AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!

ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಜನರ ಮೃತದೇಹಗಳು ಪತ್ತೆಯಾಗಿದ್ದು, ಇಡೀ ನಗರ ಬೆಚ್ಚಿಬಿದ್ದಿದೆ. ಕಳೆದ ಆಗಸ್ಟ್ 24ರಿಂದ ಕಾಣೆಯಾಗಿದ್ದ ಶೋಭಾ ಜಾಲಗೇರಿ ಹಾಗೂ ಅವರ ಐವರು ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಸಂಶಯ ವ್ಯಕ್ತವಾಗಿದ್ದು, ಆದರ್ಶ ನಗರ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಜಯಪುರ: ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!
ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Aug 26, 2026 | 10:36 AM

Share

ಮುಖ್ಯಾಂಶಗಳು

  • ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವಗಳು ಪತ್ತೆಯಾಗಿವೆ.
  • ಆಗಸ್ಟ್ 24ರಿಂದ ನಾಪತ್ತೆಯಾಗಿದ್ದ ಶೋಭಾ ಹಾಗೂ ಐದು ಮಕ್ಕಳು ಮೃತಪಟ್ಟಿದ್ದಾರೆ.
  • ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣವೇ ಎಂಬ ಆಂಗಲ್‌ನಲ್ಲಿ ಪೊಲೀಸರ ತನಿಖೆ.

ವಿಜಯಪುರ, ಆಗಸ್ಟ್ 26: ನಗರದ (Vijayapur) ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಇಬ್ಬರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿ ಒಂದೇ ಕುಟುಂಬದವರೆನ್ನಲಾದ ಆರು ಜನರ ಮೃತದೇಹಗಳು ತೇಲಿ ಬಂದಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಕೆರೆಯ ಅಂಚಿನಲ್ಲಿ ಶವಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಜೆ ವೇಳೆ ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಆಗಸ್ಟ್ 24ರಿಂದ ಮಿಸ್ಸಿಂಗ್ ಆಗಿದ್ದ ಕುಟುಂಬ!

ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ-10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ. ಈ ಕುಟುಂಬವು ಕಳೆದ ಆಗಸ್ಟ್ 24ರಿಂದ ಕಾಣೆಯಾಗಿತ್ತು ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶೋಭಾ ಅವರಿಗೆ ಗಂಡ ಮಲಕಾರಿ ಭೀಮರಾಯ ಜಾಲಗೇರಿ ಜೊತೆಗೆ ತೀವ್ರ ಕೌಟುಂಬಿಕ ಜಗಳವಾಗಿತ್ತು. ಗಂಡನೊಂದಿಗೆ ಜಗಳವಾಡಿದ ನಂತರ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮಕ್ಕಳೊಂದಿಗೆ ಶೋಭಾ ಹೊರಟು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನಿಗೂಢ ಸಾವು, ಹತ್ತಾರು ಅನುಮಾನ!

ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಬಾಲಕರಿರುವುದು ಧೃಡಪಟ್ಟಿದೆ. ಈ ಅನಾಹುತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕೆರೆ ನೋಡಲು ಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆಯೇ? ಅಥವಾ ಕುಟುಂಬ ಸಮೇತರಾಗಿ ಕೆರೆಗೆ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಯಾರಾದರೂ ಕೊಲೆ ಮಾಡಿ ಕೆರೆಯಲ್ಲಿ ಶವಗಳನ್ನು ಎಸೆದು ಪರಾರಿಯಾಗಿದ್ದಾರೆಯೇ? ಎಂಬ ಸಾಲು ಸಾಲು ಪ್ರಶ್ನೆಗಳು ಮತ್ತು ಸಂಶಯಗಳು ಸಾರ್ವಜನಿಕರಲ್ಲಿ ವ್ಯಕ್ತವಾಗಿವೆ. ಪೊಲೀಸರು ಶವಗಳ ಗುರುತು ಪತ್ತೆಗೆ ತೀವ್ರ ಜಾಲ ಬೀಸಿದ್ದು, ಸುತ್ತಮುತ್ತಲಿನ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕಾಣೆಯಾದ ದೂರುಗಳನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ನಂತರವಷ್ಟೇ ಈ ಸರಣಿ ಸಾವಿನ ಹಿಂದಿನ ನೈಜ ಸತ್ಯಾಂಶ ಹೊರಬರಬೇಕಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us