ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಆರಂಭ: 174 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ ಮತದಾನ
ಪಾಲಿಕೆ ವ್ಯಾಪ್ತಿಯಲ್ಲಿ ಮತದಾನಕ್ಕೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 303 ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಒಟ್ಟು 35 ಸದಸ್ಯರು ಪಾಲಿಕೆ ಅಧಿಕಾರಕ್ಕಾಗಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ 303 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಆದ್ರೆ ಮತದಾನ ಆರಂಭವಾದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಆಗಮಿಸಿಲ್ಲ. ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಮತದಾನ ವೇಗ ಪಡೆದುಕೊಳ್ಳೋ ಸಾಧ್ಯತೆ ಇದೆ.
ಮತದಾನ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೂ ಆಗಿರೂ ಡಾ ವಿಜಯಮಹಾಂತೇಶ ದಾನಮ್ಮನವರ ಹಾಗೂ ಆಧಿಕಾರಿಗಳ ತಂಡ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. 35 ವಾರ್ಡ್ ಗಳಲ್ಲಿಯೂ ಚುನಾವಣೆ ನಡೆಯುತ್ತಿದೆ. ಯಾವುದೇ ವಾರ್ಡ್ ನಲ್ಲಿಯೂ ಅವಿರೋಧ ಆಯ್ಕೆಯಾಗಿಲ್ಲಾ. ಇನ್ನು ಮಹಾನಗರ ಪಾಲಿಕೆಯ ಚುನಾವಣೆಗೆ ಒಟ್ಟು 2,88,288 ಮತದಾರರು ತಮ್ಮ ಹಕ್ಕಲು ಚಲಾವಣೆ ಮಾಡಲಿದ್ದಾರೆ. ಈ ಪೈಕಿ 1,43, 616 ಪುರುಷರು, 1,44,499 ಮಹಿಳಾ ಮತದಾರರು, 100 ಇತರೆ ಮತದಾರರು ಹಾಗೂ 73 ಸೇವಾ ಮತದಾರರಿದ್ದಾರೆ. 1,454 ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಮತದಾನಕ್ಕೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 303 ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಒಟ್ಟು 303 ಮತಗಟ್ಟೆಗಳ ಸುತ್ತಮುತ್ತ 100 ಮೀಟರ್ ನಿಷೇದಾಜ್ಞೆ ಜಾರಿ ಮಾಡಿಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ . ಅಕ್ಟೋಬರ್ 26 ರ ಬೆಳಿಗ್ಗೆ 7 ಗಂಟೆಯಿಂದ 28 ರಂದು ಮತದಾನ ಮುಕ್ತಾಯವಾಗೋವರೆಗೂ ನಿಷೇದಾಜ್ಞೆ ಜಾರಿಯಲ್ಲಿರಲಿದೆ. ಮತಗಟ್ಟೆ ವ್ಯಾಪ್ತಿ 100 ಮೀಟರ್ ನಲ್ಲಿ ಪ್ರಚಾರ ಮಾಡುವಂತಿಲ್ಲಾ ಎಂಬುದು ಸೇರಿದಂತೆ ಇತರೆ ಸೂಚನೆ ಪಾಲಿಸಲು ಆದೇಶ ಮಾಡಲಾಗಿದೆ. ಇನ್ನು ಮದುವೆ ಮತ್ತು ಧಾರ್ಮಿಕ ಕಾರ್ಯಗಳಿಗೆ ನೀತಿ ಸಂಹಿತೆ ಉಲ್ಲಂಘಿಸದಂತೆ ಆಚರಣೆ ಮಾಡಬೇಕೆಂದು ಚುನಾವಣಾಧಿಕಾರಿಗಳು ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಹರ್ಯಾಣ ಗೃಹ ಸಚಿವರ 8 ನಿಮಿಷದ ಭಾಷಣಕ್ಕೆ 4 ಬಾರಿ ಅಡ್ಡಿ ಪಡಿಸಿದ ಅಮಿತ್ ಶಾ
ಇಷ್ಟರ ಮದ್ಯೆ ಶವ ಸಂಸ್ಕಾರ ಕಾರ್ಯಕ್ಕೆ ನಿಷೇದಾಜ್ಞೆಯಿಂದ ವಿನಾಯತಿಯನ್ನೂ ನೀಡಲಾಗಿದೆ. ಇಂದು ಮಯತದಾನದ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿಯೂ ಆದೇಶ ಜಾರಿ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಪಾರದರ್ಶಕ ಚುನಾವಣೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಂಡಿದೆ. ಎಸ್ಪಿ ಆನಂದಕುಮಾರ ನೇತೃತ್ವದಲ್ಲಿ 1 ಎಎಸ್ಪಿ, 4 ಡಿವೈಎಸ್ಪಿ, 9 ಸಿಪಿಐ, 27 ಪಿಎಸೈ, 82 ಎಎಸ್ಐ, 58 ಹೆಡ್ ಕಾನ್ಸಸ್ಟೇಬಲ್, 394 ಕಾನ್ಸಸ್ಟೇಬಲ್ಸ್, 120 ಹೋಂಗಾರ್ಡ್ಸ್ ಸೇರಿದಂತೆ ಒಟ್ಟು 700 ಸಿಬ್ಬಂದಿಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಇದರ ಜೊತೆಗೆ 4 ಕೆಎಸ್ಆರ್ಪಿ ತುಕಡಿ ಹಾಗೂ 8 ಡಿಎಆರ್ ತುಕಡಿಗಳನ್ನು ಸಹ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಅಖಾಡಲ್ಲಿ ಒಟ್ಟು 174 ಅಭ್ಯರ್ಥಿಗಳು ಇದ್ದಾರೆ. ಈ ಪೈಕಿ ಕಾಂಗ್ರೆಸ್ 35, ಬಿಜೆಪಿ 33, ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಕೆ ಆರ್ ಎಸ್ 3, ಜನತಾ ಪಾರ್ಟಿ 3, ಎಸ್ ಡಿ ಪಿಐ 2, ಬಿಎಸ್ಪಿ 1 ಹಾಗೂ 58 ಪಕ್ಷೇತರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಯ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಅಕ್ಟೋಬರ್ 31 ರಂದು ನಡೆಯಲಿರೋ ಮತ ಎಣಿಕೆಯ ಬಳಿಕ ತಿಳಿದು ಬರಲಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
Published On - 8:14 am, Fri, 28 October 22