ಹರಕೆ ಕಟ್ಟಿಬಿಟ್ಟಿದ್ದ ಗ್ರಾಮದ ದೇವರ ಕುದುರೆ ಸಾವು.. ಊರಿಗೆ ಊರೇ ಸೀಲ್‌ಡೌನ್, ಹೆಚ್ಚಾಯ್ತು ಆತಂಕ
ಆ ಗ್ರಾಮದಲ್ಲಿ ಯಾವುದೇ ಮಹಾಮಾರಿ ಕಾಯಿಲೆ ಬಂದ್ರೂ ದೇವರಿಗೆ ಹರಕೆ ಕಟ್ಟಿಕೊಂಡು ದೇವರ ಹೆಸರಿನಲ್ಲಿ ಕುದುರೆಯೊಂದನ್ನ ಊರು ಸಂಚರಿಸಲು ಬಿಡಲಾಗುತ್ತಿತ್ತು. ಹೀಗೆ ಕೊರೊನಾ ತೊಲಗಲೆಂದು ಹರಕೆ ಕಟ್ಟಿಕೊಂಡಿದ್ದ ಗ್ರಾಮಸ್ಥರು ದೇವರ ಹೆಸರಿನಲ್ಲಿ ಕುದುರೆ ಸಂಚರಿಸಲು ಬಿಟ್ಟದ್ರು. ಆದ್ರೆ ಈಗ ಆ ಕುದುರೆ ಸತ್ತಿದ್ದು, ಗ್ರಾಮದಲ್ಲಿ ಆತಂಕ ಎಂದುರಾಗಿದೆ.
ಬೆಳಗಾವಿ: ಮೃತಪಟ್ಟ ಕುದುರೆಗೆ ಹೂವುಗಳನ್ನ ಹಾಕಿ ಸ್ವಾಮೀಜಿಗಳಿಂದ ಪೂಜೆ ಪುನಸ್ಕಾರ ಮಾಡಲಾಗಿದೆ. ಕುದುರೆಯನ್ನ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ಮೆರವಣಿಗೆಯಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಮರವಣಿಗೆ ವೇಳೆ ದೈಹಿಕ ಅಂತರ, ಮಾಸ್ಕ್ ಮರೆತು ಜನರ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಊರಿಗೆ ಊರೇ ಸೀಲ್ ಡೌನ್ ಆಗಿದೆ. ಪೊಲೀಸರ ಕಾವಲು. ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವರ ಕುದುರೆ ಸಾವು, ಊರಿಗೆ ಊರೇ ಸೀಲ್‌ಡೌನ್ ಕುದುರೆ ರಾತ್ರಿ ಇಡೀ ಊರು ಸಂಚಾರ ಮಾಡಿದ್ರೆ ಕೊರೊನಾ ಕಡಿಮೆಯಾಗುತ್ತೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿತ್ತು. ಹೀಗಾಗಿ ದಷ್ಟಪುಷ್ಟವಾದ ಕುದುರೆಯನ್ನ ಮರಡಿಮಠ ಗ್ರಾಮದ ಕಾಡಸಿದ್ದೇಶ್ವರ ದೇವರ ಹೆಸರಿನಲ್ಲಿ ಬಧುವಾರ ಮಧ್ಯರಾತ್ರಿ ಸಂಚರಿಸಲು ಬಿಟ್ಟಿದ್ರು. ಕಳೆದ 51ವರ್ಷದ ಹಿಂದೆ ಮಲೇರಿಯಾ, ಪ್ಲೇಗ್ ಬಂದಾಗ ಇದೇ ರೀತಿ ಕುದುರೆಯನ್ನ ರಾತ್ರಿ ಸಂಚರಿಸಲು ಬಿಟ್ಟು ರೋಗದಿಂದ ಗ್ರಾಮಸ್ಥರು ಬಚಾವ್ ಆಗಿದ್ದರಂತೆ. ಈ ಕಾರಣಕ್ಕೆ ನಾಲ್ಕು ದಿನಗಳಿಂದ ಊರಿನ ಎಲ್ಲಾ ಬೀದಿ ಸುತ್ತುತಿತ್ತು ಈ ದೇವರ ಕುದುರೆ. ಆದ್ರೆ ಇಪ್ಪತ್ತು ವರ್ಷದ ಈ ಕುದುರೆ ನಿನ್ನೆ ಬೆಳಗ್ಗೆ ಏಕಾಏಕಿ ಮೃತಪಟ್ಟಿದೆ. ಕುದುರೆ ಸಾವಿನ ಸುದ್ದಿ ಕೇಳಿದ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮದ ಜನರು ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ನೂರಾರು ಜನರು ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೇ ಕೊವಿಡ್ ನಿಮಯ ಉಲ್ಲಂಘನೆ ಮಾಡಿ ಕುದುರೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ಇನ್ನೂ ಯಾವಾಗ ಕೊವಿಡ್ ನಿಯಮ ಉಲ್ಲಂಘನೆ ಮಾಡಿ ಕುದುರೆ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬುದು ಗೊತ್ತಾಯಿತೋ ಕೂಡಲೇ ಸ್ಥಳಕ್ಕೆ ಬಂದ ಗೋಕಾಕ್ ಗ್ರಾಮೀಣ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇತ್ತ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೂಡಲೇ ಗ್ರಾಮವನ್ನ ಸೀಲ್ ಡೌನ್ ಮಾಡಿಸಿದರು. ಇದರ ಜೊತೆಗೆ ಗ್ರಾಮದ ಯಾರು ಕೂಡ ಹೊರ ಬಾರದಂತೆ ಸೂಚನೆ ನೀಡಿ ಮುಖ್ಯ ದ್ವಾರದಲ್ಲಿ ಪೊಲೀಸರ ಕಾವಲಿಗೆ ನಿಲ್ಲಿಸಿದರು. ಇತ್ತ ಗ್ರಾಮದ ಎಲ್ಲರಿಗೂ ತಪಾಸಣೆ ಮಾಡುವಂತೆ ಆದೇಶ ಮಾಡಿದ್ದಾರೆ. 15 ಜನ ಕಾರ್ಯಕ್ರಮದ ಆಯೋಜಕರ ಮೇಲೆ ಕೇಸ್ ದಾಖಲಿಸಿ ತನಿಖೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಗ್ರಾಮಕ್ಕೆ ಪೊಲೀಸರು ಬರ್ತಿದ್ದಂತೆ ಮಠದ ಪವಾಡೇಶ್ವರ ಸ್ವಾಮೀಜಿ, ಆಯೋಜಕರು ಊರು ಬಿಟ್ಟಿದ್ದಾರೆ.
ಒಟ್ನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದರು ಮರಡಿಮಠ ಗ್ರಾಮದ ಜನ ಕ್ಯಾರೇ ಎನ್ನದೇ ಕೊವಿಡ್ ನಿಮಯ ಗಾಳಿ ತೂರಿ ಕುದುರೆ ಅಂತ್ಯಸಂಸ್ಕಾರ ಮಾಡಿದ್ದು, ಕೊರೊನಾ ಆತಂಕವನ್ನ ಹೆಚ್ಚಿಸಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಬ್ಲ್ಯಾಕ್ ಫಂಗಸ್ ಸೋಂಕಿಗೆ ಎಲ್ಲಾ ಜಿಲ್ಲೆಯಲ್ಲಿ ಸಿಗುತ್ತೆ ಚಿಕಿತ್ಸೆ