
ವಿಜಯಪುರ, ನ.05: ವಿಜಯಪುರದಲ್ಲಿ ಮತ್ತೆ ನೆತ್ತರಿನ ಓಕುಳಿಯಾಗಿದೆ. ಗ್ಯಾಂಗ್‌ವಾರ್ ಹಾಗೂ ಸರಣಿ ಅಪರಾಧ ಕೃತ್ಯಗಳಿಗೆ ಹೆಸರುವಾಸಿಯಾಗಿದ್ದ ನಗರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದ್ದು, ದುಷ್ಕರ್ಮಿಗಳು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ನಗರದ ಗ್ಯಾಂಗ್ ಬಾವಡಿ ನಿವಾಸಿ ಯಾಸೀನ್ ಠಕ್ಕೆ ಕೊಲೆಯಾದ ದುರದೃಷ್ಟಕರ ಯುವಕ. ನಗರದ ಮುಂಡೆವಾಡಿ ಆಸ್ಪತ್ರೆಯ ಸಮೀಪ ಈ ಘಟನೆ ಸಂಭವಿಸಿದ್ದು, ಹತ್ಯೆಯಿಂದಾಗಿ ಸ್ಥಳೀಯ ಪ್ರದೇಶದಲ್ಲಿ ತೀವ್ರ ಆತಂಕ ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸ್ ಮೂಲಗಳ ಪ್ರಕಾರ, ಯಾಸೀನ್ ಠಕ್ಕೆ ಅವರು ತಮ್ಮ ಸ್ಕೂಟಿಯಲ್ಲಿ ಮುಂಡೆವಾಡಿ ಆಸ್ಪತ್ರೆ ರಸ್ತೆಯಲ್ಲಿ ತೆರಳುತ್ತಿದ್ದಾಗ, ಹಠಾತ್ತಾಗಿ ಎದುರಾದ ದುಷ್ಕರ್ಮಿಗಳು ವಾಹನವನ್ನು ತಡೆದು ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಯಾಸೀನ್ ಅವರ ಮೇಲೆ ಸತತ 2 ಸುತ್ತು ಫೈರಿಂಗ್ ನಡೆಸಿದ್ದಾರೆ. ಗನ್‌ನಿಂದ ಚಿಮ್ಮಿದ ಗುಂಡುಗಳು ನೇರವಾಗಿ ಯಾಸೀನ್ ಅವರ ಎದೆಗೆ ತಗುಲಿದ್ದರಿಂದ, ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ಎರಡು ರೌಂಡ್ ಖಾಲಿ ಬುಲೆಟ್ ಕವರ್‌ಗಳು ಲಭ್ಯವಾಗಿವೆ.
ವಿಜಯಪುರ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಭೀಕರ ಹತ್ಯೆಯ ಹಿಂದೆ ಹಳೆಯ ದ್ವೇಷ ಅಡಗಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಸಂಭವಿಸಿದ್ದ ಡಿಜೆ ಸೌಂಡ್ ಸಿಸ್ಟಮ್ ವಿಚಾರಕ್ಕೆ ಸಂಬಂಧಿಸಿದಂತೆ ಯಾಸೀನ್ ಹಾಗೂ ಇನ್ನೊಂದು ಗುಂಪಿನ ನಡುವೆ ಭಾರಿ ಗಲಾಟೆ ನಡೆದಿತ್ತು. ಆ ಗಲಾಟೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಎದುರಾಳಿ ಗುಂಪು, ಸೂಕ್ತ ಸಮಯಕ್ಕಾಗಿ ಕಾಯ್ದು ಯಾಸೀನ್‌ನನ್ನು ಸ್ಕೂಟಿಯಲ್ಲಿ ಒಂಟಿಯಾಗಿ ಸರಣಿ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಗಾಂಧಿಚೌಕ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಸ್ಪತ್ರೆ ಹಾಗೂ ಗ್ಯಾಂಗ್ ಬಾವಡಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್: 6 ಮಂದಿ ಖತರ್ನಾಕ್ ಗಾಂಜಾ ಪೆಡ್ಲರ್‌ಗಳ ಬಂಧನ
ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಸಣ್ಣ ಸಣ್ಣ ಗಲಾಟೆಗಳು ಸರಣಿ ಕೊಲೆ ಹಾಗೂ ಶೂಟೌಟ್ ಇದೇ ಮೊದಲೇನಲ್ಲ. ಜಿಲ್ಲೆಯಲ್ಲಿ ಬಂದೂಕು ಹಾಗೂ ಗ್ಯಾಂಗ್‌ವಾರ್ ಸಂಸ್ಕೃತಿಗೆ ದಶಕಗಳ ಭೀಕರ ಇತಿಹಾಸವಿದೆ. ವಿಜಯಪುರದ ಇತಿಹಾಸದಲ್ಲಿ ಗ್ಯಾಂಗ್‌ವಾರ್‌ಗಳಲ್ಲಿ ಭೀಮಾ ತೀರದ ರೌಡಿಶೀಟರ್‌ಗಳಾದ ಚಂದಪ್ಪ ಹರಿಜನ ಹಾಗೂ ಭಾಗಪ್ಪ ಹರಿಜನ ನಡುವಿನ ಕಾದಾಟ ಪ್ರಮುಖವಾದದ್ದು. ಭಾಗಪ್ಪ ಹರಿಜನ ಮೇಲೆ ಕೋರ್ಟ್ ಆವರಣದಲ್ಲೇ 5 ಸುತ್ತು ಗುಂಡು ಹಾರಿಸಿ ಕೊಲೆ ಯತ್ನ ನಡೆಸಲಾಗಿತ್ತು. ಇನ್ನು ಚಡಚಣ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ರೌಡಿಶೀಟರ್ ಭೀಮನ್‌ಗೌಡ ಬಿರಾದಾರ್ ಅವರನ್ನು ಕಟಿಂಗ್ ಶಾಪ್ ಒಳಗೆ ನುಗ್ಗಿ, ಕಣ್ಣಿಗೆ ಖಾರದ ಪುಡಿ ಎರಚಿ ಪಾಯಿಂಟ್ ಬ್ಲಾಂಕ್‌ನಲ್ಲಿ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ವಿಜಯಪುರದಲ್ಲಿ ಕಂಟ್ರಿಮೇಡ್ ಪಿಸ್ತೂಲ್‌ಗಳು ಸುಲಭವಾಗಿ ಲಭ್ಯವಾಗುತ್ತಿದ್ದು, ಕ್ಷುಲ್ಲಕ ರಿಯಲ್ ಎಸ್ಟೇಟ್ ವಿವಾದ, ವೈಯಕ್ತಿಕ ದ್ವೇಷ ಹಾಗೂ ಡಿಜೆ ಸೌಂಡ್ ಗಲಾಟೆಗಳಿಗೂ ಬಂದೂಕುಗಳನ್ನು ಬಳಸಿ ಕೊಲೆ ಮಾಡುವ ಪ್ರವೃತ್ತಿ ಬೆಳೆದುಬಂದಿದೆ. ಇದೀಗ ಡಿಜೆ ವಿಚಾರದ ಸಣ್ಣ ಗಲಾಟೆಯೂ ಯಾಸೀನ್ ಠಕ್ಕೆ ಎಂಬ ಯುವಕನ ಜೀವ ಬಲಿ ಪಡೆದಿದ್ದು, ಬಂದೂಕು ಸಂಸ್ಕೃತಿಗೆ ಕಡಿವಾಣ ಹಾಕಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ