ವಿಜಯಪುರ, (ಅಕ್ಟೋಬರ್ 21): ಜಿಲ್ಲೆಯಲ್ಲಿ ಈಗ ಬರೀ ವಕ್ಫ್ ಕಾಯ್ದೆಯದ್ದೇ ಚರ್ಚೆ. ಕಾರಣ ಕಳೆದ ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದರು. ವಕ್ಪ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದರು. ನಂತರ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ವಕ್ಫ್ ಆಸ್ತಿಗಳ ಖಾತಾ ಆಗದೇ ಇರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕೆಂದು ಸೂಚನೆ ನೀಡಿದರು. ಇದಕ್ಕೆ ಪ್ರತಿರೋಧವಾಗಿ ವಕ್ಫ್ ಕಾಯ್ದೆಯನ್ನು ವಿರೋಧಿಸಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಕ್ಪ್ ಕಾಯ್ದೆ ವಿರೋಧಿಸಿ ಸಮಾವೇಶವನ್ನೇ ಮಾಡಿದ್ದರು. ಈಗ ಕೆಲ ಗ್ರಾಮಗಳ ರೈತರು ಪೂರ್ವೀಕರಿಂದ ಬಂದ ಜಮೀನಿನಲ್ಲಿ ವಕ್ಫ್ ಸೇರಿಸಲು ಅಧಿಕಾರಿಗಳು ಮುಂದಾಗಿದ್ಧಾರೆ ಎಂಬ ಆರೋಪ ಮಾಡಿದ್ದಾರೆ.
ನಮ್ಮ ಜಮೀನುಗಳನ್ನು ವಕ್ಫ್ ಬೋರ್ಡಿಗೆ ಸೇರಿಸಲು ಹುನ್ನಾರ ಮಾಡಲಾಗುತ್ತಿದೆ ಎಂದು ನೂರಾರು ರೈತರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನು ವಕ್ಫ್ ಬೋರ್ಡ್ಗೆ ಸೇರಿಸಲು ಜಿಲ್ಲಾಡಳಿತ ಸದ್ದಿಲ್ಲದೇ ತಯಾರಿ ನಡೆಸಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಜಮೀನನ್ನು ಶಾ ಅಮೀನುದ್ದೀನ್ ದರ್ಗಾ ಎಂದು ದಾಖಲೆ ತೋರಿಸುತ್ತಿದ್ದಾರೆ. ಅಸಲಿಗೆ ಈ ದರ್ಗಾ ನಮ್ಮೂರಲ್ಲೇ ಇಲ್ಲ ಹಾಗೂ ನಮ್ಮ ಜಮೀನಿನಲ್ಲಿ ಇಲ್ಲ ಎಂದು ರೈತರು ಆಕ್ರೋಶಗೊಂಡಿದ್ದಾರೆ.
ಹೊನವಾಡ ಗ್ರಾಮದ ಸುಮಾರು 43 ಸರ್ವೇ ನಂಬರ್ ಗಳಲ್ಲಿನ 1200 ಎಕರೆ ಪ್ರದೇಶದ ಅಮಿನುದ್ದೀನ್ ದರ್ಗಾ ಎಂದು ಇದು ವಿಜಯಪುರ ನಗರದ ಮಹಲ್ ಭಾಗಾಯತ್ ಪ್ರದೇಶ ಎಂದು ಸರ್ಕಾರಿ ದಾಖಲೆಗಳಲ್ಲಿದೆ. ಆದರೆ ಹೊನವಾಡ ಗ್ರಾಮ ತಿಕೋಟಾ ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿರೋ 1200 ಎಕರೆ ಪ್ರದೇಶ ವಕ್ಪ್ ಬೋರ್ಡಿಗೆ ಸೇರಿಸೋ ಹುನ್ನಾರವಿದು ಎಂದು ರೈತರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ಧಾರೆ.
ಕಳೆದ ಇದೇ ಅಕ್ಟೋಬರ್ 7 ಹಾಗೂ 8 ರಂದು ವಕ್ಫ್ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಆಸ್ತಿಗಳ ಮಾಹಿತಿ ಪಡೆದಿದ್ದರು. ವಕ್ಫ್ ಆಸ್ತಿಯ ಭೂಮಿ ಸರ್ವೆ, ಫ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆಗೆ ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ವಕ್ಪ ಸಚಿವ ಜಮೀರ್ ಅಹ್ಮದ್ ವಿಜಯಪುರದಲ್ಲಿ ವಕ್ಪ ಅದಾಲತ್, ವಕ್ಪ ಇಲಾಖೆ ಸಭೆ ನಡೆಸಿದ್ದ ವೇಳೆ ಖಡಕ್ ಸೂಚನೆ ಮೂಲಕ ಸಭೆಯಲ್ಲಿ ವಕ್ಪ ಆಸ್ತಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ, ಪಹಣಿಗಳಲ್ಲಿ ಖಾತೆ ಬದಲಾವಣೆ, ಫ್ಲ್ಯಾಗಿಂಗ್ ಕಾರ್ಯಕ್ಕೆ ಆದೇಶ ಮಾಡಿದ್ದರು. ಮುಂದಿನ 30 ದಿನಗಳಲ್ಲಿ ಸರ್ವೇ, ಫ್ಲ್ಯಾಗಿಂಗ್ ಕಾರ್ಯ ಮುಗಿಸುವಂತೆ ಟಾಸ್ಕ್ ನೀಡಿದ್ದರು. ಸಚಿವರ ಈ ಕಾರ್ಯ ವೈಖರಿ ಜಿಲ್ಲೆಯ ರೈತರಲ್ಲಿ ಭಯ ಆತಂಕ ಮೂಡಿಸಿದೆ. ಅದರಲ್ಲೂ ಹೊನವಾಡ ಗ್ರಾಮದಲ್ಲಿ 1200 ಎಕೆರ ಭೂಮಿಯನ್ನು ನಮ್ಮಿಂದ ಕಿತ್ತುಕೊಳ್ಳಳು ಹುನ್ನಾರ ನಡೆಸಲಾಗಿದೆ ಎಂದು ರೈತರು ಸಿಡಿಮಿಡಿಗೊಂಡಿದ್ದಾರೆ.
ಸಮಸ್ಯೆ ಕುರಿತು ವಕ್ಫ್ ಬೋರ್ಡಿಗೆ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ನಮಗೆ ನ್ಯಾಯ ಸಿಗಲ್ಲ. ನಮ್ಮ ಪೂರ್ವೀಕರ ಕಾಲದಿಂದಲೇ ಎಲ್ಲಾ ದಾಖಲಾತಿಗಳು ನಮ್ಮ ಕುಟುಂಬದವರ ಹೆಸರಿನಲ್ಲಿವೆ. ಆದರೆ ಯಾವಾಗ ವಕ್ಪ್ ಬೋರ್ಡ್ ಎಂದು ದಾಖಲು ಮಾಡಿಕೊಂಡರೋ ಗೊತ್ತಿಲ್ಲ. ನಾವು ನಮ್ಮ ಹಿರಿಯರು ವಕ್ಪ್ ಬೋರ್ಡಿಗೆ ದಾನ ನೀಡಿಲ್ಲ, ಮಾರಾಟ ಮಾಡಿಲ್ಲ. ದಾಖಲೆಗಳನ್ನು ತಿರುಚಲಾಗಿದೆ ಎಂದು ಎನ್ನುವುದು ರೈತರು ಆರೋಪ.
ವಿಜಯಪುರ ಜಿಲ್ಲೆಯಲ್ಲಿನ ವಕ್ಫ್ ಬೋರ್ಡಿನ ಆಸ್ತಿಯಂದು ಅದನ್ನು ವಕ್ಪ್ ಗೆ ವಶಪಡಿಸಿಕೊಳ್ಳಬೇಕು. ವಕ್ಫ್ ಆಸ್ತಿಗಳ ಖಾತಾ ಮಾಡಲು ಹಾಗೂ ಭೂಮಿ ಸರ್ವೆ, ಫ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆಗೆ ಜಿಲ್ಲಾಡಳಿತ ಮುಂದಾಗಿರೋದು ಸಮಸ್ಯೆಗೆ ಕಾರಣವಾಗಿದೆ. ಈ ದಿಸೆಯಲ್ಲಿ ಜಿಲ್ಲೆಯ ಕೆಲ ಭಾಗಗಳಲ್ಲಿ ರೈತರಿಗೆ ಜಿಲ್ಲಾಡಳಿತದಿಂದ ನೊಟೀಸ್ ನೀಡಲಾಗಿದೆ. ಇದೇ ರೀತಿ ನಮ್ಮೂರಿನ ಜಮೀನಿಗಳ ವಶಕ್ಕೆ ನೊಟೀಸ್ ಜಾರಿ ಮಾಡಬಹುದು. ಹಾಗಾಗಿ ನಾವು ಹೋರಾಟದ ಹಾದಿ ಹಿಡಿದಿದ್ದೇವೆ ಎಂದು ಹೊನವಾಡ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ ಹೋರಾಟದ ತಯಾರಿಗೆ ಮುಂದಾಗಿದ್ಧಾರೆ.
ಇನ್ನು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಎಂಬಿ ಪಾಟೀಲ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದು, ಹೊಂದಾಣಿಕಗೆ ಬಾರದ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲಾಗುವುದಿಲ್ಲ. ನೋಟಿಸ್ ಪಡೆದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ. ಮುಂದಿನವಾರ ಜಿಲ್ಲಾ ಮಟ್ಟದ ಸಭೆ ನಡೆಸಿ, ಕೂಲಂಕಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಜನರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ. ನಮ್ಮೆಲ್ಲ, ರೈತರ, ಸಾರ್ವಜನಿಕರ ಹಕ್ಕುಗಳನ್ನು ಸುರಕ್ಷಿತವಾಗಿರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಕ್ಫ್ ಆಸ್ತಿ ಎಂದು ನೋಟೀಸು ಬಂದರೆ ಆತಂಕ ಬೇಡ
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ ಕೆಲವು ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸು ಬಂದಿರುವ ಹಿನ್ನೆಲೆಯಲ್ಲಿ ರೈತರು ಈದಿನ ವಿಜಯಪುರದ ನಿವಾಸದಲ್ಲಿ ನನ್ನನ್ನು ಭೇಟಿಮಾಡಿ ಆತಂಕ ವ್ಯಕ್ತಪಡಿಸದರು.
ಹೊಂದಾಣಿಕಗೆ ಬಾರದ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್ ಹೆಸರಿನಲ್ಲಿ… pic.twitter.com/Cr2lLXRAmx
— M B Patil (@MBPatil) October 20, 2024
ಇನ್ನು ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಇಷ್ಟು ದಿನ ಸರ್ಕಾರಿ ಜಮೀನು, ಆಸ್ತಿಗಳಿಗೆ ಕಣ್ಣು ಹಾಕುತ್ತಿದ್ದ ವಕ್ಫ್ ಬೋರ್ಡ್ ಇದೀಗ ರೈತರ ಜಮೀನನ್ನೂ ಕಬಳಿಸಲು ಹೊರಟಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿದ್ದರೆ, ತುಷ್ಟೀಕರಣ ರಾಜಕೀಯಕ್ಕಾಗಿ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಮತ್ತೊಂದು ಕಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರೋತ್ಸಾಹದಿಂದಾಗಿ ಅನ್ನದಾತರ ಜಮೀನನ್ನೇ ಟಾರ್ಗೆಟ್ ಮಾಡಿ ರೈತರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟು ಕಬ್ಜ ಮಾಡಲು ವಕ್ಫ್ ಮಂಡಳಿ ಹೊರಟಿದೆ. ವಕ್ಫ್ ನೋಟಿಸ್ ಕೊಟ್ಟ ಕೂಡಲೇ ಸರ್ಕಾರಿ ದಾಖಲಾತಿಗಳನ್ನು ತೋರಿಸುವ ಸ್ಥಿತಿ ನಮ್ಮ ನಾಡಿನ ಅನ್ನದಾತರಿಗೆ ಬಂದಿದೆ.
ಇಷ್ಟು ದಿನ ಸರ್ಕಾರಿ ಜಮೀನು, ಆಸ್ತಿಗಳಿಗೆ ಕಣ್ಣು ಹಾಕುತ್ತಿದ್ದ ವಕ್ಫ್ ಬೋರ್ಡ್ ಇದೀಗ ರೈತರ ಜಮೀನನ್ನೂ ಕಬಳಿಸಲು ಹೊರಟಿದೆ.
ಒಂದು ಕಡೆ ಪ್ರಧಾನಿ ಶ್ರೀ @narendramodi ಅವರ ಎನ್‌ಡಿಎ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿದ್ದರೆ, ತುಷ್ಟೀಕರಣ ರಾಜಕೀಯಕ್ಕಾಗಿ @INCIndia ಇದನ್ನು ವಿರೋಧಿಸುತ್ತಿದೆ.
ಮತ್ತೊಂದು ಕಡೆ… https://t.co/9VlBQSDJpJ
— BJP Karnataka (@BJP4Karnataka) October 21, 2024
ಭ್ರಷ್ಟ ಸಿದ್ದರಾಮಯ್ಯ ಅವರೇ, ಮೂಡ ಸೈಟನ್ನು ತಮ್ಮ ಪತ್ನಿ ಹೆಸರಿಗೆ ಬರೆದಂತೆ, ಕರ್ನಾಟಕವನ್ನು ತಮ್ಮ ಮತಬ್ಯಾಂಕ್‌ಗಾಗಿ ವಕ್ಫ್ ಬೋರ್ಡ್ ಹೆಸರಿಗೆ ಬರೆಯುವ ಪ್ರಯತ್ನಕ್ಕೆ ಹೋಗಬೇಡಿ. ನಿಮ್ಮ ತುಷ್ಟೀಕರಣ ರಾಜಕೀಯಕ್ಕೆ ನಾಡಿನ ಅನ್ನದಾತರು ಸಿಡಿದೇಳುವ ದಿನ ದೂರವಿಲ್ಲ ಎಂದು ಟ್ವೀಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ