ವಿಜಯಪುರ: ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ಪ್ರಚಾರ ಭರದಿಂದ ಸಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಇಂದು (ಅಕ್ಟೋಬರ್ 26) ಕೂಡ ರಾಜಕೀಯ ನಾಯಕರು ಅಬ್ಬರದ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಚುನಾವಣಾ ಪ್ರಚಾರ ವೇದಿಕೆಯಲ್ಲಿ ಬಿಜೆಪಿ ಮುಖಂಡ ಬಾವುಕ ಭಾಷಣ ಮಾಡಿದ್ದಾರೆ. ಬಿಜೆಪಿ ಸರ್ಕಾರ ತಳವಾರ ಸಮಾಜಕ್ಕೆ 2ಎ ಸ್ಥಾನಮಾನ ನೀಡುತ್ತದೆ. ತಳವಾರ ಸಮುದಾಯ ಎಸ್ಟಿಗೆ ಸೇರಿಸಿಯೇ ಸಾಯುವೆ ಎಂದು ಚಿಂಚನಸೂರು ಹೇಳಿಕೆ ನೀಡಿದ್ದಾರೆ. ನನ್ನ ಶವದ ಮೇಲೆ ಹಾರ ಹಾಕಿಸಿಕೊಂಡು ಸಾಯ್ತೀನಿ ಎಂದು ಚಿಂಚನಸೂರು ಹೇಳಿದ್ದಾರೆ. ನನ್ನ ಜೀವನ ತೆರೆದ ಇತಿಹಾಸ. ನನಗೆ ತಾಯಿ-ತಂದೆ, ಮಕ್ಕಳು-ಮರಿ ಯಾರು ಇಲ್ಲ ಎಂದು ಭಾವುಕರಾಗಿದ್ದಾರೆ.
ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅನುಕಂಪ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಸಮಾವೇಶದಲ್ಲಿ ದಿ.ಎಮ್.ಸಿ ಮನಗೂಳಿ ಅವರ ಶವ ಸಂಸ್ಕಾರದ ವಿಡಿಯೋ ಪ್ಲೇ ಮಾಡಲಾಗಿದೆ. ಈ ಮೊದಲು ಎಂ.ಸಿ ಮನಗೂಳಿ ಸಿಂದಗಿ ಕ್ಷೇತ್ರದ ಶಾಸಕರಾಗಿದ್ದರು. ಎಂ.ಸಿ ಮನಗೂಳಿ ನಿಧನದಿಂದ ಸಿಂದಗಿ ಕ್ಷೇತ್ರ ತೆರವಾಗಿತ್ತು. ಈ ಉಪಚುನಾವಣೆಗೆ ಎಂ.ಸಿ ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆ ಚುನಾವಣಾ ಪ್ರಚಾರದ ವೇಳೆ, ಎಂ.ಸಿ ಮನಗೂಳಿ ನಿಧನದ ಸಂದರ್ಭದಲ್ಲಿ ಮಾಡಿದ್ದ ವಿಡಿಯೋ ಪ್ಲೇ ಮಾಡಲಾಗಿದೆ. ಕಾಂಗ್ರೆಸ್ ಸಮಾವೇಶದಕ್ಕೆ ದಿ.ಎಂ.ಸಿ ಮನಗೂಳಿ ಪತ್ನಿ ಸಿದ್ದಮ್ಮ ಆಗಮಿಸಿದ್ದಾರೆ. ಮಗನನ್ನು ಗೆಲ್ಲಿಸಲು ಮನವಿ ಮಾಡಿದ್ದಾರೆ.
ಜೆಡಿಎಸ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ದಿ. ಎಂ.ಸಿ. ಮನಗೂಳಿ ಫೋಟೊ ಬಳಸಿ ಸಿಂದಗಿಯಲ್ಲಿ ಜೆಡಿಎಸ್ ಪ್ರಚಾರ ಮಾಡಿದೆ. ಪ್ರಚಾರ ಪತ್ರದಲ್ಲಿ ಎಂ.ಸಿ. ಮನಗೂಳಿ ಫೋಟೋ ಬಳಸಿಕೊಂಡಿದೆ. ಮನಗೂಳಿ ಫೋಟೋ ಬಳಸಿ ಮತಬೇಟೆಗೆ ಜೆಡಿಎಸ್ ಮುಂದಾಗಿದೆ.
ಮುಸ್ಲಿಂ ಮುಖಂಡರನ್ನು ಬಿಜೆಪಿಗೆ ಆಹ್ವಾನಿಸಿದ ಗೋವಿಂದ ಕಾರಜೋಳ
ಮುಸ್ಲಿಂ ಮುಖಂಡರೇ ಭಾರತೀಯ ಜನತಾ ಪಾರ್ಟಿಗೆ ಬನ್ನಿ. ವಿಪಕ್ಷಗಳು ನಿಮ್ಮನ್ನು ವೋಟ್‌ಗಾಗಿ ಬಳಸಿಕೊಂಡಿದ್ದಾರೆ. ಅವರ ಮೇಲೆ ಕುರುಡು ನಂಬಿಕೆಯನ್ನು ಇಟ್ಟುಕೊಂಡಿದ್ದೀರಿ. ಅವರಿಂದ ನಿಮ್ಮ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ತಳವಾರ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೇಟ್ ಸಿಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್
ತಳವಾರ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೆಟ್ ಸಿಗುತ್ತೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಕೋಲಿ ಸಮಾಜದವರು. ಪ್ರಧಾನಿ ಮೋದಿ ನಿಮ್ಮ ಸಮಾಜಕ್ಕೆ ಸ್ಥಾನಮಾನ ನೀಡಿದ್ದಾರೆ. ನಿಮ್ಮ ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ನಾನು ಸದನದಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ಪರ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರಚಾರ
ಸ್ವತಂತ್ರ ಪೂರ್ವದಲ್ಲಿ ಭಾರತೀಯ ಜನತಾ ಪಾರ್ಟಿ ಇರಲಿಲ್ಲ. 1950ರಲ್ಲಿ ಜನಸಂಘ ಹುಟ್ಟಿಕೊಂಡಿತು. 1980ರಲ್ಲಿ ಭಾರತೀಯ ಜನತಾ ಪಾರ್ಟಿ ಹುಟ್ಟಿಕೊಂಡಿತು. ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ರಾ? ದೇಶಕ್ಕಾಗಿ ಬಿಜೆಪಿಯವರು ಪ್ರಾಣತ್ಯಾಗ ಮಾಡಿದ್ದಾರಾ? ಈಗ ದೇಶ ಉದ್ಧಾರ ಮಾಡುತ್ತೀವಿ ಎಂದು ಬಂದಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬೊಮ್ಮಾಯಿಗೆ ಧಮ್ ಇದ್ದರೆ ವೇದಿಕೆಗೆ ಬಂದು ಚರ್ಚಿಸಲಿ. ಆಗ ಯಾವುದು ಸತ್ಯ, ಯಾವುದು ಸುಳ್ಳೆಂದು ತಿಳಿಯುತ್ತೆ. ಸಿಎಂ ಬೊಮ್ಮಾಯಿ ಚರ್ಚೆ ಮಾಡುವುದಕ್ಕೆ ಸಿದ್ಧರಿದ್ದಾರಾ? ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. SC/STಗೆ ಹೆಚ್ಚಿನ ಅನುದಾನ ನೀಡಿದ್ದು ನನ್ನ ಅವಧಿಯಲ್ಲಿ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿದ್ದು ನಾವು. ನೀನು ಏನು ಕೊಟ್ಟೆ ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇತ್ತ, ಉಪಚುನಾವಣೆ ಸುಳ್ಳು ಮತ್ತು ಸತ್ಯದ ನಡುವೆ ಧರ್ಮಯುದ್ಧ. ಬಿಜೆಪಿಯವರು ಸುಳ್ಳಿನ ಮೇಲೆ ಸಮಾಜ ಕಟ್ಟಲು ಹೋಗ್ತಿದ್ದಾರೆ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬಡವರು, ದಲಿತರಿಗೆ ಬಿಜೆಪಿ ಒಳ್ಳೆಯ ಕಾರ್ಯಕ್ರಮ ನೀಡಿಲ್ಲ. ಸ್ವಾಭಿಮಾನಿಗಳು ಹಣಕ್ಕಾಗಿ ಮತವನ್ನು ಮಾರಿಕೊಳ್ಳಬಾರದು. ಬಿಜೆಪಿ ಶಕ್ತಿ ಇರುವುದು ಕೇವಲ ನೋಟ್ನಲ್ಲಿ ಮಾತ್ರ. ಹಣ ಹಂಚಿ ಮತ ಖರೀದಿಸ್ತಾರೆ ವಿನಃ ಉತ್ತರ ಕೆಲಸದಿಂದಲ್ಲ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ನಾವೆಲ್ಲರೂ ಅಭ್ಯರ್ಥಿಗಳು. ನಾವು ನೀತಿ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದೇವೆ. ನಾವು ಸಮಾಜವನ್ನು ಒಡೆಯಲ್ಲ, ಸಮಾಜ ಒಗ್ಗೂಡಿಸುತ್ತೇವೆ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಿಂದಗಿ ಅಭಿವೃದ್ಧಿಗೆ 1200 ಕೋಟಿ ರೂ. ನೀಡಿದ್ದೆ: ಹೆಚ್ಡಿ ಕುಮಾರಸ್ವಾಮಿ
ನನ್ನ ಪಕ್ಷಕ್ಕೆ ಬಹುಮತ ಸಿಗದಿದ್ರೂ 2 ಬಾರಿ ಸಿಎಂ ಆಗಿದ್ದೆ. ಆಗ ಸಿಂದಗಿ ಕ್ಷೇತ್ರ ಅಭಿವೃದ್ಧಿಗೆ 1,200 ಕೋಟಿ ರೂ. ಕೊಟ್ಟಿದ್ದೆ. 1,200 ಕೋಟಿ ರೂ. ಎಲ್ಲಿಗೆ ಹೋಯಿತೆಂದು ಕೇಳಬೇಕು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಯನ್ನು ಪ್ರಶ್ನಿಸಿ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನನ್ನ ಬಗ್ಗೆ ಹಲವು ನಾಯಕರು ಲಘುವಾಗಿ ಮಾತಾಡಿದರು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದೂ ಹೇಳಿಕೆ ನೀಡಿದ್ದರು. ಈಗ ಮತ್ತೆ ಅದೇ ಮಾತುಗಳನ್ನು ಹೇಳುತ್ತಿದ್ದಾರೆ. ಕುತಂತ್ರದಿಂದ ಮೈತ್ರಿ ಸರ್ಕಾರವನ್ನು ತೆಗೆದುಹಾಕಿದರು. ನನ್ನ ಬಳಿ ಸೂಟು ಬೂಟು ಹಾಕಿಕೊಳ್ಳುವವರು ಬರಲ್ಲ. ನಿಮ್ಮಂತಹ ಬಡವರು, ಕಾರ್ಮಿಕರು ಬರುತ್ತಾರೆ ಎಂದು ಸಿಂದಗಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ದುರಾಡಳಿತದಿಂದ 125 ಶಾಸಕರಿದ್ದ ಕಾಂಗ್ರೆಸ್ ಪಕ್ಷವನ್ನು 75ಕ್ಕೆ ತಂದು ನಿಲ್ಲಿಸಿದ್ರು: ಆರ್ ಅಶೋಕ್ ವಾಗ್ದಾಳಿ
ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ದೇವೇಗೌಡ ಪ್ರಚಾರ