ವಿಜಯಪುರ: ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 85ರ ವಯೋ ವೃದ್ಧ, ನಿವೃತ್ತಿಯ ನಂತರ 4 ಸ್ನಾತಕೋತ್ತರ ಪದವಿ ಪಡೆದ ನಿಂಗಯ್ಯ

| Updated By: ಗಣಪತಿ ಶರ್ಮ

Updated on: Jun 08, 2024 | 5:10 PM

ಬಿಎಲ್​​​ಡಿಇ ಸಂಸ್ಥೆಯ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರ ಆಯೋಜಿಸಿರುವ ಎಂಎ ಇಂಗ್ಲಿಷ್ ಪರೀಕ್ಷೆಗೆ 85 ವರ್ಷದ ನಿಂಗಯ್ಯ ಒಡೆಯರ ಹಾಜರಾಗಿದ್ದಾರೆ. ಈಗಾಗಲೇ ಬಾಹ್ಯ ವಿದ್ಯಾರ್ಥಿಯಾಗಿಯೇ ಕನ್ನಡ, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂಎ ಪದವಿ ಪಡೆದಿದ್ದಾರೆ.

ವಿಜಯಪುರ: ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 85ರ ವಯೋ ವೃದ್ಧ, ನಿವೃತ್ತಿಯ ನಂತರ 4 ಸ್ನಾತಕೋತ್ತರ ಪದವಿ ಪಡೆದ ನಿಂಗಯ್ಯ
ನಿಂಗಯ್ಯ ಒಡೆಯರ
Follow us on

ವಿಜಯಪುರ, ಜೂನ್ 8: ಮನಸ್ಸಿದ್ದರೆ ಎಂಥ ಸಾಧನೆಯನ್ನಾದರೂ ಮಾಡಬಹುದು. ಜಾತಿ, ಮತ, ಪಂಥ ವರ್ಷ, ವಯಸ್ಸಿನ ಅಂತರ ಸಾಧನೆಗೆ ಅಡ್ಡಿಯಾಗಲಾರದು. ಈ ಮಾತು ಇಲ್ಲಿ ಸಾಕ್ಷಿಯಾಗಿದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಾಗಿರುವ ವಯಸ್ಸಿನಲ್ಲೂ, ಬಾಗಲಕೋಟೆ ಜಿಲ್ಲೆ ತಾಲೂಕಿನ ಗುಡೂರಿನ ಗ್ರಾಮದ 85ರ ವಯೋ ವೃದ್ಧ ನಿಂಗಯ್ಯ ಒಡೆಯರ (Ningaiah wodeyara) ನಾಲ್ಕು ಸ್ನಾತಕೋತ್ತರ ಪದವಿ (Post-Graduation Degrees) ಗಳಿಸಿದ್ದಾರೆ. ಇವರು ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ ಈ ಸಾಧನೆ ಮಾಡಿದ್ದಾರೆ. ಇವರಿಗೆ ಮತ್ತಷ್ಟು ಮಗದಷ್ಟು ಕಲಿಯಬೇಕೆಂಬ ಹಂಬಲ. ಇದರ ಫಲವಾಗಿಯೇ ಇಂದು ಅವರು ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಿಗೆ 68 ಹಾಗೂ 55 ವರ್ಷದ ಇನ್ನಿಬ್ಬರು ವ್ಯಕ್ತಿಗಳು ಸಾಥ್ ನೀಡಿದ್ದಾರೆ!

ಬಿಎಲ್​​​ಡಿಇ ಸಂಸ್ಥೆಯ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರ ಆಯೋಜಿಸಿರುವ ಎಂಎ ಇಂಗ್ಲಿಷ್ ಪರೀಕ್ಷೆಗೆ 85 ವರ್ಷದ ನಿಂಗಯ್ಯ ಒಡೆಯರ ಹಾಜರಾಗಿದ್ದಾರೆ. ಈಗಾಗಲೇ ಬಾಹ್ಯ ವಿದ್ಯಾರ್ಥಿಯಾಗಿಯೇ ಕನ್ನಡ, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂಎ ಪದವಿ ಪಡೆದಿದ್ದಾರೆ. ಇದೀಗಾ ನಿಂಗಯ್ಯ ಒಡೆಯರ ಇಂಗ್ಲೀಷ್ ವಿಷಯದಲ್ಲಿ ಎಂಎ ಪದವಿಗಾಗಿ ಪರೀಕ್ಷೆಗೆ ಹಾಜರಾಗಿದ್ಧಾರೆ. ಇವರ ಜೊತೆಗೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ 68 ವರ್ಷದ ಪಿಎಂ ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಪಾಟೀಲ ಅವರೂ ಸಾಥ್ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ 85 ರ ಹರೆಯದ ನಿಂಗಯ್ಯ ಒಡೆಯರ, ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದ ನಾನು 2000ನೇ ಇಸವಿಯಲ್ಲಿ ನಿವೃತ್ತಿಯಾಗಿದ್ದೇನೆ. ಬಡತನದಿಂದ ಬಂದಿದ್ದು, ಸಾಹಿತ್ಯದಲ್ಲೂ ಆಸಕ್ತಿಯಿದೆ. ಈವರೆಗೆ ಕನ್ನಡದಲ್ಲಿ 15 ಕೃತಿಗಳ ರಚನೆ ಮಾಡಿದ್ದೇನೆ. ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ವಯಸ್ಸಾದರೂ ಆಸಕ್ತಿ ಕಡಿಮೆಯಾಗಿಲ್ಲ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ ಆವಾಗ ಅದು ಕಬ್ಬಿಣ ತುಕ್ಕು ಹಿಡಿದಂತಾಗುತ್ತದೆ. ಹೀಗಾಗಿ ಆಗಾಗ, ಚರ್ಚೆ, ಅಧ್ಯಯನ, ಪರೀಕ್ಷೆ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ. 1956 ರಲ್ಲಿ ನಾನು ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದೆ. ಅದೇ ಉತ್ಸಾಹ ಈಗಲೂ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಜೊತೆಗೆ 68 ವರ್ಷದ ಪಿಎಂ ಮಡಿವಾಳರ ಸಹ ಮಾತನಾಡಿ, ನನ್ನ ಮಗಳು ಈ ಮುಂಚೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರಕ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಿದಾಗ ನಾನೂ ಕೂಡ ಅವಳೊಂದಿಗೆ ಅರ್ಜಿ ಹಾಕಿದೆ. ಕೇಂದ್ರ ಉತ್ತಮವಾಗಿ ಪರೀಕ್ಷೆ ನಡೆಸುತ್ತಿದ್ದು, ಎಲ್ಲ ಪರೀಕ್ಷಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಓರ್ವ ಪ್ರಾಧ್ಯಾಪಕನಾಗಿ ದಿನನಿತ್ಯ ಅಧ್ಯಯನಶೀಲನಾಗಿರಬೇಕು. ಜ್ಞಾನ ಸಂಪಾದನೆ ಮಾಡಬೇಕು. ಹೊಸ ಹೊಸ ಪುಸ್ತಕಗಳನ್ನು ಓದುವುದು, ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬಹುದು. ನಮ್ಮ ನಾನು, ನಮ್ಮ ಸಂಸ್ಕೃತಿ ಬೆಳೆಯಲು ಇದು ನಾಂದಿಯಾಗುತ್ತಿದೆ ಎಂದರು.

ಪರೀಕ್ಷೆಯ ಕುರಿತು ಪ್ರತಿಕ್ರಿಯೆ ನೀಡಿದ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಕೋರಿ ಮಾತನಾಡಿ, ಬಿಎಲ್​​ಡಿ ಇ ಸಂಸ್ಥೆಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಸಾಕಷ್ಟು ಜನ ಹಿರಿಯ ನಾಗರಿಕರು ಪರೀಕ್ಷೆ ಬರೆಯುತ್ತಿದ್ದಾರೆ. ಯುವಕರಿಗೂ ಇವರು ಸ್ಪೂರ್ತಿಯಾಗಿದ್ದಾರೆ. ಇಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಅತೀ ಕಡಿಮೆ ಖರ್ಚಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಸರ್ಟಿಫಿಕೆಟ್ ಲಭ್ಯವಿವೆ. ಬಾಹ್ಯ ಪರೀಕ್ಷೆ ಬರೆಯುವವರಿಗೆ ಉತ್ತಮ ವಾತಾವರಣವಿದೆ. 85 ವರ್ಷದ ಹಿರಿಯರು, 65 ವರ್ಷದ ಹಿರಿಯರು, 55 ವರ್ಷದ ಹಿರಿಯರು ಪರೀಕ್ಷೆ ಬರೆದಿದ್ದಾರೆ. ನಿವೃತ್ತ ನೌಕರರು ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಪರೀಕ್ಷೆ ಬರೆಯುತ್ತಿರುವುದು ನನಗೆ ಖುಷಿ ಎನಿಸುತ್ತಿದೆ. ಈಗ ಇಂಗ್ಲಿಷ್ ಪರೀಕ್ಷೆಗೆ 25 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ

ಪರೀಕ್ಷೆಯ ಬಳಿಕ ಕಾಲೇಜಿನ ಪ್ರಾಚಾರ್ಯೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಮೇಲ್ವಿಚಾರಕಿ ಡಾ. ಭಾರತಿ ವೈ. ಖಾಸನೀಸ್, ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ರವಿಕಾಂತ ಕಮಲೇಕರ, ಅವರು ಹಿರಿಯ ವಯಸ್ಸಿನಲ್ಲಿ ಪರೀಕ್ಷೆ ಬರೆದು ಇತತರಿಗೆ ಮಾದರಿಯಾದ ನಿಂಗಯ್ಯ ಬಸಯ್ಯ ಒಡೆಯರ, ಪಿ ಎಂ ಮಡಿವಾಳ ಮತ್ತು ನಾಗನಗೌಡ ಎ ಪಾಟೀಲ ಅವರಿಗೆ ಶುಭಾಶಯ ಕೋರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ