ಚುನಾವಣೆಗೆ ಸಜ್ಜಾದ ವಿಜಯಪುರ ಮಹಾನಗರ ಪಾಲಿಕೆ: ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರು
35 ಸದಸ್ಯರ ಸಂಖ್ಯೆ ಹೊಂದಿದ್ದು, ಅಕ್ಟೋಬರ್ 31ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಸದ್ಯ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿಜಯಪುರ: ನಾಳೆ (ಅ.28) ವಿಜಯಪುರ ಮಹಾನಗರ ಪಾಲಿಕೆ (Mahanagara Palike) ಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಒಟ್ಟು 35 ಸದಸ್ಯರ ಸಂಖ್ಯೆ ಹೊಂದಿದ್ದು, ಅಕ್ಟೋಬರ್ 31ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಸದ್ಯ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಕರ್ತವ್ಯಕ್ಕಾಗಿ 1,454 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪಾಲಿಕೆ ಮತದಾನಕ್ಕೆ ಒಟ್ಟು 303 ಮತಗಟ್ಟೆಗಳ ವ್ಯವಸ್ಥೆ ಮಾಡಿದ್ದು, ಈ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು ಮತದಾರರ ಸಂಖ್ಯೆ-2,88,288. 1,43,616 ಪುರುಷರು, 1,44,499 ಮಹಿಳಾ ಮತದಾರರಿದ್ದಾರೆ. ನಾಳೆ ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ನಾಳೆ ರಾತ್ರಿ 12 ರವರೆಗೆ ಮದ್ಯಮಾರಾಟ ನಿಷೇಧ ಮಾಡಿ ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶ ಹೋರಡಿಸಿದ್ದಾರೆ.
ಎಸ್ಪಿ ಆನಂದಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ:
ಎಸ್ಪಿ ಆನಂದಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಒಬ್ಬರು ಎಎಸ್ಪಿ, ನಾಲ್ವರು DySP, 9 ಸಿಪಿಐ, 27 PSI, 82 ASI, 58 ಹೆಡ್ ಕಾನ್ಸ್ಟೇಬಲ್ಸ್, 394 ಕಾನ್ಸ್ಟೇಬಲ್ಸ್, 120 ಹೋಂಗಾರ್ಡ್ಸ್ ಸೇರಿದಂತೆ 700 ಸಿಬ್ಬಂದಿ, 4 ಕೆಎಸ್ಆರ್ಪಿ ತುಕಡಿ ಮತ್ತು 8 ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಇನ್ನು ಅಖಾಡಲ್ಲಿ ಒಟ್ಟು 174 ಅಭ್ಯರ್ಥಿಗಳಿದ್ದು, ಕಾಂಗ್ರೆಸ್ 35, ಬಿಜೆಪಿ 33, ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಕೆ ಆರ್ ಎಸ್ 3, ಜನತಾ ಪಾರ್ಟಿ 3, ಎಸ್ ಡಿ ಪಿಐ 2, ಬಿಎಸ್ಪಿ 1 ಮತ್ತು 58 ಪಕ್ಷೇತರರು ಚುನಾವಣಾ ಕಣದಲ್ಲಿವೆ.
ವೇತನ ಸಹಿತ ರಜೆ:
ಚುನಾವಣೆ ನಡೆಯುವ ಮತ ಕ್ಷೇತ್ರಗಳ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು, ಇತರ ಎಸ್ಟಾಬ್ಲಿಷ್ ಮೆಂಟ್ಗಳಲ್ಲಿನ ಖಾಯಂ ಹಾಗೂ ದಿನಗೂಲಿ ಅರ್ಹ ಮತದಾರರಿಗೆ ವೇತನ ಸಹಿತ ರಜೆ ನೀಡಲಾಗಿದೆ.
ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ಮತಯಾಚನೆ:
35 ವಾರ್ಡ್ಗಳ ಪೈಕಿ ಕಾಂಗ್ರೆಸ್ 35 ವಾರ್ಡ್ಗಳಲ್ಲಿಯೂ ಸ್ಪರ್ಧೆ ಮಾಡಿದೆ. ಮುಸ್ಲೀಂ ಮತದಾತರರು ಹೆಚ್ಚಿರೋ ವಾರ್ಡ್ ಸಂಖ್ಯೆ 20 ಮತ್ತು 27ರಲ್ಲಿ ಬಿಜೆಪಿ ತನ್ನ ಕ್ಯಾಂಡಿಡಿಯೇಟ್ ಹಾಕದೇ 33 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಇನ್ನು ಜೆಡಿಎಸ್ 20 ಸ್ಥಾನ, ಆಮ್ ಆದ್ಮಿ ಪಾರ್ಟಿ 15 ಸ್ಥಾನ, ಎಐಎಂಐಎಂ 4 ಸ್ಥಾನ, ಜನತಾ ಪಾರ್ಟಿ 3 ಸ್ಥಾನ, ಕೆಆರ್ಎಸ್ 3 ಸ್ಥಾನ, ಎಸ್ಡಿಪಿಐ 2 ಸ್ಥಾನ, ಬಿಎಸ್ಪಿ ಸ್ಥಾನ 1 ಹಾಗೂ ಪಕ್ಷೇತರರು 58 ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರೋ ಕಾರಣ ಪ್ರಮಖ ಪಕ್ಷಗಳ ನಾಯಕರು ಹಾಗೂ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಮತದಾರರ ಮನವೋಲಿಕೆಗೆ ಮುಂದಾಗಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಈ ವೇಳೆ ಮಾತನಾಡಿದ ಯತ್ನಾಳ ನಗರದ ಜನರು 33 ಸ್ಥಾನಗಳಲ್ಲಿ ನಮಗೆ ಆಶ್ಚರ್ಯಕರವಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುತ್ತಾರೆ. ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ನಾವು ಮತಯಾಚನೆ ಮಾಡಿದ್ದೇವೆ. ಹೆಚ್ಚಿನ ಸ್ಥಾನ ನಮಗೆ ಸಿಗಲಿವೆ ಎಂದು ಹೇಳಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:45 pm, Thu, 27 October 22