ವಿಜಯಪುರ: ಮಾಜಿ ಸಚಿವ ರಮೆಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯ ಸಹೋದರರು ನಮ್ಮ ಬಳಿ ಒಟ್ಟು 11 ಆಡಿಯೋ ಸಾಕ್ಷ್ಯಗಳಿವೆ. ಅವುಗಳ ಪೈಕಿ ಎರಡನ್ನು ಈಗ ಬಹಿರಂಗ ಮಾಡಿ ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ. ಸೂಕ್ತ ಸಂದರ್ಭದಲ್ಲಿ ಇನ್ನುಳಿದ 9 ಆಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಉಳಿದ 9 ಆಡಿಯೋ ಸಾಕ್ಷಿಗಳ ಪೈಕಿ ನಮ್ಮ ಸಹೋದರಿಯ ಜೊತೆ ಮಾತನಾಡಿರುವ ವಿಚಾರಗಳೆಲ್ಲ ಇವೆ. ನಾನು ಸೇಫ್ ಆಗಿದ್ದೇನೆ ಎಂದು ನಮ್ಮ ಸಹೋದರಿ ನಮ್ಮ ಜೊತೆ ಮಾತನಾಡಿದ್ದು ಇದೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ಪ್ರಸ್ತಾಪಿಸಿರುವುದು ಹಾಗೂ ಗ್ರಾಫಿಕ್, ಎಡಿಟ್ ವಿಚಾರಗಳ ಬಗ್ಗೆ ಹೇಳಿರುವುದೂ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇಡೀ ಘಟನೆಯಲ್ಲಿ ನನ್ನ ಕೈವಾಡವಿಲ್ಲ ಎಂದು ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಯುವತಿಯ ಸಹೋದರ, ಇಡೀ ರಾಜ್ಯದಲ್ಲಿ ಎಷ್ಟೋ ನಾಯಕರಿದ್ದಾರೆ. ಹಾಗಾದರೆ ಎಲ್ಲಾ ನಾಯಕರ ಹೆಸರನ್ನು ಬಿಟ್ಟ ಡಿ.ಕೆ.ಶಿವಕುಮಾರ್ ಹೆಸರನ್ನು ನಮ್ಮ ಸಹೋದರಿ ತೆಗೆದುಕೊಂಡಿದ್ದು ಯಾಕೆ ಎಂದು ಪ್ರಶ್ನೆ ಎತ್ತಿದ್ದಾರೆ.
ಸಿಡಿ ಬಹಿರಂಗಗೊಂಡ ಮಾರ್ಚ್ 2ನೇ ತಾರೀಖು ಸಹೋದರಿ ಬೆಂಗಳೂರಿನ ಪಿಜಿಯಲ್ಲಿ ಇದ್ದಳು ಎಂದಿರುವ ಯುವತಿಯ ಸಹೋದರರು, ವಿಡಿಯೋ ಬಹಿರಂಗವಾಗಿ ಇಷ್ಟು ದಿನಗಳಾದರೂ ನಮ್ಮ ಸಹೋದರಿಯ ಜೊತೆ ನಮಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ. ಈಗಲೂ ನಮ್ಮ ಜೊತೆ ಮಾತನಾಡಲು ಆಕೆಗೆ ಆಗುತ್ತಿಲ್ಲವೆಂದರೆ ಆಕೆ ಯಾವ ಪರಿಸ್ಥಿತಿಯಲ್ಲಿ ಇರಬಹುದು. ನಮ್ಮಿಂದ 28 ದಿನಗಳ ಕಾಲ ದೂರವಿದ್ದ ನಮ್ಮ ಅಕ್ಕನಿಗೆ ನಮ್ಮ ಜೊತೆ ಮಾತನಾಡುವ ಯಾವ ಆಸೆಯೂ ಇರಲಿಲ್ಲವೇ? ಇದೆಲ್ಲಾ ಗಮನಿಸಿದರೆ ನಮ್ಮ ಸಹೋದರಿಗೆ ಒತ್ತಡ ಹಾಕಿ ಬೆದರಿಕೆ ಹಾಕಿ ಇಡಲಾಗಿತ್ತು ಎಂದು ಗೊತ್ತಾಗುತ್ತದೆ ಎನ್ನುವ ಮೂಲಕ ಆಕೆಯನ್ನು ಬಲವಂತವಾಗಿ ಇಡಲಾಗಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
ಸಿಡಿ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ
ಸಿಡಿ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ಪುನರುಚ್ಚಾರ ಮಾಡಿರುವ ಯುವತಿಯ ಸಹೋದರರು, ಡಿ.ಕೆ.ಶಿವಕುಮಾರ್ ಅವರ ಪರಿಚಯಸ್ಥರೊಬ್ಬರು ನಮ್ಮ ಅಕ್ಕನಿಗೆ ಪರಿಚಯವಿದ್ದರು. ಅವರ ಮೂಲಕ ಕೆಲಸಕ್ಕೆ ಹೋಗುವುದಾಗಿ ನಮ್ಮ ಬಳಿ ಹೇಳಿದ್ದಳು. ಆದರೆ, ಅವರು ಆಕೆಯ ಬಳಿ ಇಂಥವೆಲ್ಲ ಮಾಡಿಸಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಗುರುತರ ಆರೋಪ ಹೊರಿಸಿದ್ದಾರೆ. ಅಂತೆಯೇ, ಅವರ ಕುಟುಂಬದ ಮೇಲೆ ರಮೇಶ ಜಾರಕಿಹೊಳಿ ಕಣ್ಣಿದೆ ಎಂಬ ವಿಚಾರಕ್ಕೆ ಪ್ರತ್ಯುತ್ತರಿಸಿ, ನಮ್ಮ ಮೇಲೆ ರಮೇಶ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರ ಕಣ್ಣಿಲ್ಲ. ಬದಲಾಗಿ ಯಾರಿದ್ದಾರೆ ಎಂಬುದು ನಿಮಗೆ ಗೊತ್ತಾಗುತ್ತದೆ. ನಾವು ಸುಳ್ಳು ಹೇಳುತ್ತಿದ್ದರೆ ಭಯ ಪಡಬೇಕಿತ್ತು. ಆದರೆ, ನಮಗೆ ಯಾರ ಭಯವೂ ಇಲ್ಲ. ಹಾಗಾಗಿಯೇ ನಾವು ಸಾಕ್ಷಿಗಳನ್ನು ನೀಡುತ್ತಿದ್ದೇವೆ. ನಮ್ಮ ಅಜ್ಜಿಯ ಅನಾರೋಗ್ಯದ ಕಾರಣದಿಂದ ವಿಜಯಪುರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಕುಟುಂಬದ ಭದ್ರತಾ ದೃಷ್ಟಿಯಿಂದ ನಿಡಗುಂದಿ ಪೊಲೀಸರು ನಮಗೆ ಭದ್ರತೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಅವರ ಬೆಂಬಲಿಗರು ನಮ್ಮ ಮೇಲೆ ಅಟ್ಯಾಕ್ ಮಾಡಬಹುದು ಅಥವಾ ನಮ್ಮನ್ನ ಇಲ್ಲಿಂದ ಬಲವಂತವಾಗಿ ಕರೆದುಕೊಂಡು ಹೋಗಬಹುದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಎಸ್‌ಐಟಿ ತನಿಖೆಯ ಬಳಿಕ ಎಲ್ಲವೂ ಬಹಿರಂಗವಾಗಲಿದೆ. ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಸದ್ಯ ಏನೂ ಮುಚ್ಚಿಡಲಾಗುವುದಿಲ್ಲ. ಪ್ರಕರಣದಲ್ಲಿ ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆಯಾಗಲಿ. ನಮ್ಮ ಸಹೋದರಿ ಭೇಟಿಗೆ ಎಸ್‌ಐಟಿಗೆ ಮನವಿ ಮಾಡಿದ್ದೇವೆ. ಅವಕಾಶ ನೀಡಿದರೆ ತುರ್ತಾಗಿ ಹೋಗಿ ಭೇಟಿ ಮಾಡುತ್ತೇವೆ ಎಂದು ಸಂತ್ರಸ್ತ ಯುವತಿಯ ಸಹೋದರರು ತಿಳಿಸಿದ್ದಾರೆ.
ಇದನ್ನೂ ಓದಿ:
ಸಿಡಿ ಸಂತ್ರಸ್ತೆಯ ಭದ್ರತೆಗೆ ಪೊಲೀಸ್ ಕಬ್ಬಡಿ ಟೀಂ ರೆಡಿ!
ರಮೇಶ್ ಜಾರಕಿಹೊಳಿ CD ಪ್ರಕರಣ: ಅಜ್ಜಿ ಆರೊಗ್ಯದಲ್ಲಿ ಏರುಪೇರು, ವಿಜಯಪುರಕ್ಕೆ ತೆರಳಿದ ಸಿಡಿ ಸಂತ್ರಸ್ಥೆಯ ಪೋಷಕರು