ಗಣೇಶೋತ್ಸವಕ್ಕೆ ಶುಭಕೋರಿ ಯತ್ನಾಳ್ ಭಾವ ಚಿತ್ರವಿದ್ದ ಬ್ಯಾನರ್ ಹರಿದ ಪ್ರಕರಣ; ಮೂವರು ಅರೆಸ್ಟ್
ವಿಜಯಪುರ ನಗರದ ಶಿವಾಜಿ ವೃತ್ತದ ಬಳಿ ಹಾಕಿದ್ದ ಬೃಹತ್ ಬ್ಯಾನರ್ನಲ್ಲಿ ನಗರ ಶಾಸಕ ಯತ್ನಾಳ ಹಾಗೂ ಗಜಾನನ ದೇವರ ಫೋಟೋ ಮತ್ತು ಶಿವಾಜಿ ಮಹಾರಾಜರ ಭಾವಚಿತ್ರವಿತ್ತು. ಅದನ್ನು ಹರಿದು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ, ಸೆ.30: ಗಣೇಶೋತ್ಸವ ಹಬ್ಬಕ್ಕೆ (Ganesha Chaturthi) ಶುಭಾಶಯ ಕೋರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basangouda Patil Yatnal) ಭಾವಚಿತ್ರವಿರೋ ಬ್ಯಾನರ್ ಅನ್ನು ಕೆಲ ಕಿಡಿಗೇಡಿಗಳು ಹರಿದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಜಯಪುರ ಪೊಲೀಸರು (Vijayapura Police) ಬಂಧಿಸಿದ್ದಾರೆ. ಯಾಸೀನ್, ಮೊಹಮ್ಮದ್, ಸೋಯಲ್ ಬಂಧಿತ ಆರೋಪಿಗಳು. ಈದ್ ಮಿಲಾದ್ ಹಬ್ಬದ ದಿನ ಶಿವಾಜಿ ವೃತ್ತದಲ್ಲಿ ಘಟನೆ ನಡೆದಿತ್ತು. ಶಾಸಕರ ಬ್ಯಾನರ್ ಹರಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಯತ್ನಾಳ್ ಬೆಂಬಲಿಗ ರಾಘು ಗಾಂಧಿಚೌಕ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ
ನಗರದ ಶಿವಾಜಿ ವೃತ್ತದ ಬಳಿ ಹಾಕಿದ್ದ ಬೃಹತ್ ಬ್ಯಾನರ್ನಲ್ಲಿ ನಗರ ಶಾಸಕ ಯತ್ನಾಳ ಹಾಗೂ ಗಜಾನನ ದೇವರ ಫೋಟೋ ಮತ್ತು ಶಿವಾಜಿ ಮಹಾರಾಜರ ಭಾವಚಿತ್ರವಿತ್ತು. ಅದನ್ನು ಹರಿದು ಹಾಕಲಾಗಿತ್ತು. ಸೆ.28ರಂದು ಈದ್ ಮಿಲಾದ್ ಹಬ್ಬದ ಕಾರಣ ನಡೆದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರು ಹಸಿರು ಧ್ವಜವನ್ನು ಹಾಕಿದ್ದ ಕಟ್ಟಿಗೆಯನ್ನು ಚುಚ್ಚಿ ಬ್ಯಾನರ್ ಹರಿದಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಖಂಡಿಸಿ ಯತ್ನಾಳ ಬೆಂಬಲಿಗರು ಬ್ಯಾನರ್ ಹರಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ, ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ: ಯತ್ನಾಳ್ ಹೇಳಿಕೆಯ ಮರ್ಮ ಇಲ್ಲಿದೆ
ಯತ್ನಾಳ ಭಾವಚಿತ್ರದ ಬ್ಯಾನರ್ ಅನ್ನು ಹರಿದವರ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿಯಿಂದ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಯತ್ನಾಳ ಅವರ ಭಾವಚಿತ್ರದ ಬ್ಯಾನರ್ ಹರಿಯೋ ಮೂಲಕ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಶಾಂತಿ ಕದಡೋ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಗಣೇಶ ಚತುರ್ಥಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಚರಣೆ ಮಾಡಲಾಗಿದೆ. ಆದರೆ ಈದ್ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರು ಯತ್ನಾಳ್ ಭಾವಚಿತ್ರದ ಬ್ಯಾನರ್ ಹರಿದಿದ್ದು ಉದ್ದೇಶಪೂರ್ವಕವಾಗಿಯಾಗಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಯತ್ನಾಳ ಭಾವಚಿತ್ರದ ಜೊತೆಗೆ ಗಣೇಶನ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೂ ಅವಮಾನ ಮಾಡಿದ್ದಾರೆ. ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಈ ಕೃತ್ಯದ ಹಿಂದೆ ಯಾರಿದ್ದಾರೆಂದು ಕಂಡು ಹಿಡಿಯಬೇಕೆಂದು ಒತ್ತಾಯ ಮಾಡಿದ್ದರು. ಸದ್ಯ ಘಟನೆ ಸಂಬಂಧ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ