಂತೆ ಮಾರಾಟ ಮಾಡಿ, ಹಣ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಕೊಲ್ಹಾರ ತಾಲೂಕಿನ ಮುಳವಾಡದಲ್ಲಿರುವ ಭೂಮಿಕಾ ಕೋಲ್ಡ್ ಸ್ಟೋರೇಜ್ ಮಾಲೀಕ ನಾತು ರಾಠೋಡ್ ಎಂಬುವವರು ನಮಗೆ ಮೋಸ ಮಾಡಿದ್ದಾರೆಂದು ಮನಗೂಳಿ ಭಾಗದ ರೈತರಾದ ಸುರೇಶ್ ಗೆಜ್ಜಿ, ಅಶೋಕ್ ರಾಠೋಡ್ ಹಾಗೂ ವಿಠ್ಠಲ್ ರಾಠೋಡ್ ಆರೋಪಿಸಿದ್ದಾರೆ.
ರೈತರು ಲಕ್ಷಾಂತರ ರೂ ಸಾಲ ಮಾಡಿಕೊಂಡು, ಕೆಲವರು ಮನೆ ಅಡವಿಟ್ಟು ಪಾಲುದಾರಿಕೆಯಲ್ಲಿ ದ್ರಾಕ್ಷಿ ಬೆಳೆದಿದ್ದರು. ಬಳಿಕ ಒಣದ್ರಾಕ್ಷಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಹಿನ್ನೆಲೆ ಸುರಕ್ಷಿತವಾಗಿ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ಹುಡುಕುತ್ತಿದ್ದರು. ಈ ವೇಳೆ ರೈತರನ್ನು ಸಂಪರ್ಕಿಸಿದ್ದ ನಾತು ರಾಠೋಡ್, ತಮ್ಮ ಕೋಲ್ಡ್ ಸ್ಟೋರೇಜ್‌ನಲ್ಲಿ ಕಡಿಮೆ ಬಾಡಿಗೆಗೆ ಒಣದ್ರಾಕ್ಷಿ ಸಂಗ್ರಹಿಸಬಹುದು ಹಾಗೂ ಉತ್ತಮ ಬೆಲೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಇದನ್ನು ನಂಬಿದ ರೈತರು ಒಟ್ಟು 970 ಬಾಕ್ಸ್ ಒಣದ್ರಾಕ್ಷಿಯನ್ನು ಭೂಮಿಕಾ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿದ್ದರು. ಆದರೆ ರೈತರಿಗೆ ಯಾವುದೇ ಮಾಹಿತಿ ನೀಡದೆ, ಪ್ರತಿ ಕೆಜಿಗೆ 530 ರೂ ಅಂತೆ ಒಣದ್ರಾಕ್ಷಿಯನ್ನು 29 ಲಕ್ಷ ರೂ. ಗಳಿಗೆ ಬೇರೆಯವರಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಈರುಳ್ಳಿ ‘ಖಾರ’ಕ್ಕೆ ಜನಸಾಮಾನ್ಯರು ಕಂಗಾಲು: ಹಬ್ಬಗಳ ಹೊತ್ತಲ್ಲೇ ಕೆಜಿಗೆ 70 ರೂ. ಗಡಿ ದಾಟಿದ ದರ
ಯಾವಾಗ ನಾತು ರಾಠೋಡ್, ರೈತರಾದ ಸುರೇಶ್ ಗೆಜ್ಜಿ, ಅಶೋಕ್ ರಾಠೋಡ್ ಹಾಗೂ ವಿಠ್ಠಲ್ ರಾಠೋಡ್ ಅವರಿಗೆ ಸೇರಿದ ಒಣದ್ರಾಕ್ಷಿ ಬೇರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದ 29 ಲಕ್ಷ ರೂ ಹಣ ನೀಡದಿರುವ ಕಾರಣ ರೈತರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ರೈತರು ಮನಗೂಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಕೋಲ್ಡ್ ಸ್ಟೋರೇಜ್‌ನಲ್ಲಿ ಒಣದ್ರಾಕ್ಷಿ ಇಟ್ಟಿರುವುದಕ್ಕೆ ಬಾಡಿಗೆ ಹಣ ಸೇರಿದಂತೆ 18 ಲಕ್ಷ ರೂ ಮಾತ್ರ ನೀಡಿದ್ದಾರಂತೆ. ಉಳಿದ 11 ಲಕ್ಷ ರೂ ನೀಡಿಲ್ಲವಂತೆ. ಸದ್ಯ ನಾತು ರಾಠೋಡ್ ನಾಪತ್ತೆಯಾಗಿದ್ದು, ಇತ್ತ ಹಣ ಕಳೆದುಕೊಂಡ ರೈತರು ಪರಿತಪಿಸುವಂತಾಗಿದೆ.
‘ಕಳೆದ ವರ್ಷದ ದ್ರಾಕ್ಷಿಯನ್ನೆಲ್ಲಾ ಒಣದ್ರಾಕ್ಷಿ ಮಾಡಿ ನಾತು ರಾಠೋಡ್ಗೆ ಸೇರಿದ ಕೋಲ್ಡ್ ಸ್ಟೋರೇಜ್ನಲ್ಲಿಟ್ಟು ಮೋಸ ಹೋಗಿದ್ದೇವೆ. ಬರದಿಂದ ಬಳಲಿದ್ದೇವೆ, ಸದ್ಯ ದ್ರಾಕ್ಷಿ ಬೆಳೆಯುವುದಕ್ಕೆ ಸಾಲ ಮಾಡಿದ್ದೇವೆ. ಒಣದ್ರಾಕ್ಷಿ ಮಾರಾಟ ಮಾಡಿದ ಹಣವನ್ನು ನಾತು ರಾಠೋಡ್ ನೀಡಬೇಕು. ಪೊಲೀಸರು ಸಹ ಆತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು’ ಒತ್ತಾಯಿಸಿದ್ಧಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:59 pm, Wed, 7 October 26