ವಿಜಯಪುರದ ಭೂತನಾಳ ಕೆರೆಯಲ್ಲಿ 6 ಶವ ಪತ್ತೆ ಕೇಸ್​​: ತಾಯಿ ಮತ್ತು ಮಕ್ಕಳ ಸಾವಿಗೆ ಕಾರಣ ರಿವೀಲ್​​

ವಿಜಯಪುರದ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಶವ ಪತ್ತೆಯಾದ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪತಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಹೀಗಿದ್ದರೂ ಗ್ರಾಮದಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಗಾಗಿ ಪತಿ ಹುಡುಕಾಟ ನಡೆಸಿದ್ದ. ಅಲ್ಲೆಲ್ಲೂ ಅವರ ಸುಳಿವು ಸಿಗದ ಕಾರಣ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿನಾಪತ್ತೆ ಬಗ್ಗೆ ದೂರು ನೀಡಿದ್ದ ಎನ್ನಲಾಗಿದೆ.

ವಿಜಯಪುರದ ಭೂತನಾಳ ಕೆರೆಯಲ್ಲಿ 6 ಶವ ಪತ್ತೆ ಕೇಸ್​​: ತಾಯಿ ಮತ್ತು ಮಕ್ಕಳ ಸಾವಿಗೆ ಕಾರಣ ರಿವೀಲ್​​
ಮೃತರು
Image Credit source: Tv9 Kannada
Edited By:

Updated on: Aug 26, 2026 | 3:38 PM

ವಿಜಯಪುರ, ಆಗಸ್ಟ್​​ 26: ವಿಜಯಪುರ ನಗರದ ಹೊರ ಭಾಗದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಶವ ಪತ್ತೆ ವಿಚಾರ ಸಂಬಂಧ ಕೆಲ ಪ್ರಾಥಮಿಕ ಮಾಹಿತಿಗಳು ತನಿಖೆ ವೇಳೆ ಸಿಕ್ಕಿವೆ. ತಾಯಿ ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಉರ್ಫ್ ತಿಪ್ಪರಾಯ (10), ವಿಕಾಸ (5) ಮತ್ತು ಸಾನಿಕಾ (7) ಅವರ ಸಾವಿಗೆ ಕೌಟುಂಬಿಕ ಕಲಹವೇ ಕಾರಣ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪತಿ ಮಲಕಾರಿ ಜಾಲಗೇರಿ ಮತ್ತು ಶೋಭಾ ನಡುವೆ ಆಗಸ್ಟ್​​ 23ರ ರಾತ್ರಿ ಜಗಳವಾಗಿತ್ತು. ಮಾರನೆಯ ದಿನ ಶ್ರಾವಣ ಸೋಮವಾರವಾಗಿರುವ ಕಾರಣ ದೇವರ ಪೂಜೆಗೆ ನೈವೇದ್ಯ ಹಾಗೂ ಕೂಲಿ ಕೆಲಸಕ್ಕೆ ಹೋಗಲು ಬುತ್ತಿ ಮಾಡಿಕೊಡುವ ಸಂಬಂಧ ಗಲಾಟೆ ನಡೆದಿತ್ತು. ಆ ಬಳಿಕ ಮಕ್ಕಳ ಜೊತೆ ಶೋಭಾ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಪತ್ನಿ ಮತ್ತು ಮಕ್ಕಳಿಗಾಗಿ ಹುಡುಕಾಡಿದ್ದ ಮಲಕಾರಿ

ಗ್ರಾಮದಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಪತ್ನಿ ಶೋಭಾ ಹಾಗೂ ಮಕ್ಕಳಿಗಾಗಿ ಮಲಕಾರಿ ಜಾಲಗೇರಿ ಹುಡುಕಾಟ ನಡೆಸಿದ್ದ. ಅಲ್ಲೆಲ್ಲೂ ಅವರ ಸುಳಿವು ಸಿಗದ ಕಾರಣ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆಂದು ದೂರು ನೀಡಿದ್ದ. ಈ ನಡುವೆ ಭೂತನಾಳ ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ. ಸಂಪೂರ್ಣ ತನಿಖೆಯ ಬಳಿಕೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ವಿಜಯಪುರ ಪೊಲೀಸ್​​ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!

ಮಲಕಾರಿ ವಿರುದ್ಧವೇ ಶೋಭಾ ಕುಟುಂಬಸ್ಥರ ಆರೋಪ

ವಿಷಯ ತಿಳಿಯುತ್ತಲೇ ಮೃತ ಶೋಭಾ ತವರು ಮನೆಯವರು ಆಸ್ಪತ್ರೆಗೆ ಆಗಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿತ್ಯ ಕುಡಿದೂ ಬಂದು ಮಲಕಾರಿ ಶೋಭಾ ಮೇಲೆ ಹಲ್ಲೆ ನಡೆಸುತ್ತಿದ್ದ. ಸಾಲದ್ದಕ್ಕೆ ಪರಸ್ತ್ರೀ ಜೊತೆಗೆ ಆತನಿಗೆ ಅಕ್ರಮ ಸಂಬಂಧವೂ ಇತ್ತು. ಹೀಗಾಗಿ ಶೋಭಾಗೆ ಕಿರುಕುಳ ನೀಡುತ್ತಿದ್ದ ಎಂದವರು ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಆದರ್ಶ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us